ಶೇಂಗಾ ಬೀಜ ವಿತರಣೆ ಬಗ್ಗೆ ವರದಿ ನೀಡಿ

ಯಾದಗಿರಿ: ಜಿಲ್ಲೆಯಲ್ಲಿನ ರೈತರಿಗೆ ಶೇಂಗಾ ಬೀಜ ವಿತರಣೆ ಮಾಡುವಲ್ಲಿ ಅವ್ಯವಹಾರವಾಗಿದೆ ಎಂಬ ದೂರುಗಳು ವ್ಯಾಪಕವಾಗಿ ಕೇಳಿ ಬರುತ್ತಿದ್ದು, ಈ ಬಗ್ಗೆ ಸೂಕ್ತ ವರದಿ ನೀಡುವಂತೆ ಜಿಪಂ ಅಧ್ಯಕ್ಷ ಬಸರಡ್ಡಿ ಪಾಟೀಲ್ ಅನಪುರ ಜಂಟಿ ಕೃಷಿ ನಿರ್ದೇಶಕರಿಗೆ ಸೂಚನೆ ನೀಡಿದರು.

ಗುರುವಾರ ನಗರದ ಜಿಪಂ ಕಚೇರಿ ಸಭಾಂಗಣದಲ್ಲಿ ನಡೆದ ಮಾಸಿಕ ಕೆಡಿಪಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಶೇಂಗಾ ಬೀಜಗಳ ವಿತರಣೆಯಲ್ಲಿ ಅವ್ಯಹಾರ ನಡೆದಿದ್ದು, ರೈತರ ಬೇಡಿಕೆ ತಕ್ಕಂತೆ ಬೀಜಗಳು ವಿತರಣೆಯಾಗಿಲ್ಲ ಎಂಬ ಆರೋಪಗಳು ಕೇಳಿ ಬರುತ್ತಿವೆ. ಅಲ್ಲದೆ ಸಕಾಲಕ್ಕೆ ರೈತರಿಗೆ ಶೇಂಗಾ ಬೀಜವನ್ನು ವಿತರಿಸಲು ಕೃಷಿ ಇಲಾಖೆ ಮುಂದಾಗಿಲ್ಲವೇಕೆ? ಎಂದು ಖಾರವಾಗಿ ಪ್ರಶ್ನಿಸಿದರು.

ಇದಕ್ಕೆ ಉತ್ತರಿಸಿದ ಜಂಟಿ ಕೃಷಿ ನಿರ್ದೇಶಕಿ ಆರ್. ದೇವಿಕಾ, ಈ ಬಗ್ಗೆ ನಮಗೆ ಯಾವುದೇ ದೂರುಗಳು ಕೇಳಿ ಬಂದಿಲ್ಲ. ಆದರೂ ರೈತರಿಗೆ ವಿತರಣೆ ಮಾಡಿದ ಶೇಂಗಾ ಬೀಜದ ಬಗ್ಗೆ ಮಾಹಿತಿ ನೀಡಲಾಗುವುದು ಎಂದರು.

ಜಿಲ್ಲೆಯಲ್ಲಿ ಅರಣ್ಯ ಇಲಾಖೆಯಿಂದ 95 ಸಾವಿರ ಸಸಿಗಳನ್ನು ನಡೆಲಾಗಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಸಭೆಯ ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷ ಬಸರಡ್ಡಿ ಕೇವಲ ಸಸಿಗಳನ್ನು ನೆಟ್ಟರಷ್ಟೇ ಸಾಲದು ಅವುಗಳು ಬೆಳವಣಿಗೆಯಾಗುವವರೆಗೂ ಇಲಾಖೆಯಿಂದ ನಿರ್ವಹಣೆ ಮಾಡುವ ಕೆಲಸವಾಗಬೇಕು. ಜಿಲ್ಲೆಯಲ್ಲಿ ಅರಣ್ಯ ಪ್ರದೇಶದ ವ್ಯಾಪ್ತಿ ಕಡಿಮೆ ಇದ್ದು, ಹೆಚ್ಚು ಹೆಚ್ಚು ಗಿಡ ನೆಡಬೇಕಿದೆ. ಇದಕ್ಕಾಗಿ ಅರಣ್ಯ ಇಲಾಖೆಯಲ್ಲಿ ಸಾಕಷ್ಟು ಅನುದಾನ ಕೂಡ ಇದ್ದು ಅದನ್ನು ಸದ್ಬಳಕೆ ಮಾಡಿಕೊಳ್ಳುವಂತೆ ಸಲಹೆ ನೀಡಿದರು.

ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಡಿಯಲ್ಲಿನ ಕಾರ್ಯಕ್ರಮಗಳ ಬಗ್ಗೆ ವರದಿ ನೀಡದ ಅಧಿಕಾರಿಗಳ ವಿರುದ್ಧ ಹರಿಹಾಯ್ದ ಅಧ್ಯಕ್ಷರು, ಪ್ರತಿಬಾರಿಯ ಸಭೆಯಲ್ಲಿ ಮಾಹಿತಿ ತರುವಂತೆ ಅಧಿಕಾರಿಗಳಿಗೆ ಹೇಳುವುದೇ ದೊಡ್ಡ ಕೆಲಸವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಜಿಲ್ಲೆಯಲ್ಲಿ ಕೆಎಂಎಫ್ನಿಂದ ಪ್ರತಿನಿತ್ಯ 20 ಸಾವಿರ ಲೀಟರ್ ಹಾಲು ವಿತರಣೆಯಾಗುತ್ತಿದ್ದು, ಇದು ಇನ್ನೂ ಹೆಚ್ಚಬೇಕಿದೆ. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ಗಮನ ಹರಿಸುವಂತೆ ಸೂಚನೆ ನೀಡಿದರು.

ಸಭೆಯಲ್ಲಿ ಜಿಪಂ ಉಪಾಧ್ಯಕ್ಷೆ ಚಂದ್ರಕಲಾ ಯಾಳಗಿ, ಜಿಪಂ ಉಪ ಕಾರ್ಯದರ್ಶಿ ವಸಂತ ಕುಲಕರ್ಣಿ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.