ನೆಲ ಬಿಟ್ಟು ಮೇಲೇಳದ ರಂಗಮಂದಿರ

ಲಕ್ಷ್ಮೀಕಾಂತ್ ಕುಲಕರ್ಣಿ ಯಾದಗಿರಿ
ಗಿರಿ ಜಿಲ್ಲೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳಿಗಾಗಿ ಸುಸಜ್ಜಿತ ರಂಗಮಂದಿರ ಇಲ್ಲದೆ ಅನೇಕ ಪ್ರತಿಭೆಗಳು ಕತ್ತಲಲ್ಲೇ ಕಮರುವಂತಾಗಿದೆ. ಜಿಲ್ಲಾ ಕೇಂದ್ರದಲ್ಲಿ ಮೂರು ವರ್ಷಗಳಿಂದ ನಡೆದಿರುವ ರಂಗಮಂದಿರ ನಿರ್ಮಾಣ ಕಾಮಗಾರಿ ನೆಲ ಬಿಟ್ಟು ಮೇಲೇಳದಿರುವುದು ಕಲಾವಿದರ ಬದುಕು ಸಂಕಷ್ಟಕ್ಕೆ ದೂಡಿದೆ.

ಯಾದಗಿರಿ ಜಿಲ್ಲಾ ಕೇಂದ್ರವಾದ ನಂತರ ಸುಸಜ್ಜಿತ ರಂಗಮಂದಿರ ನಿರ್ಮಾಣಕ್ಕಾಗಿ 2012-13ರಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ 2 ಕೋಟಿ ರೂ. ಕ್ರಿಯಾಯೋಜನೆ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಲಾಗಿತ್ತು. ಅದರಂತೆ 2015-16ರಲ್ಲಿ ಮೊದಲ ಕಂತಿನಲ್ಲಿ ಇಲಾಖೆ 60 ಲಕ್ಷ ಅನುದಾನ ಬಿಡುಗಡೆಗೊಳಿಸಿ, ಅಂದಿನ ಜಿಲ್ಲಾ ಉಸ್ತುವಾರಿ ಮಂತ್ರಿ ಬಾಬುರಾವ್ ಚಿಂಚನಸೂರ ಅವರಿಂದ ಜಿಲ್ಲಾಡಳಿತ ಭವನ ಹಿಂದುಗಡೆಯ ಒಂದು ಎಕರೆ ಭೂಮಿಯಲ್ಲಿ ರಂಗಮಂದಿರ ನಿರ್ಮಾಣಕ್ಕೆ ಅಡಿಗಲ್ಲು ಹಾಕಲಾಯಿತು.

ಆದರೀಗ ಮಂದಿರ ನಿರ್ಮಾಣ ಕೇವಲ ಅಡಿಗಲ್ಲಿಗೆ ಸೀಮಿತ ಎಂಬಂತಾಗಿದೆ. ಮೂರ್ನಾಲ್ಕು ವರ್ಷಗಳಿಂದ ಬೇಸ್ಮೆಂಟ್ ಲೇವಲ್ನಲ್ಲೇ ಕಾಮಗಾರಿ ನಿಂತಿದ್ದು ದುರಾದೃಷ್ಟಕರ ಸಂಗತಿ. ಈ ಕಾಮಗಾರಿಯನ್ನು ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಯಮಿತ (ಕೆಆರ್ಐಡಿಎಲ್) ವಹಿಸಿಕೊಂಡಿದ್ದು, ಅಧಿಕಾರಿಗಳ ನಿರ್ಲಕ್ಷೃದಿಂದಾಗಿ ಕಾಮಗಾರಿಗೆ ಗ್ರಹಣ ಹಿಡಿದಿದೆ ಎಂದು ಕಲಾವಿದರು ಅಳಲು ತೋಡಿಕೊಳ್ಳುತ್ತಿದ್ದಾರೆ.

ಜಿಲ್ಲೆಯಲ್ಲಿ ಸಾಕಷ್ಟು ಕಲಾವಿದರಿದ್ದು, ತಮ್ಮ ಪ್ರತಿಭಾ ಪ್ರದರ್ಶನಕ್ಕಾಗಿ ಖಾಸಗಿ ಕಲ್ಯಾಣ ಮಂಟಪಗಳ ಮೇಲೆ ಅವಲಂಬಿಸುವಂತಾಗಿದೆ. ಅಲ್ಲದೆ ಆಗಾಗ್ಗೆ ಸಾಂಸ್ಕೃತಿಕ ಸಂಘಟನೆಗಳಿಂದ ಉತ್ತಮ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದ್ದು, ರಂಗಮಂದಿರ ಇಲ್ಲದ್ದರಿಂದ ಖಾಸಗಿ ಕಟ್ಟಡಗಳಿಗೆ ಸಾವಿರಾರು ರೂ. ಬಾಡಿಗೆ ತೆರುವಂತಾಗಿದೆ. ಅದೇ ರಂಗಮಂದಿರವಿದ್ದರೆ ವಿದ್ಯುತ್, ಧ್ವನಿವರ್ಧಕ, ಆಸನ ಸೇರಿ ಸಕಲ ಸೌಕರ್ಯ ಇರುತ್ತವೆ. ಇದರಿಂದ ಜನರೂ ಸಾಂಸ್ಕೃತಿಕ ಕಾರ್ಯಕ್ರಮ ವೀಕ್ಷಿಸಲು ಹೆಚ್ಚಿನ ಸಂಖ್ಯೆಯಲ್ಲಿ ಬರಲು ಅವಕಾಶ ಸಿಗುತ್ತದೆ.

ಇನ್ನಾದರೂ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿಗಳು ರಂಗಮಂದಿರ ಕಾಮಗಾರಿ ಕಡೆ ನಜರ್ ಹಾಕಿ ತ್ವರಿತ ಗತಿಯಲ್ಲಿ ಪೂರ್ಣಗೊಳಿಸಲು ಮುಂದಾಗಬೇಕು ಎಂಬುದು ಜಿಲ್ಲೆಯ ಜನರ ಹಾಗೂ ಕಲಾಸಕ್ತರ ಒಕ್ಕೊರಲ ಒತ್ತಾಸೆಯಾಗಿದೆ.

ಡಾ.ಖರ್ಗೆ ಸಲಹೆಗೂ ಕಿಮ್ಮತ್ತಿಲ್ಲ!: ಕಳೆದೆರಡು ವರ್ಷದ ಹಿಂದೆ ಯಾದಗಿರಿಯಲ್ಲಿ ಸಂಸದ ಹಾಗೂ ಲೋಕಸಭೆ ಕಾಂಗ್ರೆಸ್ ನಾಯಕ ಡಾ.ಮಲ್ಲಿಕಾರ್ಜುನ ಖರ್ಗೆ ನಡೆಸಿದ್ದ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯಲ್ಲಿ ರಂಗಮಂದಿರ ನಿರ್ಮಾಣ ವಿಷಯ ಚರ್ಚೆಗೆ ಬಂದಿತ್ತು. ರಂಗಮಂದಿರಗಳು ಪದೇಪದೆ ನಿರ್ಮಿಸುವಂಥ ಕಟ್ಟಡಗಳಲ್ಲ. ಹೀಗಾಗಿ ನಿರ್ಮಿಸುವ ಮೊದಲೇ ಅಚ್ಚುಕಟ್ಟಾಗಿ ಕಲಾವಿದರಿಗೆ ಅನುಕೂಲವಾಗುವಂತೆ ತ್ವರಿತ ಮತ್ತು ಸುಸಜ್ಜಿತ ನಿರ್ಮಿಸಿ ಎಂದು ಸಲಹೆ ನೀಡಿದ್ದರು. ಆದರೆ ಅಧಿಕಾರಿಗಳು ಮಾತ್ರ ಡಾ.ಖರ್ಗೆ ಈ ಸಲಹೆಯನ್ನು ಎಡಕಿವಿಯಿಂದ ಕೇಳಿ ಬಲಗಿವಿಯಿಂದ ಮರೆತಿದ್ದು ವರ್ತಮಾನದ ದುರಂತ.

ಕೆಆರ್ಐಡಿಎಲ್ಗೆ ಇಲ್ಲವೆ ಆಸಕ್ತಿ..? : ಸದ್ಯ ಜಿಲ್ಲಾ ರಂಗಮಂದಿರ ನಿರ್ಮಾಣದ ಜಿಮ್ಮೇದಾರಿ ಹೊತ್ತಿರುವ ಕೆಆರ್ಐಡಿಎಲ್ಗೆ ಕಾಮಗಾರಿ ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ಅಷ್ಟೊಂದು ಆಸಕ್ತಿ ವಹಿಸುತ್ತಿಲ್ಲ ಎಂಬ ಆರೋಪ ಕೇಳಿಬರುತ್ತಿದೆ. ಕಾಮಗಾರಿಗೆ ಅನುದಾನ ನೀಡಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಿದ್ಧವಿದೆಯಾದರೂ ಕೊಟ್ಟ ಹಣವನ್ನು ನಿಗದಿತ ಅವಧಿಯಲ್ಲಿ ಖರ್ಚು ಮಾಡಲು ಅಧಿಕಾರಿಗಳೇಕೆ ಹಿಂದೇಟು ಹಾಕುತ್ತಿದ್ದಾರೆ ಎಂಬುದೇ ಯಕ್ಷಪ್ರಶ್ನೆ.

ರಂಗಮಂದಿರ ನಿರ್ಮಾಣ ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿರುವುದು ಗಮನಕ್ಕೆ ಬಂದಿದೆ. ಈಗಾಗಲೇ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕೆಆರ್ಐಡಿಎಲ್ ಅಧಿಕಾರಿಗಳೊಂದಿಗೆ ಚರ್ಚಿಸಿದ್ದು, ಕಾಮಗಾರಿ ಮುಂದುವರಿದಿದೆ. ತ್ವರಿತವಾಗಿ ಪೂರ್ಣಗೊಳಿಸುವಂತೆ ಸೂಚನೆ ನೀಡಲಾಗಿದೆ.
| ಎಂ.ಕೂರ್ಮಾರಾವ್ ಜಿಲ್ಲಾಧಿಕಾರಿ