ಸಾಹಿತ್ಯಾಸಕ್ತರಲ್ಲಿ ಸಮ್ಮೇಳನ ಉತ್ಸಾಹ

ಲಕ್ಷ್ಮೀಕಾಂತ್ ಕುಲಕರ್ಣಿ ಯಾದಗಿರಿ
ಗಡಿ ಜಿಲ್ಲೆಯಲ್ಲಿ ಕನ್ನಡದ ಕಂಪು ಪಸರಿಸುತ್ತಿರುವುದು ಸಾಹಿತ್ಯಾಸಕ್ತರಲ್ಲಿ ಉತ್ಸಾಹ ಮೂಡಿಸಿದೆ. ಇದಕ್ಕೆ ಕಾರಣ ಡಿ.24, 25ರಂದು ನಡೆಯಲಿರುವ 4ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ.

ಯಾದಗಿರಿ ಜಿಲ್ಲಾ ಕೇಂದ್ರವಾದ ನಂತರ ಅಸ್ತಿತ್ವಕ್ಕೆ ಬಂದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲೆಯಲ್ಲಿ ಕನ್ನಡದ ಕಂಪು ಪಸರಿಸುವ ಕಾರ್ಯ ನಿರಂತರ ಮಾಡುತ್ತ ಸಾಹಿತ್ಯ ಪ್ರೇಮಿಗಳ ಮನಗೆದ್ದಿದೆ. ತೆಲಂಗಾಣ ಗಡಿಗೆ ಅಂಟಿಕೊಂಡ ಯಾದಗಿರಿಯಲ್ಲಿ ಮೊದಲಿನಿಂದಲೂ ತೆಲುಗು ಭಾಷೆ ಪ್ರಭಾವವಿದೆ. ವ್ಯಾಪಾರ ವಹಿವಾಟಿನ ದೃಷ್ಟಿಯಿಂದ ತೆಲಂಗಾಣ ರಾಜಧಾನಿ ಹೈದರಾಬಾದ್ಗೆ ತೆರಳುವ ಜನತೆ ಭಾವಾನಾತ್ಮಕ ನಂಟು ಹೊಂದಿದ್ದಾರೆ. ಇದರಿಂದ ಸಹಜವೇ ಗುರುಮಠಕಲ್ ಭಾಗದಲ್ಲಿ ತೆಲುಗು ಭಾಷೆ ತನ್ನ ಹಿಡಿತ ಸಾಧಿಸುತ್ತಿದ್ದು, ಕನ್ನಡ ಭಾಷೆ ಅಳಿವಿನ ಅಂಚಿನಲ್ಲಿದೆ. ಹೀಗಾಗಿ ಸಾಹಿತ್ಯ ಪರಿಷತ್ ನಿರಂತರ ಕನ್ನಡಪರ ಕಾರ್ಯಕ್ರಮ ಹಮ್ಮಿಕೊಂಡು ಭಾಷಾ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು ಎಂಬ ಅಭಿಲಾಷೆ ಜನರದ್ದಾಗಿದೆ.

ಯಾದಗಿರಿ ಅವಿಭಜಿತ ಕಲಬುರಗಿ ಜಿಲ್ಲೆಯಲ್ಲಿದ್ದಾಗ ಅಂದರೆ 2007ರ ಸಂದರ್ಭದಲ್ಲಿ ಕಸಾಪ ತಾಲೂಕು ಘಟಕದ ಸಹಯೋಗದಡಿ ಅಬ್ಬೆತುಮಕೂರಿನ ಶ್ರೀ ವಿಶ್ವಾರಾಧ್ಯ ಸಂಸ್ಥಾನ ಮಠದಲ್ಲಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸಲಾಗಿತ್ತು. ಅಂದಿನ ಶಾಸಕರಾಗಿದ್ದ ಡಾ.ವೀರಬಸವಂತರಡ್ಡಿ ಮುದ್ನಾಳ್ ಸ್ವಾಗತ ಸಮಿತಿ ಅಧ್ಯಕ್ಷ, ಮಠದ ಪೀಠಾಧಿಪತಿ ಡಾ.ಗಂಗಾಧರ ಸ್ವಾಮೀಜಿ ಗೌರವಾಧ್ಯಕ್ಷ, ಸವರ್ಾಧ್ಯಕ್ಷರಾಗಿ ಹಿರಿಯ ಸಾಹಿತಿ ಪ್ರೊ.ವಸಂತ ಕುಷ್ಟಗಿ ಅವರನ್ನು ಸವರ್ಾನುಮತದಿಂದ ಆಯ್ಕೆ ಮಾಡಿ ಯಶಸ್ವಿ ಸಮ್ಮೇಳನ ನಡೆಸಿದ್ದನ್ನು ಸ್ಮರಿಸಬಹುದು.

ಬಳಿಕ ಜಿಲ್ಲೆಯಲ್ಲಿ ತಲಾ ಮೂರು ಜಿಲ್ಲಾ ಮತ್ತು ತಾಲೂಕು ಸಮ್ಮೇಳನ ಹಮ್ಮಿಕೊಂಡು ಕನ್ನಡ ಕಾರ್ಯಕ್ರಮಗಳು ನಿರಂತರ ನಡೆದಿದ್ದರೂ ಜಿಲ್ಲೆ ಸಾಹಿತ್ಯದ ಮುಖ್ಯ ವಾಹಿನಿಗೆ ಬರುತ್ತಿಲ್ಲ ಎಂಬ ಅಳಲು ಸಾಹಿತ್ಯಾಸಕ್ತರಲ್ಲಿದೆ. ಸಗರನಾಡಿನ ನಾಡಿ ಮಿಡಿತ ಅರಿತ ಸಾಹಿತಿಗಳು, ಸಂಶೋಧಕರು, ವಾಗ್ಮಿಗಳು ಜಿಲ್ಲೆಯಲ್ಲಿದ್ದಾರೆ. ಹಿರಿಯ ಸಾಹಿತಿಗಳಾದ ದಿ.ಬುದ್ಧಿವಂತ ಶೆಟ್ಟರು, ಮತ್ತು ಎ.ಕೃಷ್ಣ ಸುರಪುರ, ಸಂಶೋಧಕ ಸೀತಾರಾಮ ಜಹಾಗೀರದಾರ, ಡಿ.ಎಸ್.ಅಕ್ಕಿ, ದಿ.ಬಸವರಾಜ ಶಾಸಿ, ದಿ.ಪ್ರೊ.ಸೂಗಯ್ಯ ಹಿರೇಮಠ ಇತರರು ಜಿಲ್ಲೆಯ ಐತಿಹಾಸಿಕ ಮಹತ್ವ ಕಲೆ ಹಾಕುವ ಮೂಲಕ ಯಾದಗಿರಿಯನ್ನು ಮುಖ್ಯವಾಹಿನಿಗೆ ತರಲು ಶ್ರಮಿಸಿದ್ದಾರೆ.
ಇನ್ನು ಯಾದಗಿರಿ ತಾಲೂಕಿನ ವಾಸ್ತುಶಿಲ್ಪದ ಬಗ್ಗೆ ಸುಮಾರು 18 ವರ್ಷ ಹಿಂದೆ ಸೋನಿ ಪ್ರಕಾಶನದ ಹೆಸರಿನಲ್ಲಿ ಪತ್ರಕರ್ತ ಅನೀಲ ದೇಶಪಾಂಡೆ ಮತ್ತು ದಿ.ಸಿದ್ದಯ್ಯ ಕಲಾಲ, ವೆಂಕಣ್ಣ ದೊಣ್ಣೆಗೌಡ, ಡಾ.ಭೀಮರಾಯ ಲಿಂಗೇರಿ ಅಂಥವರು ಯಾದಗಿರಿ ಬೆಟ್ಟ ಸೇರಿ ತಾಲೂಕಿನ ಗಡಿ ಭಾಗದಲ್ಲಿ ಹಗಲು ರಾತ್ರಿ ಎನ್ನದೆ ಸುತ್ತಾಡಿ ಕಲೆ ಮತ್ತು ವಾಸ್ತುಶಿಲ್ಪದ ಸಮಗ್ರ ಸಂಗ್ರಹದ ಹೊತ್ತಿಗೆ ಹೊರತಂದಿದ್ದಾರೆ.ಹೀಗೆ ಬಿಸಿಲ ನಾಡಿನಲ್ಲಿ ಕನ್ನಡದ ಸುಗಂಧ ಲೇಪಿಸಿದ ಮಹನೀಯರಿಗೆ ನಾಲ್ಕನೇ ಸಮ್ಮೇಳನ ಎಲ್ಲಿಲ್ಲದದ ಹುರುಪು ತಂದಿದೆ.

ಸಮ್ಮೇಳನಕ್ಕೆ ಬರುವ ಶಿಕ್ಷಕರಿಗೆ ಒಒಡಿ ವ್ಯವಸ್ಥೆ: 4ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಡಿ.24, 25ರಂದು ನಗರದ ಹಿಂದಿ ಪ್ರಚಾರ ಸಭಾ ಆವರಣದಲ್ಲಿ ಹಮ್ಮಿಕೊಂಡಿದ್ದು, ಸಿದ್ಧತೆ ಭರದಿಂದ ಸಾಗುತ್ತಿದೆ ಎಂದು ಕಸಾಪ ಜಿಲ್ಲಾಧ್ಯಕ್ಷ ಸಿದ್ದಪ್ಪ ಹೊಟ್ಟಿ ತಿಳಿಸಿದ್ದಾರೆ. ಈಗಾಗಲೇ ಮೂರು ಜಿಲ್ಲಾ ಸಮ್ಮೇಳನ ಯಶಸ್ವಿಯಾಗಿ ಪೂರ್ಣಗೊಳಿಸಿದ್ದು, 4ನೇ ಸಮ್ಮೇಳನವೂ ಅರ್ಥಪೂರ್ಣ ನಡೆಸಲು ತೀಮರ್ಾನಿಸಲಾಗಿದೆ. ಸವರ್ಾಧ್ಯಕ್ಷರಾಗಿ ಖ್ಯಾತ ಪ್ರವಾಸ ಕಥೆಗಾರ ಸಿದ್ಧರಾಮ ಹೊನ್ಕಲ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು. ಸಮ್ಮೇಳನ ಯಶ್ವಸಿಗೆ ಹಣಕಾಸು, ಮೆರವಣಿಗೆ, ಆಹಾರ, ಪ್ರಚಾರ ಸೇರಿ 9 ಸಮಿತಿ ರಚಿಸಲಾಗಿದ್ದು, ಆಯಾ ಸಮಿತಿ ಪದಾಧಿಕಾರಿಗಳಿಗೆ ಸಿದ್ಧತೆ ಹೊಣೆ ವಹಿಸಲಾಗಿದೆ. ಕಾರ್ಯಕ್ರಮವನ್ನು ಸ್ಮರಣೀಯಗೊಳಿಸಲು 1 ಸ್ಮರಣ ಸಂಚಿಕೆ ಸೇರಿ 12 ಪುಸ್ತಕ ಹೊರತರಲಾಗಿದೆ. ಜಿಲ್ಲೆ ಜನತೆ ಸಹಕಾರ ನೀಡುತ್ತಿದ್ದು, ವ್ಯಾಪಾರಸ್ಥರು, ಸಂಘ-ಸಂಸ್ಥೆಗಳ ಪ್ರಮುಖರು, ಕನ್ನಡಪರ ಸಂಘಟನೆಗಳ ಮುಖಂಡರೊಂದಿಗೆ ಸಭೆ ನಡೆಸಲಾಗಿದೆ ಎಂದ ಹೊಟ್ಟಿ, ಸಮ್ಮೇಳನಕ್ಕೆ ಬರುವ ಶಿಕ್ಷಕರಿಗೆ ಶಿಕ್ಷಣ ಇಲಾಖೆ ಒಒಡಿ ವ್ಯವಸ್ಥೆ ಕಲ್ಪಿಸಿದೆ ಎಂದು ತಿಳಿಸಿದರು. ಗೌರವ ಕಾರ್ಯದಶರ್ಿ ಡಾ.ಸುಭಾಶ್ಚಂದ್ರ ಕೌಲಗಿ, ಪ್ರಕಾಶ ಅಂಗಡಿ, ಅಯ್ಯಣ್ಣ ಹುಂಡೇಕಾರ, ಡಾ.ಭೀಮರಾಯ ಲಿಂಗೇರಿ, ಡಾ.ಎಸ್.ಎಸ್.ನಾಯಕ ಇತರರಿದ್ದರು.

5 ಪ್ರಮುಖ ದ್ವಾರ ನಿರ್ಮಾಣ: 24ರಂದು ಮೈಲಾಪುರ ಬೇಸ್ನಿಂದ ಸಮ್ಮೇಳನ ಸವರ್ಾಧ್ಯಕ್ಷರ ಮೆರವಣಿಗೆ ನಡೆಯಲಿದ್ದು, ಅಲ್ಲಿಂದ ಪ್ರಧಾನ ವೇದಿಕೆವರೆಗೆ 5 ಪ್ರಮುಖ ದ್ವಾರಗಳನ್ನು ನಿಮರ್ಿಸಲಾಗುತ್ತಿದೆ. ಈ ದ್ವಾರಗಳಿಗೆ ದಿ.ನರಸಿಂಹ ಗುಪ್ತ, ದಿ.ಪ್ರೊ.ಸೂಗಯ್ಯ ಹಿರೇಮಠ, ದಿ.ಸೂಗಣ್ಣ ಹುಂಡೇಕಾರ, ದಿ.ಬಸವರಾಜ ಶಾಸ್ತ್ರಿ ಮಳಿಮಠ ಹಾಗೂ ದಿ.ಸಿದ್ದಯ್ಯ ಕಲಾಲ ಹೆಸರಿಡಲಾಗಿದ್ದು, ಪ್ರಧಾನ ವೇದಿಕೆಗೆ ಶ್ರೀ ಗುರುಸಿದ್ಧ ಶಾಸ್ತ್ರಿ ಹೆಸರಿಡಲಾಗಿದೆ.