ರೈತರಿಂದ ಹಣ ಸುಲಿಯುತ್ತಿರುವ ಸಿಬ್ಬಂದಿ

ವಿಜಯವಾಣಿ ಸುದ್ದಿಜಾಲ ಗುರುಮಠಕಲ್
ಅಕ್ರಮ ಸಕ್ರಮ ಅರ್ಜಿ ನೀಡುವಲ್ಲಿ ಸ್ಥಳೀಯ ತಹಸಿಲ್ ಕಚೇರಿ ಸಿಬ್ಬಂದಿ ಅಕ್ರಮ ನಡೆಸುತ್ತಿದ್ದು, ಕೂಡಲೇ ಮೇಲಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಎಸ್ಯುಐಸಿ ಸಂಚಾಲಕಿ ಡಿ.ಉಮಾದೇವಿ ಆಗ್ರಹಿಸಿದರು.

ತಹಸಿಲ್ ಕಚೇರಿ ಆವರಣದಲ್ಲಿ ಶುಕ್ರವಾರ ರೈತ, ಕಾರ್ಮಿಕ ಸಂಘಟನೆ ಹಮ್ಮಿಕೊಂಡ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಸುಮಾರು 40 ವರ್ಷಗಳಿಂದ ದಾಖಲೆಗಳಿಲ್ಲದೆ ಸಾಗುವಳಿ ಮಾಡುತ್ತಿರುವ ರೈತರ ಜಮೀನನ್ನು ಸಕ್ರಮ ಮಾಡುವ ಉದ್ದೇಶದಿಂದ ಅಕ್ರಮ ಸಕ್ರಮ ಯೋಜನೆ ಜಾರಿಗೆ ತಂದಿದ್ದಾರೆ. ಇದೀಗ ಅದನ್ನು ಸಕ್ರಮಗೊಳಿಸಲು ಫಾರ್ಮ್​ ನಂ.57 ನೀಡಲಾಗುತ್ತಿದೆ. ನಿಯಮ ಪ್ರಕಾರ ಅರ್ಜೀ ಜತೆ ಚಾಲನ್ಗಾಗಿ 100ರೂ. ರೈತರು ಸಂದಾಯ ಮಾಡುತ್ತಿದ್ದಾರೆ. ಆದರೆ ಅರ್ಜಿ ನೀಡಿದ ಸಿಬ್ಬಂದಿ ಹಣ ಪಡೆದು ರಸೀದಿ ನೀಡಿಲ್ಲ. ಇದೀಗ ಆ ಅಧಿಕಾರಿ ಗೈರಾಗಿರುವ ಕಾರಣ ರೈತರು ಮತ್ತೆ ಹಣ ಸಂದಾಯ ಮಾಡಬೇಕಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅರ್ಜಿ ಸಲ್ಲಿಸಲು ಮಾ.15 ಕೊನೆಯ ದಿನವಾಗಿದೆ. ಆದರೆ ಇಲ್ಲಿನ ಕೆಚೇರಿಯಲ್ಲಿ ಉಚಿತ ಅರ್ಜಿ ವಿತರಿಸುವುದನ್ನು ನಿಲ್ಲಿಸಿದ್ದಾರೆ. ಇದರಿಂದಾಗಿ ಹೊರಗಡೆ ಮುಗ್ದ ಬಡ ರೈತರನ್ನು ವಂಚಿಸಿ ಅಜರ್ಿಗಾಗಿ ಹಣ ವಸೂಲಿ ಮಾಡುತ್ತಿದ್ದು, ಇದು ರೈತರಿಗೆ ಹೊರೆಯಾಗುತ್ತಿದೆ ಎಂದರು.

ಸಿಬ್ಬಂದಿ ಕೆಲಸಗಳನ್ನು ಕಚೇರಿ ಹೊರಗಡೆಯ ಝೀರಾಕ್ಸ್ ಅಂಗಡಿಗಳ ಮೂಲಕ ಮಾಡಿಸಿಕೊಳ್ಳ ಬೇಕಾಗುತ್ತದೆ. ಸಿಬ್ಬಂದಿ ಹಾಗೂ ಝೀರಾಕ್ಸ್ ಅಂಗಡಿಯವರ ಮಧ್ಯೆ ಒಳ ಒಪ್ಪಂದ ಏರ್ಪಟ್ಟು ರೈತರಿಗೆ ಮೋಸ ಮಾಡಲಾಗುತ್ತಿದೆ. ಕೂಡಲೇ ಸುತ್ತಲಿನ ಝೀರಾಕ್ಸ್ ಅಂಗಡಿಗಳನ್ನು ತೆರವುಗೊಳಿಸಬೇಕು. ರೈತರ ಸಮಸ್ಯೆ ಬಗೆಹರಿಸಬೇಕು. ಇಲ್ಲಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಸಿದರು.
ತಹಸೀಲ್ದಾರ್ ಇಜಾಜುಲ್ ಹಕ್ ಅವರಿಗೆ ಮನವಿ ಸಲ್ಲಿಸಲಾಯಿತು. ರೈತರಾದ ಸಿದ್ದಪ್ಪ, ಖಾಜಾ ಮೋಯಿನೊದ್ದೀನ್, ಸೈದಪ್ಪ, ಜಲ್ಲಪ್ಪ, ಅಯ್ಯಪ್ಪ, ರವಿ ರಾಠೋಡ ಇತರರಿದ್ದರು.

Leave a Reply

Your email address will not be published. Required fields are marked *