ಸೌರಾಷ್ಟ್ರ ಅಧಿಪತಿ ಸೋಮನಾಥ ಕಾರ್ತಿಕೋತ್ಸವ

ಕಕ್ಕೇರಾ: ಪಟ್ಟಣದ ಆರಾಧ್ಯ ದೈವ ಸೌರಾಷ್ಟ್ರ ಅಧಿಪತಿ ಶ್ರೀ ಸೋಮನಾಥ ದೇವರ ಕಾರ್ತಿಕೋತ್ಸವ ಗುರುವಾರ ಸಂಜೆಯಿಂದ ಶುಕ್ರವಾರದವರೆಗೆ ಸಡಗರ, ಸಂಭ್ರಮದಿಂದ ಜರುಗಿತು.

ದೇವಾಲಯದ ಪ್ರಧಾನ ಅರ್ಚಕ ಪೂಜ್ಯ ನಂದಣ್ಣಪ್ಪ ಪೂಜಾರಿ ನೇತೃತ್ವದಲ್ಲಿ, ಕಳೆದೊಂದು ತಿಂಗಳಿನಿಂದ ದೇವಸ್ಥಾನದಲ್ಲಿ ಭಕ್ತರ ಜಯಘೋಷ ಹಾಗೂ ಡೊಳ್ಳುವಾದ್ಯಗಳ ನೀನಾದದೊಂದಿಗೆ ದೇವರಿಗೆ ಪ್ರತಿ ಗುರುವಾರ ಮತ್ತು ಭಾನುವಾರ ಎಲೆ ಕಟ್ಟುವಿಕೆ, ಅಂಬರಿ ಹೂ, ಹಾಗೂ ವಿವಿಧ ಹೂಗಳಿಂದ ವಿಶೇಷ ಪೂಜೆ ಸಲ್ಲಿಸಿ, ಗುಡಿಸುತ್ತಲೂ ದೇವರ ಪಲ್ಲಕ್ಕಿ ಸೇವೆ ಜರುಗುತ್ತಿತ್ತು.

ಕಾತರ್ಿಕೋತ್ಸವ ಕೊನೆಯ ದಿನವಾದ ಗುರುವಾರ ಸಂಜೆ ದೇವಾಲಯದ ಸೇವಕರು ಹಾಗೂ ಅಪಾರ ಭಕ್ತರೊಂದಿಗೆ ಪೂಜ್ಯ ನಂದಣ್ಣಪ್ಪ ಪೂಜಾರಿಯವರೊಂದಿಗೆ ಗಡ್ಡಿಹೊಳಿಗೆ ಗಂಗಾಸ್ನಾನಕ್ಕೆ ತೆರಳಿದರು. ನದಿಯಲ್ಲಿ ಪರಮಣ್ಣ ಪೂಜಾರಿ ಹಿರೇಮನಿಯವರು ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ನಂತರ ಪೂಜ್ಯರು ಪ್ರಥಮ ದೇವರ ಹೇಳಿಕೆ ಜರುಗಿತು. ನಂತರ ದೀವಟಿಗೆಯ ಬೆಳಕಿನೊಂದಿಗೆ ಪಟ್ಟಣದ ಜೋಡುಜಕ್ಕಪ್ಪ ಮಂದಿರಕ್ಕೆ ಆಗಮಿಸಿ, ಮಡಿವಾಳರ ಕಾಲನಿ, ಹಳೇ ಬಜಾರ ಮತ್ತು ಅಗಸಿ ಮೂಲಕ ಡೊಳ್ಳು ಹಾಗೂ ಬಾಜಾಭಜಂತ್ರಿಗಳೊಂದಿಗೆ ಪೂಜ್ಯರ ಆಡಿಕೆಯೊಂದಿಗೆ ಶುಕ್ರವಾರ ಬೆಳಗಿನ ಜಾವ ದೇವರು ದೇವಾಲಯದ ಪ್ರವೇಶಿ, ದೇವಾಲಯದ ಸುತ್ತಲೂ ಪ್ರದಕ್ಷಿಣೆ ಹಾಕಲಾಯಿತು. ನಂತರ ವಿಶೇಷ ಪೂಜೆ ಸಲ್ಲಿಸಿ ಕಾರ್ತಿಕೋತ್ಸವ ಮಂಗಲಗೊಂಡಿತು.
ಪಲ್ಲಕ್ಕಿಗೆ ವಿವಿಧ ಹೂಗಳಿಂದ ಶೃಂಗರಿಸಲಾಗಿತ್ತು. ಕಾರ್ತಿಕೋತ್ಸವ ನಿಮಿತ್ತ ಭಕ್ತರು ಹೋಳಿಗೆ ನೈವೇದ್ಯ, ಹೂ ಕಾಯಿ-ಕರ್ಪೂರ ಸಲ್ಲಿಸಿದರು.
ಸ್ಥಳೀಯ ಪೊಲೀಸ್ ಠಾಣಾ ಎಎಸ್ಐ ಭೀಮಾಶಂಕರ ಠಾಣಾಗುಂದಿ ಬಂದೋಬಸ್ತ್ ನೇತೃತ್ಸ ವಹಿಸಿದ್ದರು.