ಹಿರಿಯರನ್ನು ಗೌರವದಿಂದ ಕಾಣಿ

ಶಹಾಪುರ: ದೇಹಕ್ಕೆ ವಯಸ್ಸಾದರೂ ಭಾವನೆ, ಅನುಭವ ಜ್ಞಾನ, ಅಧ್ಯಯನಕ್ಕೆ ವಯಸ್ಸಾಗುವುದಿಲ್ಲ. ಹಿರಿಯರು ಸಮಾಜಕ್ಕೆ ಕ್ರಿಯಾತ್ಮಕವಾದ ಮಾರ್ಗದರ್ಶನ ಮೂಲಕ ಸಮಾಜ ವ್ಯವಸ್ಥೆ ಸಶಕ್ತವಾಗಿ ಬೆಳೆಯುವಂತೆ ಮಾಡಬೇಕು ಎಂದು ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶ ಪ್ರಭು.ಎನ್.ಬಡಿಗೇರ ಸಲಹೆ ನೀಡಿದರು.

ತಾಲೂಕು ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಕಂದಾಯ ಇಲಾಖೆ ಸಹಯೋಗದಡಿ ಹಮ್ಮಿಕೊಂಡಿದ್ದ ಹಿರಿಯ ನಾಗರಿಕರ ದಿನ ಹಾಗೂ ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿದ ಅವರು, ಹಿರಿಯರಾದವರು ಯುವ ಪೀಳಿಗೆಯಲ್ಲಿ ತಮ್ಮ ಅನುಭವ ಮೂಲಕ ಮಾನವೀಯ ಮೌಲ್ಯ ಬಿತ್ತಬೇಕು. ಪ್ರಸ್ತುತ ಸ್ಥಿತಿಯಲ್ಲಿ ಪ್ರತಿಯೊಂದು ಕ್ಷೇತ್ರದಲ್ಲಿ ಅಭಿವೃದ್ಧಿ ಕಾಣುವಂತಾಗಲು ಹಿರಿಯರ ಸೇವೆ ಅಗತ್ಯವಾಗಿದೆ ಎಂದರು.

ಸಂಪನ್ಮೂಲ ವ್ಯಕ್ತಿ ಆರ್.ಎಂ.ಹೊನ್ನಾರೆಡ್ಡಿ ಮಾತನಾಡಿ, ಸಮಾಜದ ಓರೆ ಕೋರೆಗಳನ್ನು ತಿದ್ದುವಲ್ಲಿ ಹಿರಿಯರ ಪಾತ್ರ ಬಹುಮುಖ್ಯವಾಗಿದೆ. ವಿಚಾರವಂತ ವ್ಯಕ್ತಿಗಳಿಂದ ಶುದ್ಧ ವಾತಾವರಣ ನಿರ್ಮಾಣ ಮಾಡಬಹುದು. ಸರ್ಕಾರ ಹಿರಿಯ ನಾಗರಿಕರಿಗೆ ಹಲವು ಸೌಲಭ್ಯ ನೀಡಿದ್ದು, ಅದರ ಸಾರ್ಥಕ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಹೇಳಿದರು.

ವಕೀಲರ ಸಂಘದ ಅಧ್ಯಕ್ಷ ಸಾಲೋಮನ್ ಅಲ್‍ಫ್ರೆಡ್, ತಹಸೀಲ್ದಾರ್ ಸಂಗಮೇಶ ಜಿಡಗೆ, ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಹಣಮಂತರಾವ ಕುಲಕರ್ಣಿ, ತಾಪಂ ಇಒ ಡಾ.ಎಸ್.ಕೆ. ಠಕ್ಕಳಕಿ, ವಕೀಲರ ಸಂಘದ ಕಾರ್ಯದರ್ಶಿ ಸಂತೋಷ ಸತ್ಯಂಪೇಟೆ, ಕವಿತಾ ಬಡಿಗೇರ, ಸುಧಾಕರ ಗುಡಿ, ರಾಯಪ್ಪಗೌಡ ಇದ್ದರು.
ಸಾರ್ಥಕ ಸೇವೆಗೈದ ಹಿರಿಯ ನ್ಯಾಯಾವಾದಿಗಳಾದ ಶ್ರೀನಿವಾಸರಾವ ಕುಲಕರ್ಣಿ, ಭಾಸ್ಕರರಾವ ಕುಲಕರ್ಣಿ ಮುಡಬೂಳ, ಹಿರಿಯರಾದ ಗೌಡಪ್ಪಗೌಡ, ಮಲ್ಲರಡ್ಡಿ ಪಾಟೀಲ್, ಈಶ್ವರಪ್ಪ ಅಂಗಡಿ, ಬಸವರಾಜ ಹೂಗಾರ, ಶೇಖರ ಜಿ.ಪಾಟೀಲ್, ಸಾಹೇಬಗೌಡ ಪಾಟೀಲ್, ಎಸ್.ಐ. ಬಾಗೇವಾಡಿ, ರಾಮಚಂದ್ರರಾವ ಕುಲಕರ್ಣಿ, ಎಸ್.ಎಂ.ಜಾನಿ, ಮರೆಪ್ಪ ಚಂಡು, ಸಿದ್ಲಿಂಗಪ್ಪ ಅವರನ್ನು ಸನ್ಮಾನಿಸಲಾಯಿತು.