ಕಾಂಗ್ರೆಸ್ ಕಾರ್ಯಕರ್ತರಿಂದ ಸಂಭ್ರಮಾಚರಣೆ

ಸುರಪುರ: ಯಾದಗಿರಿ ಜಿಲ್ಲಾ ಪಂಚಾಯಿತಿಯ ಎರಡನೇ ಅವಧಿಗಾಗಿ ದೇವತಕಲ್ ಜಿಪಂ ಸದಸ್ಯ ರಾಜಶೇಖರ ಪಾಟೀಲ್ ವಜ್ಜಲ್ ಅವರು ಅವಿರೋಧವಾಗಿ ಆಯ್ಕೆಯಾಗಿ ನಗರಕ್ಕೆ ಆಗಮಿಸಿದ್ದ ಅವರನ್ನು ಗಾಂಧಿ ವೃತ್ತದಲ್ಲಿ ಪಕ್ಷದ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಪಟಾಕಿ ಸಿಡಿಸಿ ಅದ್ದೂರಿಯಾಗಿ ಸ್ವಾಗತಿಸಿದರು.

ನಂತರ ಕಾಂಗ್ರೆಸ್ ಪಕ್ಷದ ಕಚೇರಿ ವಸಂತ ಮಹಲ್ ಆವರಣದಲ್ಲಿ ಜಿಪಂ ನೂತನ ಅಧ್ಯಕ್ಷ ರಾಜಶೇಖರ ಪಾಟೀಲ್ ವಜ್ಜಲ್ ಅವರನ್ನು ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ ಸನ್ಮಾನಿಸಿ, ಅಭಿನಂದಿಸಿದರು.

ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ ಮಾತನಾಡಿ, ಸುರಪುರ ಮತ್ತು ಹುಣಸಗಿ ತಾಲೂಕು ಒಳಗೊಂಡಂತೆ ಯಾದಗಿರಿ ಜಿಲ್ಲೆಯಲ್ಲಿ ಈ ಬಾರಿ ಮಳೆಯ ಅಭಾವದಿಂದಾಗಿ ಬರಗಾಲ ಪರಿಸ್ಥಿತಿ ಎದುರಾಗಿದೆ. ಜಿಪಂ ನೂತನ ಅಧ್ಯಕ್ಷರು ಜಿಲ್ಲೆಯಲ್ಲಿ ರೈತರ ನೆರವಿಗೆ ಅಗತ್ಯ ಕೆಲಸಗಳನ್ನು ಸಮರೋಪಾದಿಯಲ್ಲಿ ಕೈಗೊಳ್ಳಬೇಕು ಎಂದು ಹೇಳಿದರು.

ಜಿಪಂ ಅಧ್ಯಕ್ಷ ಸ್ಥಾನ ಎರಡನೇ ಅವಧಿಗೆ ತಾಲೂಕಿಗೆ ಲಭಿಸಿರುವುದು ಸಂತೋಷವಾಗಿದ್ದು, ಸಹಕರಿಸಿದ ಪಕ್ಷದ ರಾಜ್ಯ ಮುಖಂಡರಿಗೆ, ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲೆಯ ಕಾಂಗ್ರೆಸ್ ಪಕ್ಷದ ಶಾಸಕರಿಗೆ, ಸದಸ್ಯರಿಗೆ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.

ಅಭಿನಂದನೆ ಸ್ವೀಕರಿಸಿದ ಜಿಪಂ ಅಧ್ಯಕ್ಷ ರಾಜಶೇಖರ ಪಾಟೀಲ್ ವಜ್ಜಲ್ ಮಾತನಾಡಿ, ಜಿಲ್ಲೆಯಲ್ಲಿ ಬರಗಾಲ ಪರಿಸ್ಥಿತಿ ಇದ್ದು, ಕೃಷಿ ಕ್ಷೇತ್ರಕ್ಕೆ ಪ್ರಥಮ ಆದ್ಯತೆ ನೀಡಲಾಗುವುದು. ರೈತರಿಗೆ ಅನುಕೂಲವಾಗುವ ಕೆಲಸಗಳನ್ನು ಕೈಗೊಳ್ಳವುದಾಗಿ ಹೇಳಿದರು.

ಜಿಲ್ಲಾಮಟ್ಟದ ವಿವಿಧ ಇಲಾಖೆಗಳಲ್ಲಿ ಖಾಲಿ ಹುದ್ದೆಗಳಿದ್ದು, ಜಿಲ್ಲೆಯ ಅಭಿವೃದ್ದಿಗೆ ತೊಂದರೆ ಆಗುತ್ತಿದೆ. ಇದನ್ನು ಮನಗಂಡು ಖಾಲಿ ಇರುವ ಹುದ್ದೆಗಳಿಗೆ ಸಿಬ್ಬಂದಿ ನೇಮಕಗೊಳಿಸಲು ಸಕರ್ಾರದ ಗಮನಕ್ಕೆ ತರುವ ಮೂಲಕ ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸುವುದಾಗಿ ಆಶ್ವಾಸನೆ ನೀಡಿದರು. ಮಾಜಿ ಸಂಸದ ರಾಜಾ ರಂಗಪ್ಪ ನಾಯಕ, ಎಪಿಎಂಸಿ ಅಧ್ಯಕ್ಷ ನಿಂಗಣ್ಣ ಬಾದ್ಯಾಪುರ, ಹಿರಿಯ ಮುಖಂಡರಾದ ಸೂಲಪ್ಪ ಕಮತಗಿ, ವಿಠಲ್ ಯಾದವ್, ವೆಂಕೋಬ ಯಾದವ್, ಯುವ ಮುಖಂಡ ರಾಜಾ ರೂಪಕುಮಾರ ನಾಯಕ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಿಂಗರಾಜ ಬಾಚಿಮಟ್ಟಿ ಇತರರು ಉಪಸ್ಥಿತರಿದ್ದರು.