ನಗರಸಭೆಯಲ್ಲಿ ಅಗೆದಷ್ಟು ಅಕ್ರಮ ವಾಸನೆ?

ಲಕ್ಷ್ಮೀಕಾಂತ್ ಕುಲಕರ್ಣಿ ಯಾದಗಿರಿ
ಪ್ರತಿಷ್ಠಿತ ಬಡಾವಣೆಗಳಲ್ಲಿ ಒಂದಾದ ಲಕ್ಷ್ಮೀ ನಗರದ ಸರ್ವೆ ನಂ.384/1ರಲ್ಲಿ ನಿವೇಶನಗಳನ್ನು ನಕಲಿ ದಾಖಲೆ ಸೃಷ್ಟಿಸಿ ಮಾರಾಟ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರಸಭೆ ಕಂದಾಯ ಇಲಾಖೆ ಅಧಿಕಾರಿಯೊಬ್ಬರ ತಲೆದಂಡವಾಗಿದ್ದು, ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಇನ್ನೂ ಇಬ್ಬರು ಸಿಬ್ಬಂದಿ ವಿರುದ್ಧ ಜಿಲ್ಲಾಡಳಿತ ಕ್ರಮ ಕೈಗೊಳ್ಳಲು ಹಿಂದೇಟು ಹಾಕುತ್ತಿರುವುದು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಸದ್ಯ ಯಾದಗಿರಿ ನಗರಸಭೆ ಕಂದಾಯ ಅಧಿಕಾರಿ ಪವನಕುಮಾರ್ ಅವರನ್ನು ಜಿಲ್ಲಾಧಿಕಾರಿ ಎಂ.ಕೂಮರ್ಾರಾವ್ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದು, ಕರ್ತವ್ಯ ನಿರ್ಲಕ್ಷೃ ಸೇರಿ ಸರ್ವೆ ನಂ.384/1ರಲ್ಲಿ ನಿವೇಶನಗಳ ಖಾತಾ ವರ್ಗಾವಣೆಗಾಗಿ ಬಂದ ಅರ್ಜಿಗಳನ್ನು ಪರಿಶೀಲಿಸದೆ ಮೇಲಧಿಕಾರಿಗಳ ಅನುಮೋದನೆಗಾಗಿ ಕಡತ ಮಂಡಿಸಿದ್ದಾರೆ ಎಂಬ ಕಾರಣ ನೀಡಲಾಗಿದೆ.

ನಿವೇಶನಗಳನ್ನು ನಕಲಿ ದಾಖಲೆ ಸೃಷ್ಟಿಸಿ ಮಾರಾಟ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರಸಭೆ ಕಚೇರಿಯಲ್ಲಿ ಅಗೆದಷ್ಟು ಅಕ್ರಮದ ವಾಸನೆ ಬರುತ್ತಿದೆ. ಕಳೆದ ಜುಲೈ 30ರಂದು ಪೌರಾಯುಕ್ತ ಸಂಗಪ್ಪ ಉಪಾಸೆ, ಹಿರಿಯ ಉಪ ನೋಂದಣಾಧಿಕಾರಿಗಳ ಖರೀದಿ ಪತ್ರ ರದ್ದುಪಡಿಸಿದ ಆಧಾರದ ಮೇಲೆ ಲಕ್ಷ್ಮೀ ನಗರ ಬಡಾವಣೆಯ ಕೆಲ ನಿವೇಶನಗಳ ವಗರ್ಾವಣೆ ರದ್ದುಗೊಳಿಸಲಾಗಿದೆ ಎಂದು ಆದೇಶ ಹೊರಡಿಸಿದ್ದಾರೆ.

ಆದರೆ ಪೌರಾಯುಕ್ತರ ಆದೇಶ ಪತ್ರದಲ್ಲಿ ನಿವೇಶನ ಸಂಖ್ಯೆ 42ಕ್ಕೆ ಸಂಬಂಧಿಸಿದಂತೆ ಖರೀದಿ ರದ್ದತಿ ಪತ್ರದ ಸಂಖ್ಯೆಯನ್ನೇ ಉಲ್ಲೇಖಿಸಿಲ್ಲ. ಅಲ್ಲದೆ ಆಗಸ್ಟ್ 1ರಂದು ಇದೇ ಪೌರಾಯುಕ್ತರು ಯಾದಗಿರಿ ಉಪ ನೋಂದಣಾಧಿಕಾರಿಗಳಿಗೆ ನಿವೇಶನ ಸಂಖ್ಯೆ 42ರ ಖರೀದಿಪತ್ರ ರದ್ದುಗೊಳಿಸಲು ಮನವಿ ಮಾಡಿದ್ದಾರೆ.
ಉಪ ನೋಂದಣಾಧಿಕಾರಿಗಳು ಮತ್ತು ಪೌರಾಯುಕ್ತರ ಮಧ್ಯೆ ನಡೆದ ಈ ಪತ್ರ ಸಮರದ ಬಗ್ಗೆ ನಗರಾಭಿವೃದ್ಧಿ ಪ್ರಾಧಿಕಾರದ ಯೋಜನಾ ನಿದರ್ೇಶಕರು ಜಿಲ್ಲಾಧಿಕಾರಿಗಳಿಗೆ ಆಗಸ್ಟ್ 10ರಂದು ನೀಡಿದ ತನಿಖಾ ವರದಿಯಲ್ಲಿ ಲಕ್ಷ್ಮೀ ನಗರ ಬಡಾವಣೆ ನಿವೇಶನ ಸಂಖ್ಯೆ 42 ರದ್ದುಪಡಿಸಿದ ಬಗ್ಗೆ ಹಿರಿಯ ಉಪ ನೋಂದಣಾಧಿಕಾರಿಗಳ ಕಚೇರಿಯಿಂದ ಯಾವುದೇ ದಾಖಲಾತಿ ನೀಡಿಲ್ಲ ಎಂದು ಸ್ಪಷ್ಟವಾಗಿ ಉಲ್ಲೇಖಿಸಿದ್ದಾರೆ. ಇಷ್ಟಾದರೂ ಜಿಲ್ಲಾಡಳಿತ ಏಕೆ ಕ್ರಮ ಕೈಗೊಳ್ಳುತ್ತಿಲ್ಲ ಎಂಬುದು ಸದ್ಯದ ಯಕ್ಷಪ್ರಶ್ನೆ.

ಒಟ್ಟಾರೆ, ನಗರಸಭೆಯಲ್ಲಿ ನಡೆಯುತ್ತಿರುವ ಆಡಳಿತದ ಬಗ್ಗೆ ಪ್ರಶ್ನಿಸುವವರೇ ಇಲ್ಲದಂತಾಗಿದ್ದು, ಬೆಕ್ಕಿನ ಕೊರಳಿಗೆ ಗಂಟೆ ಕಟ್ಟುವವರು ಯಾರು ಎಂಬ ಪ್ರಶ್ನೆ ಉದ್ಭವಿಸಿದೆ. ಇನ್ನಾದರೂ ಜಿಲ್ಲಾಧಿಕಾರಿಗಳು ಗಮನಹರಿಸುವುದು ಜರೂರಿ ಎನಿಸಿದೆ.

ಅನುಮಾನ ಸೃಷ್ಟಿಸಿದ ದಿನಾಂಕ ತಿದ್ದುಪಡಿ: ಅರ್ಜಿದಾರ ವಿಶ್ವನಾಥ ತುಕಾರಾಮ ಎಂಬುವರು ಲಕ್ಷ್ಮೀ ನಗರ ಬಡಾವಣೆಯ ಕೆಲ ನಿವೇಶನಗಳ ವರ್ಗಾವಣೆ ರದ್ದುಗೊಳಿಸಲು ಅರ್ಜಿ ನೀಡಿದ್ದು, ಇದರಲ್ಲಿ ದಿನಾಂಕ ತಿದ್ದುಪಡಿ ಮಾಡಿರುವುದು ಅನುಮಾನ ಸೃಷ್ಟಿಸುತ್ತಿದೆ. ಅಲ್ಲದೆ ಕಂದಾಯ ಅಧಿಕಾರಿ ಪವನಕುಮಾರ್ `ಕೂಡಲೇ ರದ್ದುಪಡಿಸಿ’ ಎಂದು ಬರೆದಿರುವ ಸಹಿಯ ಕೆಳಗಡೆ ದಿನಾಂಕ ಕೂಡ ತಿದ್ದುಪಡಿ ಮಾಡಲಾಗಿದ್ದು, ಏಕೆ ಹಾಗೂ ಯಾರು ತಿದ್ದಿದ್ದಾರೆ ಎಂಬ ಬಗ್ಗೆ ಸ್ಪಷ್ಟ ಉತ್ತರ ಸಿಗುತ್ತಿಲ್ಲ.

ಉಳಿದ ಅಧಿಕಾರಿಗಳಿಗೇಕಿಲ್ಲ ಶಿಕ್ಷೆ?: ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾದಗಿರಿ ಪೌರಾಯುಕ್ತ ಸಂಗಪ್ಪ ಉಪಾಸೆ ಅವರೇ ಡಿಸಿಗೆ ನೀಡಿರುವ ವರದಿಯಲ್ಲಿ ಯಾದಗಿರಿ ನಗರಸಭೆ ಖಾತಾ ನಕಲು ನಿವರ್ಾಹಕ ವಿಭಾಗದಲ್ಲಿ ಈ ಹಿಂದೆ ಕರ್ತವ್ಯದಲ್ಲಿದ್ದ ಲಕ್ಷ್ಮೀಬಾಯಿ ಡಿ.ಕೊಟಗೇರಾ ಹಾಗೂ ವ್ಯವಸ್ಥಾಪಕ ಮಲ್ಲಿಕಾರ್ಜುನ ಎಂಬುವರ ನಿರ್ಲಕ್ಷೃ ಎದ್ದು ಕಾಣುತ್ತಿದ್ದು, ಇವರಿಬ್ಬರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿದ್ದಾರೆ. ಆದರೆ ಇದುವರೆಗೆ ಈ ಇಬ್ಬರ ವಿರುದ್ಧ ಇದುವರೆಗೆ ಕ್ರಮ ಜರುಗದಿರುವುದು ನಗರಸಭೆ ಸುತ್ತ ಅನುಮಾನಗಳ ಹುತ್ತ ಸೃಷ್ಟಿಯಾದಂತಾಗಿದೆ.