ಲೋಕ ಸಮರಕ್ಕೆ ಸಿದ್ಧಗೊಂಡ ಮಾಜಿ ಮಂತ್ರಿ ಚಿಂಚನಸೂರ

ದಿನೇಶ ಶುಕ್ಲಾ ಗುರುಮಠಕಲ್
ವಿಧಾನಸಭೆ ಚುನಾವಣೆಯಲ್ಲಿ ಪರಾಭವಗೊಂಡ ನಂತರ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿರುವ ಮಾಜಿ ಸಚಿವ ಬಾಬುರಾವ್ ಚಿಂಚನಸೂರ ಸದ್ದಿಲ್ಲದೆ ಮತಕ್ಷೇತ್ರದಲ್ಲಿ ಪಕ್ಷ ಸಂಘಟನೆಗೆ ಅಣಿಯಾಗುತ್ತಿದ್ದಾರೆ.

2018ರ ವಿಧಾನಸಭೆ ಚುನಾವಣೆಯಲ್ಲಿ ಸ್ವಪಕ್ಷಿಯರೇ ನನ್ನ ಬೆನ್ನಿಗೆ ಚೂರಿ ಹಾಕಿದ್ದಾರೆ ಎಂದು ಹೇಳುತ್ತಲೇ ಕಾಂಗ್ರೆಸ್ನಿಂದ ಹೊರಬಂದ ಚಿಂಚನಸೂರ ನಾಲ್ಕು ತಿಂಗಳ ಹಿಂದಷ್ಟೇ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಕಮಲ ಬಾವುಟ ಹಿಡಿದಿದ್ದರು. ತದನಂತರ ಮತಕ್ಷೇತ್ರದ ಕಡೆ ಹೆಚ್ಚಾಗಿ ಮುಖ ಮಾಡದ ಚಿಂಚನಸೂರ ನಡೆಯಿಂದ ಕಂಗಾಲಾಗಿದ್ದ ಬೆಂಬಲಿಗರು ಎಲ್ಲಿ ಬಾಬುರಾವ್ ಮತ್ತೆ ಕಾಂಗ್ರೆಸ್ ಕದ ತಟ್ಟುತ್ತಾರೆಯೋ ಎಂಬ ಆತಂಕಕ್ಕೆ ಒಳಗಾಗಿದ್ದರು.

ಈ ಎಲ್ಲ ಬೆಳವಣಿಗೆಗಳ ಮಧ್ಯೆ ಸ್ವತಃ ಬಾಬುರಾವ್ ಚಿಂಚನಸೂರ ಅವರು ನಾನು ಯಾವುದೇ ಕಾರಣಕ್ಕೂ ಕಾಂಗ್ರೆಸ್ಗೆ ಮರು ಸೇರ್ಪಡೆಗೊಳ್ಳುವುದಿಲ್ಲ, ಬಿಜೆಪಿಯಲ್ಲಿ ಇದ್ದುಕೊಂಡೇ ಕ್ಷೇತ್ರದ ಜನರ ಸೇವೆ ಮುಂದುವರಿಸುತ್ತೇನೆ ಎಂದು ಸ್ಪಷ್ಟನೆ ನೀಡಿದ್ದಾರೆ. ಇದರಿಂದ ಅವರನ್ನು ನಂಬಿರುವ ಕಾರ್ಯಕರ್ತರು ನಿಟ್ಟುಸಿರು ಬಿಟ್ಟಿದ್ದಾರೆ.

ಕೋಲಿ ಸಮಾಜದ ಮತಗಳೇ ನಿರ್ಣಾಯಕವಾಗಿರುವ ಗುರುಮಠಕಲ್ ಕ್ಷೇತ್ರದಲ್ಲಿ ಮಾಜಿ ಮಂತ್ರಿ ಬಾಬುರಾವ್ ಚಿಂಚನಸೂರ ನೆಟ್ವಕರ್್ ಇನ್ನೂ ಉಳಿಸಿಕೊಂಡಿದ್ದಾರೆ. ತಮ್ಮ ವರ್ಣರಂಜಿತ ರಾಜಕಾರಣದಿಂದ ಸದಾ ಜನರನ್ನು ಸೆಳೆಯುವ ಚಾಕಚಕ್ಯತೆ ಹೊಂದಿರುವ ಚಿಂಚನಸೂರ ಬಿಜೆಪಿ ಸೇರಿರುವುದು ಪಕ್ಷಕ್ಕೆ ಆನೆಬಲ ಬಂದಂತಾಗಿದೆ ಎಂದು ಕಮಲ ಪಕ್ಷದ ನಾಯಕರೇ ಹೇಳಿಕೊಳ್ಳುತ್ತಿದ್ದಾರೆ.

ಕಾಂಗ್ರೆಸ್ ಭದ್ರಕೋಟೆ ಎಂದೇ ಕರೆಸಿಕೊಂಡಿದ್ದ ಗುರುಮಠಕಲ್ ಕಳೆದ ಚುನಾವಣೆಯಲ್ಲಿ ದಳಪತಿಗಳ ವಶವಾಗಿದ್ದು, ಲೋಕಸಭೆ ಚುನಾವಣೆಯಲ್ಲಿ ಕೈ ಅಭ್ಯಥರ್ಿಗೆ ಬಲವಾದ ಹೊಡೆತ ನೀಡುವ ಮಾತುಗಳನ್ನು ಅಲ್ಲಗಳೆಯುವಂತಿಲ್ಲ. ಇತ್ತ ಒಡೆದ ಮನೆಯಂತಾಗಿರುವ ಕಾಂಗ್ರೆಸ್ನಲ್ಲಿ ಸ್ಥಳೀಯ ಲೀಡರ್ಶಿಪ್ಗೆ ಮುಖಂಡರಲ್ಲೇ ಭಿನ್ನಸ್ವರಗಳು ಕೇಳಿ ಬರುತ್ತಿವೆ. ಈ ಎಲ್ಲ ವಿದ್ಯಮಾನಗಳ ನಡುವೆ ಚಿಂಚನಸೂರ ಮತ್ತೆ ಕ್ಷೇತ್ರದಲ್ಲಿ ಆ್ಯಕ್ಟಿವ್ ಆಗಿ ಓಡಾಡಲು ಮುಂದಾದರೆ ಜೆಡಿಎಸ್ ಮತ್ತು ಕಾಂಗ್ರೆಸ್ನಲ್ಲಿ ತಳಮಳ ಸೃಷ್ಟಿ ಆಗುವುದಂತೂ ಗ್ಯಾರಂಟಿ ಎಂಬ ಮಾತುಗಳು ಕೇಳಿ ಬರುತ್ತಿವೆ. ಒಟ್ಟಾರೆ, ಲೋಕಸಭೆ ಚುನಾವಣೆಗೆ ಸದ್ದಿಲ್ಲದೆ ಪಾ್ಲೃನ್ ರೂಪಿಸುತ್ತಿರುವ ಬಾಬುರಾವ್ ಚಿಂಚನಸೂರ ಅವರಿಗೆ ಕ್ಷೇತ್ರದ ಮತದಾರ ಮನ್ನಣೆ ನೀಡುವನೆ? ಕಾದು ನೋಡಬೇಕು.