ಡಿಡಿಪಿಐ ಆದೇಶಕ್ಕಿಲ್ಲ ಕಿಮ್ಮತ್ತು

ಕೆಂಭಾವಿ: ಪಟ್ಟಣದ ಬಾಲಕರ ಸರ್ಕಾರಿ ಪ್ರೌಢಶಾಲೆಗೆ ಉರ್ದು ಪ್ರೌಢಶಾಲೆ ಸ್ಥಳಾಂತರ ಆದೇಶವನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರು ರದ್ದುಗೊಳಿಸಿ ಆದೇಶ ಹೊರಡಿಸಿದ್ದರೂ ಅವರ ಆದೇಶ ಧಿಕ್ಕರಿಸಿ ಉರ್ದು ಪ್ರೌಢಶಾಲೆ ಮುಖ್ಯಗುರು ಶಾಲಾ ಸಾಮಗ್ರಿಗಳನ್ನು ಸ್ಥಳಾಂತರ ಮಾಡದೆ ಉದ್ಧಟತನ ಪ್ರದರ್ಶನ ಮಾಡಿದ ಪ್ರಸಂಗ ಸೋಮವಾರ ನಡೆಯಿತು.

ಬಾಲಕರ ಪ್ರೌಢಶಾಲೆ ಐದು ತರಗತಿಗಳಿಗೆ ಬೀಗ ಜಡಿದಿದ್ದರಿಂದ ವಿದ್ಯಾರ್ಥಿಗಳು ಅಕ್ಷರಹ ಬೀದಿಗೆ ಬಿದ್ದಂತಾಗಿದೆ. ಸೆ. 20ರಂದೆ ಸ್ಥಳಾಂತರ ಆದೇಶವನ್ನು ರದ್ದುಗೊಳಿಸಿದ್ದರೂ, ಶಾಲಾ ಕೊಠಡಿಗಳನ್ನು ಬಿಟ್ಟು ಹೋಗಲು ಮೀನಾಮೇಷ ಎಣಿಸುತ್ತಿರುವ ಉರ್ದು ಪ್ರೌಢ ಶಾಲೆಯ ಮುಖ್ಯಗುರುಗಳ ನಡೆ ಹಲವು ಅನುಮಾನಕ್ಕೆ ಕಾರಣವಾಗಿದೆ.

ಶಾಲೆಗೆ ಬೀಗ ಹಾಕಿದ್ದರಿಂದ ಶನಿವಾರ ಹಾಗೂ ಸೋಮವಾರವೂ ಬಾಲಕರ ಪ್ರೌಢಶಾಲೆ ವಿದ್ಯಾರ್ಥಿಗಳು ಶಾಲೆಯ ಹೊರಗೆ ಬಿಸಿಲಿನಲ್ಲಿ ಕುಳಿತು ತರಗತಿಗಳನ್ನು ಕೇಳುವ ಪರಿಸ್ಥಿತಿ ನಿಮರ್ಾಣವಾಯಿತು.

ಯಾವುದೇ ಶಾಲೆಯನ್ನು ಸ್ಥಳಾಂತರ ಮಾಡುವುದಿದ್ದರೆ ಎಸ್ಡಿಎಂಸಿ ಅಧ್ಯಕ್ಷರ ನೇತೃತ್ವದಲ್ಲಿ ಪಾಲಕರ ಸಭೆ ಕರೆದು ಪಾಲಕರ ಅನುಮತಿ ಪಡೆದು ಶಾಲೆ ಸ್ಥಳಾಂತರ ಮಾಡಬೇಕು ಎಂಬ ಸರ್ಕಾದ ಆದೇಶವಿದೆ. ಉರ್ದು ಶಾಲೆ ಮುಖ್ಯಗುರು ಇದಾವುದನ್ನು ಪಾಲಿಸದೇ ಏಕಾಏಕಿ ಗುರುವಾರ ಉರ್ದು ಶಾಲೆಯನ್ನು ಬಾಲಕರ ಶಾಲೆಗೆ ದಿಢೀರ್ ಸ್ಥಳಾಂತರ ಮಾಡಿದ ಬಗ್ಗೆ ಪಾಲಕರಲ್ಲಿ ಹಲವು ಅನುಮಾನ ಮೂಡಿದೆ. ಮೇಲಧಿಕಾರಿಗಳ ಆದೇಶಕ್ಕೂ ಬೆಲೆ ಇಲ್ಲವೆ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಕಾಡುತ್ತಿದೆ.

ಮೊದಲು ಇದ್ದಲ್ಲಿಯೇ ಉರ್ದು ಶಾಲೆ ನಡೆಸಬೇಕು. ಒಂದು ವೇಳೆ ಬಾಲಕರ ಪ್ರೌಢಶಾಲೆಗೆ ಉರ್ದು ಶಾಲೆ ಸ್ಥಳಾಂತರಗೊಂಡರೆ ವಿವಿಧ ಸಂಘಟನೆಗಳ ಹಾಗೂ ವಿದ್ಯಾರ್ಥಿಗಳ ಜತೆಗೂಡಿ ಶಾಲೆ ಬಂದ್ ಮಾಡುವ ಮೂಲಕ ಉಗ್ರ ಪ್ರತಿಭಟನೆ ನಡೆಸಲಾಗುವುದು.
| ವಿರುಪಾಕ್ಷಿ ಕರಡಕಲ್, ದಲಿತಪರ ಸಂಘಟನೆ ಮುಖಂಡ