ಇಂದಿನಿಂದ ಮೈಲಾರಲಿಂಗೇಶ್ವನ ಜಾತ್ರೆ ವೈಭವ

ವಿಜಯವಾಣಿ ಸುದ್ದಿಜಾಲ ಯಾದಗಿರಿ
ಹೈದರಾಬಾದ್ ಕರ್ನಾಟಕದ ಆರಾಧ್ಯ ದೈವ ಮೈಲಾಪುರದ ಶ್ರೀ ಮೈಲಾರಲಿಂಗೇಶ್ವರನ ಜಾತ್ರೋತ್ಸವ ಭಾನುವಾರ ಆರಂಭವಾಗಲಿದ್ದು, ಊರಲ್ಲಿ ಹಬ್ಬದ ವಾತಾವರಣ ಕಳೆಗಟ್ಟಿದೆ. ಗುಹಾಂತರ ದೇಗುಲ ಎಂದೇ ಪ್ರಸಿದ್ಧಿ ಪಡೆದ ಮಲ್ಲಯ್ಯನ ದರ್ಶನಕ್ಕೆ ಜಾತ್ರೆ ವೇಳೆ ಲಕ್ಷಾಂತರ ಭಕ್ತರು ಆಗಮಿಸುವುದು ಅನೂಚಾನವಾಗಿ ನಡೆದುಕೊಂಡು ಬಂದಿದೆ.

ಪ್ರತಿವರ್ಷ ಮಕರ ಸಂಕ್ರಮಣ ಹಬ್ಬದ ದಿನ ನಡೆಯುವ ಜಾತ್ರೆಗೆ ಅಸಂಖ್ಯ ಭಕ್ತರು ಆಗಮಿಸುತ್ತಾರೆ. ರಥೋತ್ಸವದ ಬದಲು ಸರಪಳಿ ಹರಿಯುವುದು ಈ ಜಾತ್ರೆಯ ವೈಶಿಷ್ಟೃ. ಜ.14ರಂದು ಮಲ್ಲಯ್ಯ ಮೂರ್ತಿಯನ್ನು ಹೊನ್ನಕೆರೆಗೆ ಗಂಗಾಸ್ನಾನಕ್ಕೆ ಕರೆದೊಯ್ಯಲಾಗುತ್ತದೆ. ನಂತರ ಮಲ್ಲಯ್ಯನ ಪಲ್ಲಕ್ಕಿ ಸರಪಳಿ ಹರಿಯುವ ಕಟ್ಟೆಗೆ ಆಗಮಿಸುತ್ತದೆ. ಅಲ್ಲಿ ಕಬ್ಬಿಣದ ಸರಪಳಿ ಬಿಗಿದಿರುತ್ತಾರೆ. ದೇವರು ಬರುವ ಸಂದರ್ಭದಲ್ಲಿ ದೇವರೇ ಪೂಜಾರಿ ಮೈಯಲ್ಲಿ ಬಂದು ಸರಪಳಿ ಹರಿಯುತ್ತಾನೆ ಎಂಬ ನಂಬಿಕೆ ಭಕ್ತರಲ್ಲಿದೆ. ಸರಪಳಿ ಬೇಗ ಹರಿದರೆ ಆ ವರ್ಷ ನಾಡಿನಲ್ಲಿ ಮಳೆ, ಬೆಳೆ ಸಮೃದ್ಧ್ಧಿಯಾಗಿರಲಿದೆ ಎಂಬ ನಂಬಿಕೆ ಇದೆ.

ಹೊಟ್ಟೆ ಪಾಡಿಗಾಗಿ ದೊಡ್ಡ ನಗರಗಳಿಗೆ ಗುಳೆ ಹೋದ ಜನತೆ ಸಹ ಜ.13ರಿಂದ 18ರವರೆಗೆ ನಡೆಯಲಿರುವ ಜಾತ್ರೆಗೆ ಬರುತ್ತಾರೆ. ಯಾದಗಿರಿ ಗಡಿ ಜಿಲ್ಲೆಯಾಗಿದ್ದರಿಂದ ಪಕ್ಕದ ತೆಲಂಗಾಣ, ಆಂಧ್ರ ಮತ್ತು ಮಹಾರಾಷ್ಟ್ರ ರಾಜ್ಯಗಳಿಂದ ಭಕ್ತ ಸಮೂಹ ಹರಿದು ಬರುತ್ತದೆ. ಯಾದಗಿರಿ ಜಿಲ್ಲೆಯಾಗುವ ಮೊದಲು ತಾಲೂಕು ಆಡಳಿತ ಭಕ್ತರಿಗೆ ವಿಶೇಷ ಸೌಕರ್ಯ ಕಲ್ಪಿಸುತ್ತಿತ್ತು. ಆದರೀಗ ಜಿಲ್ಲಾಡಳಿತವೇ ಜಾತ್ರೆ ಹೊಣೆ ಹೊತ್ತುಕೊಂಡಿದ್ದು, ಯಾದಗಿರಿ, ಕಲಬುರಗಿ, ರಾಯಚೂರು ಮತ್ತು ಬೀದರ್ ಜಿಲ್ಲೆಗಳಿಂದ ವಿಶೇಷ ಬಸ್ ಸೌಕರ್ಯ ಕಲ್ಪಿಸಲಾಗಿದೆ.

ಇನ್ನು ಜಾತ್ರಾ ಸಂದರ್ಭದಲ್ಲಿ ಆಗಮಿಸುವ ಭಕ್ತರು ಜಾವಳ, ಮುಂಜಿ(ಉಪನಯನ) ಸೇರಿ ಮಂಗಲ ಕಾರ್ಯಕ್ರಮ ಹಮ್ಮಿಕೊಳ್ಳುತ್ತಾರೆ. ಆದರೆ ಭಕ್ತ ಸಮೂಹಕ್ಕೆ ಜಿಲ್ಲಾಡಳಿತ ಯಾವುದೇ ರೀತಿಯ ಮೂಲಸೌಲಭ್ಯ ಕಲ್ಪಿಸುತ್ತಿಲ್ಲ ಎಂಬ ಆರೋಪ ಇಂದು ನಿನ್ನೆಯದ್ದಲ್ಲ. ಪ್ರತಿವರ್ಷ ಜಾತ್ರೆ ಬಂತೆಂದರೆ ಸಾಕು, ಭಕ್ತರಿಗೆ ತಂಗಲು ವಸತಿ, ಶೌಚಗೃಹ ಮತ್ತು ಸ್ನಾನಗೃಹಗಳಿಲ್ಲದೆ ತೀವ್ರ ತೊಂದರೆಯಾಗುತ್ತಿದೆ. ಮಾತ್ರವಲ್ಲ, ಶೌಚ ಮತ್ತು ಸ್ನಾನಕ್ಕೆ ಗ್ರಾಮದ ಬಯಲೇ ಅವಲಂಬಿಸಬೇಕಿದೆ.
ಕಾಲ ಕಾಲದಿಂದಲೂ ಕುರಿ ಎಸೆದು ಹರಕೆ ತೀರಿಸುವ ಅನಿಷ್ಠ ಪದ್ಧತಿಗೆ ಜಿಲ್ಲಾಡಳಿತ ನಿಷೇಧ ಹೇರುತ್ತಿದೆ. ಈ ವರ್ಷವೂ ಅದನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆ. ಮೈಲಾಪುರ ಗ್ರಾಮದ ಸುತ್ತಮುತ್ತ ಈಗಾಗಲೇ ಚೆಕ್ಪೋಸ್ಟ್ಗಳನ್ನು ಸ್ಥಾಪಿಸಲಾಗಿದೆ.

ಪಲ್ಲಕ್ಕಿ ಹೊತ್ತ ಭಕ್ತರ ಪಾದಯಾತ್ರೆ: ಮಲ್ಲಯ್ಯನ ಭಕ್ತರು ಪಲ್ಲಕ್ಕಿ ಹೊತ್ತು ಮೈಲಾಪುರಕ್ಕೆ ಪಾದಯಾತ್ರೆ ಮೂಲಕ ಆಗಮಿಸಿ ಹರಕೆ ತೀರಿಸಿ ಪುನೀತರಾಗುವುದು ಜಾತ್ರೆಯ ಇನ್ನೊಂದು ವಿಶೇಷ. ಗದಗ, ಬಾಗಲಕೋಟೆ, ಬೀದರ್, ಕಲಬುರಗಿ ಹೀಗೆ ನಾನಾ ಜಿಲ್ಲೆಗಳಿಂದ ಪಾದಯಾತ್ರೆಯಲ್ಲೇ ಬರುವ ಭಕ್ತರು ಶಿವಾ ಮೈಲಾರಲಿಂಗೇಶ್ವರ ಏಳು ಕೋಟಿ ಏಳುಕೋಟಿಗೆ ಎಂಬ ಜೈಕಾರ ಹಾಕುತ್ತಲೇ ಮುಂದೆ ಸಾಗುತ್ತಾರೆ. ಭಕ್ತರ ಅನುಕೂಲಕ್ಕಾಗಿ ನಗರದ ಬಸವೇಶ್ವರ ಗಂಜ್ ವೃತ್ತದಲ್ಲಿ ದಾನಿಗಳು ಪ್ರಸಾದ, ತಂಪು ಪಾನೀಯದ ವ್ಯವಸ್ಥೆ ಮಾಡಿದ್ದಾರೆ.

Leave a Reply

Your email address will not be published. Required fields are marked *