ಹಳ್ಳಿಗೆ ತೆರಳಿ ಸಮಸ್ಯೆ ಅರಿಯಿರಿ

ವಿಜಯವಾಣಿ ಸುದ್ದಿಜಾಲ ಯಾದಗಿರಿ
ಜಿಲ್ಲಾ ಮಟ್ಟದ ಅಧಿಕಾರಿಗಳು ಗ್ರಾಮೀಣ ಭಾಗದಲ್ಲಿ ಸಂಚರಿಸಿ ತಮ್ಮ ಇಲಾಖೆ ಯೋಜನೆಗಳ ಅನುಷ್ಠಾನಕ್ಕೆ ಪ್ರಾಮಾಣಿಕವಾಗಿ ಶ್ರಮಿಸುವಂತೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ರಾಜಶೇಖರ ಪಾಟೀಲ್ ವಜ್ಜಲ್ ತಾಕೀತು ಮಾಡಿದ್ದಾರೆ.

ಜಿಪಂ ಕಚೇರಿ ಸಭಾಂಗಣದಲ್ಲಿ ಸೋಮವಾರ ಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲಾ ಕೇಂದ್ರದ ಅಧಿಕಾರಿಗಳು ಆಗಾಗ್ಗೆ ಗ್ರಾಮೀಣ ಭಾಗದಲ್ಲಿ ಪ್ರವಾಸ ಕೈಗೊಂಡರೆ ನಿಮ್ಮ ಇಲಾಖೆ ಸಮಸ್ಯೆಗಳ ಬಗ್ಗೆ ಗಮನಹರಿಸಲು ಸಾಧ್ಯವಾಗಲಿದೆ. ಸದ್ಯದಲ್ಲೇ ಬೇಸಿಗೆ ಎದುರಾಗುವ ಕಾರಣ ಎಲ್ಲ ಅಧಿಕಾರಿಗಳು ಯುದ್ಧೋಪಾದಿಯಲ್ಲಿ ಕೆಲಸ ಮಾಡುವಂತೆ ಸೂಚಿಸಿದರು.

ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶ ಕಡಿಮೆಯಾದರೆ ಶಿಕ್ಷಣ ಇಲಾಖೆ ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿ ಮಾಡಬೇಕಾಗುತ್ತದೆ. ನಾನೂ ಜಿಲ್ಲೆಯ ಕೆಲ ಪ್ರೌಢಶಾಲೆಗಳಿಗೆ ಭೇಟಿ ನೀಡಿ ವಿಷಯವಾರು ಶಿಕ್ಷಕರ ಚತೆ ಚಚರ್ಿಸಿದ್ದೇನೆ. ವರ್ಗ ಕೋಣೆಯಲ್ಲಿ ಪಾಠ ಮಾಡಿದ ನಂತರ ವಿದ್ಯಾಥರ್ಿಗಳು ಅದನ್ನು ಮನನ ಮಾಡುತ್ತಿದ್ದಾರೆಯೇ ಎಂಬ ಬಗ್ಗೆ ಶಿಕ್ಷಕರು ಕೊಂಚ ಗಮನಹರಿಸಿದರೆ ಫಲಿತಾಂಶದಲ್ಲಿ ಸುಧಾರಣೆ ಕಾಣಬಹುದಾಗಿದೆ ಎಂದು ಅಭಿಪ್ರಾಯ ಪಟ್ಟರು.

ಡಿಡಿಪಿಐ ಶ್ರೀಶೈಲ ಬಿರಾದಾರ್ ಮಾತನಾಡಿ, ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಗೆ ಸಾಕಷ್ಟು ಮುನ್ನೆಚ್ಚರಿಕೆ ಕ್ರಮ ವಹಿಸಲಾಗುತ್ತಿದೆ. ಪರೀಕ್ಷೆ ಸಿದ್ಧತೆಗಾಗಿ ಶಾಲೆಗಳಲ್ಲಿ ವಿಶೇಷ ತರಗತಿ ನಡೆಸಲಾಗುತ್ತಿದೆ ಎಂದು ತಿಳಿಸಿದರು.

ಜಿಪಂ ಸಿಇಒ ಕವಿತಾ ಎಸ್.ಮನ್ನಿಕೇರಿ ಮಾತನಾಡಿ, ವಿದ್ಯಾರ್ಥಿಗಳಿಗೆ ಶಿಷ್ಯವೇತನ ನೀಡುವ ಸಂಬಂಧ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಪ್ರಕ್ರಿಯೆ ನಿಧಾನಗತಿಯಲ್ಲಿ ಸಾಗುತ್ತಿದೆ. ಆಧಾರ್ ಲಿಂಕ್ ಪ್ರಕ್ರಿಯೆ ಪೂರ್ಣಗೊಳಿಸಲು ಫೆಬ್ರವರಿ 11 ಡೆಡ್ಲೈನ್ ನೀಡಿದ್ದರೂ ಪೂರ್ಣಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಗಂಗಾಕಲ್ಯಾಣ ಯೋಜನೆ ಫಲಾನುಭವಿಗಳ ಬೋರ್ವೆಲ್ಗೆ ತ್ವರಿತವಾಗಿ ವಿದ್ಯುತ್ ಸಂಪರ್ಕ ಒದಗಿಸುವಂತೆ ಜೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದ ಅಧ್ಯಕ್ಷ ಪಾಟೀಲ್, ರೈತರ ವಿಷಯದಲ್ಲಿ ಅಧಿಕಾರಿಗಳು ವಿಳಂಬ ಧೋರಣೆ ಅನುಸರಿಸಬೇಡಿ. ಮೊದಲೇ ಮಳೆ ಇಲ್ಲದೆ ರೈತರು ಕಂಗಾಲಾಗಿದ್ದಾರೆ. ಇಂಥದರಲ್ಲಿ ನೀವು ಅವರಿಗೆ ತೊಂದರೆ ನೀಡಿದರೆ ಹೇಗೆ ಎಂದು ಪ್ರಶ್ನಿಸಿದರು.

ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ಕಳ್ಳಬಟ್ಟಿ ಸಾರಾಯಿ ದಂಧೆ ಮತ್ತೆ ಹೆಚ್ಚಾಗಿದೆ. ಇದರಿಂದ ಸಂಸಾರಗಳು ಬೀದಿಗೆ ಬರಲಿವೆ. ಅಧಿಕಾರಿಗಳು ತಕ್ಷಣ ಗಮನಹರಿಸಬೇಕು. ಚೆಕ್ಡ್ಯಾಮ್ ಕಾಮಗಾರಿ ಪೂರ್ಣಗೊಂಡರೂ ಬಿಲ್ ಮಾಡದೆ ಅಧಿಕಾರಿಗಳು ಸತಾಯಿಸುತ್ತಿದ್ದಾರೆ. ಕಾಮಗಾರಿಯಲ್ಲಿ ಅಕ್ರಮವಾದರೆ ತಡೆಹಿಡಿಯಿರಿ. ಆದರೆ ಎಲ್ಲ ಸರಿ ಇರುವ ಕಾಮಗಾರಿಗಳ ಬಗ್ಗೆ ಅನಗತ್ಯ ಕಿರಿಕಿರಿ ಮಾಡಬೇಡಿ ಎಂದು ಖಡಕ್ ಸೂಚನೆ ನೀಡಿದರು.
ಬೇಸಿಗೆ ಸಂದರ್ಭದಲ್ಲಿ ಹಳ್ಳಿಗಳಲ್ಲಿ ಯಾವುದೇ ಕಾರಣಕ್ಕೂ ಕುಡಿಯುವ ನೀರಿನ ಸಮಸ್ಯೆ ಆಗಬಾರದು. ನಾವು ಹಳ್ಳಿಗಳಿಗೆ ಭೇಟಿ ನೀಡಿದಾಗ ಜನತೆ ನಮ್ಮನ್ನು ಮೊದಲು ಪ್ರಶ್ನಿಸುವುದು ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಎಂದರು.

ಗ್ರಾಮೀಣ ನೀರು ಸರಬರಾಜು ಹಾಗೂ ನೈರ್ಮಲ್ಯ ಇಲಾಖೆ ಎಇಇ ಮಾತನಾಡಿ, ಪ್ರಸಕ್ತ ವರ್ಷ ಜಿಲ್ಲಾದ್ಯಂತ 246 ಗ್ರಾಮಗಳನ್ನು ಸಮಸ್ಯಾತ್ಮಕ ಎಂದು ಗುರುತಿಸಲಾಗಿದೆ. ಸುರಪುರ ತಾಲೂಕಿನಲ್ಲಿ 11, ಶಹಾಪುರದ 4 ಗ್ರಾಮಗಳಲ್ಲಿ ಸದ್ಯ ಟ್ಯಾಂಕರ್ ನೀರು ಪೂರೈಸಲಾಗುತ್ತಿದೆ ಎಂದು ತಿಳಿಸಿದರು. ಜಿಪಂ ಉಪಾಧ್ಯಕ್ಷೆ ಗಿರಿಜಮ್ಮ ಸದಾಶಿವಪ್ಪಗೌಡ, ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.

ಬೆಂಗಳೂರು ಫಾರೆನ್ನಲ್ಲಿ ಇದೆಯೇ?: ಸುರಪುರ ತಾಲೂಕಿನ ಮುದನೂರಿನಲ್ಲಿ ಬಾವಿ ವಾಲ್ನಲ್ಲಿ ಇತ್ತೀಚೆಗೆ ವಿಷ ಬೆರೆಸಿದ ಕಾರಣ ಬಾವಿ ನೀರು ಖಾಲಿ ಮಾಡಿಸಿ ನೀರಿನ ಸ್ಯಾಂಪಲ್ ಪರೀಕ್ಷೆಗಾಗಿ ಲ್ಯಾಬ್ಗೆ ಕಳಿಸಲಾಗಿದೆ. ಅದರ ವರದಿ ಬಂದಿದಿಯೇ ಎಂದು ಜಿಪಂ ಅಧ್ಯಕ್ಷ ರಾಜಶೇಖರ ಪಾಟೀಲ್ ಡಿಎಚ್ಒ ಡಾ.ಉಸ್ಮಾನ್ ಹಬೀಬ್ ಪಟೇಲ್ ಅವರನ್ನು ಕೇಳಿದರು. ಇದಕ್ಕೆ ಉತ್ತರಿಸಿದ ಪಟೇಲ್, ನೀರನ್ನು ಬೆಂಗಳೂರಿನ ಲ್ಯಾಬ್ಗೆ ಕಳಿಸಲಾಗಿದೆ ಎಂದರು. ಇದರಿಂದ ಕೆಂಡಮಂಡಲರಾದ ಪಾಟೀಲ್, ಅಲ್ರೀ ಕೊನೇ ಮೀಟಿಂಗ್ನಲ್ಲೂ ಇದೇ ಉತ್ತರ ಕೊಟ್ಟಿದ್ದೀರಿ. ಈಗಲೂ ಅದನ್ನೇ ಹೇಳುತ್ತೀರಿ. ವರದಿಯನ್ನು ಶೀಘ್ರ ತರಿಸಿಕೊಳ್ಳಲು ಆಗುವುದಿಲ್ಲವೇ? ಬೆಂಗಳೂರು ಫಾರೆನ್ನಲ್ಲಿ ಇದೆಯೇ ಎಂದು ಖಾರವಾಗಿ ಪ್ರಶ್ನಿಸಿದರು. ವರದಿ ಬಂದರೆ ಮದನೂರು ಬಾವಿ ನೀರು ಬಳಸಲು ಅನುಕೂಲವಾಗುತ್ತದೆ ಎಂದರು.