ಮನಸ್ಸಿನ ಗೊಂದಲಗಳಿಗೆ ವಿವೇಕ ಚಿಂತನೆ ಮುಲಾಮು

ಯಾದಗಿರಿ: ಭಾವಿ ಜೀವನ ಉಜ್ವಲಗೊಳಿಸಿಕೊಳ್ಳಲು ಯಾವ ರೀತಿ ಪರಿಶ್ರಮ ಪಡಬೇಕು. ಗುರಿ ಸಾಧನೆಗೆ ಕಂಡುಕೊಳ್ಳುವ ಮಾರ್ಗ, ಅಡೆ-ತಡೆಗಳ ಮಧ್ಯೆ ಯಶಸ್ವಿ ಸಾಧಕರಾಗಿ ಹೊರಹೊಮ್ಮುವ ಬಗೆ ಹೀಗೆ ಹತ್ತು ಹಲವು ವಿಷಯಗಳ ಬಗ್ಗೆ ಪ್ರಶ್ನೋತ್ತರಗಳ ಮೂಲಕ ಅರ್ಥಪೂರ್ಣ ಚಿಂತನ-ಮಂಥನಕ್ಕೆ ಸಂವಾದ ವೇದಿಕೆ ಒದಗಿಸಿಕೊಟ್ಟಿತು.

ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆ ನಿಮಿತ್ತ ನಾಡಿನ ನಂ.1 ಕನ್ನಡ ದಿನಪತ್ರಿಕೆ ವಿಜಯವಾಣಿ ಹಾಗೂ ದಿಗ್ವಿಜಯ 24×7 ನ್ಯೂಸ್ ಚಾನಲ್ ವತಿಯಿಂದ ನಗರದ ಸರ್ಕಾರಿ ಡಿಗ್ರಿ ಕಾಲೇಜು ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ರಾಷ್ಟ್ರೀಯ ಯುವ ದಿನ ಮತ್ತು ಸಾಧಕರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಸಮೂಹ ತಮ್ಮ ಭವಿಷ್ಯದ ತವಕ, ತಲ್ಲಣಗಳಿಗೆ ಸಮಾಧಾನಕರ ಪರಿಹಾರಸೂತ್ರ ಕಂಡುಕೊಂಡಿತು.

ಜೀವನದ ಪಥವನ್ನು ಆಯ್ಕೆ ಮಾಡಿಕೊಳ್ಳುವಾಗ ಮನದಲ್ಲಿ ಎದ್ದೇಳುವ ಗೊಂದಲಗಳಿಗೆ ಉಪಶಮನ ನೀಡುವ ವಿಧಾನವನ್ನು ಎಳೆಎಳೆಯಾಗಿ ಬಿಚ್ಚಿಟ್ಟ ಸಾಧಕರು, ಸ್ವಾಮಿ ವಿವೇಕಾನಂದರ ಜೀವನ ಚರಿತ್ರೆಯನ್ನು ಕ್ರಮವಾಗಿ ಹೇಳಿ ವಿದ್ಯಾರ್ಥಿಗಳ ಮನೋಬಲ ಹೆಚ್ಚಿಸಿದರು.

ಕಾರ್ಯಕ್ರಮ ಉದ್ಘಾಟಿಸಿದ ಸಿಲ್ಲಿ-ಲಲ್ಲಿ ಧಾರಾವಾಹಿ ಖ್ಯಾತಿಯ ಕಲಾವಿದ ಹಾಗೂ ನಗರಸಭೆ ಪೌರಾಯುಕ್ತ ಸಂಗಮೇಶ ಉಪಾಸೆ ಮಾತನಾಡಿ, ಸ್ವಾಮಿ ವಿವೇಕಾನದಂರ ಜೀವನ ಚರಿತ್ರೆಯ ಒಂದೊಂದೇ ಪುಟಗಳನ್ನು ವಿದ್ಯಾರ್ಥಿಗಳಿಗೆ ಪರಿಚಯ ಮಾಡಿಕೊಟ್ಟರು.

ಮನಸ್ಸಿನ ಅಸ್ಮಿತೆಗಳಿಗೆ ಬೆಲೆ ಕೊಡಲಾಗಿದೆ ಎಂದು ನಾವು ಮಾನಸಿಕ ವ್ಯಭಿಚಾರಕ್ಕೆ ಒಳಗಾಗುತ್ತಿದ್ದೇವೆ. ಇಂದಿನ ಯುವ ಜನತೆ ಜೀವನದ ಸಾಧನೆ ಪಥದತ್ತ ಸಾಗುತ್ತಿರುವಾಗ ಮಾನಸಿಕ ಖಿನ್ನತೆಗೆ ಒಳಗಾಗಿ ನನ್ನಿಂದ ಏನನ್ನೂ ಸಾಧನೆ ಮಾಡಲು ಸಾಧ್ಯವಿಲ್ಲ ಎಂಬ ಮನಸ್ಥಿತಿಗೆ ಒಳಗಾಗುತ್ತಿರುವುದು ದೊಡ್ಡ ದುರಂತ. ಇಂಥ ಮನಸ್ಥಿತಿ ಹೊಂದಿದ ಯುವ ಜನಾಂಗ ಸ್ವಾಮಿ ವಿವೇಕಾನಂದರ ಜೀವನ ಚರಿತ್ರೆಯನ್ನು ಅಧ್ಯಯನ ಮಾಡುವ ಅಗತ್ಯವಿದೆ. ಯಾವುದೇ ಜಾತಿ, ಮತ, ಪಂಥಗಳನ್ನು ಮೀರಿ ಮನುಷ್ಯ ವಿಶ್ವಮಾನವನಾಗಬೇಕು ಎಂದು ವಿವೇಕಾನಂದರು ಅಂದೇ ಹೇಳಿದ್ದರೂ ನಾವು ಅಥೈರ್ಸಿಕೊಳ್ಳುವಲ್ಲಿ ಎಡವಿರುವುದು ವರ್ತಮಾನದ ದುರಂತ ಎಂದು ಕಳವಳ ವ್ಯಕ್ತಪಡಿಸಿದರು.

ಯೋಗ ಮತ್ತು ವೇದಗಳನ್ನು ಬದುಕಿನ ಕಣ್ಣುಗಳನ್ನಾಗಿ ಮಾಡಿಕೊಂಡಿದ್ದರು ವಿವೇಕಾನಂದರು. 1897ರ ವೇಳೆಗೆ ಶ್ರೀ ರಾಮಕೃಷ್ಣ ಮಠವನ್ನು ಸ್ಥಾಪನೆ ಮಾಡಿ ತನ್ಮೂಲಕ ವೇದಗಳ ಬಗ್ಗೆ ಜಾಗೃತಿ ಮೂಡಿಸಲು ಮುಂದಾದರು. ಮನಸ್ಸಿನ ಗೊಂದಲಗಳಿಗೆ ಮುಲಾಮು ಹಚ್ಚಬೇಕಾದರೆ ವಿವೇಕಾನಂದರ, ರಾಮಕೃಷ್ಣರ ಜೀವನವನ್ನು ಅಧ್ಯಯನ ಮಾಡಬೇಕು ಎಂದು ಕರೆ ನೀಡಿದರು.

ತಳ ಸಮುದಾಯಗಳು ಶಂಕರಾಚಾರ್ಯರ, ರಾಮಾನುಜಾಚಾರ್ಯರ ಹಾಗೂ ಮಧ್ವಾಚಾರ್ಯರ ಜಯಂತಿ ಆಚರಿಸಿದರೆ, ಮೇಲ್ವರ್ಗದವರು ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಆಚರಣೆ ಮಾಡುವಂತಾದಾಗ ಮಾತ್ರ ಸಮಾಜದಲ್ಲಿ ಬದಲಾವಣೆ ಕಾಣಲು ಸಾಧ್ಯ. ಅಂದಾಗಲೇ ವಿವೇಕಾನಂದರು ಕಂಡ ಕನಸಿನ ಭಾರತ ನನಸಾಗಿಸಲು ಸಾಧ್ಯ ಎಂದು ಪ್ರತಿಪಾದಿಸಿದರು.

ಶ್ರೀ ರಾಮಕೃಷ್ಣ ವಿವೇಕಾನಂದ ಆಶ್ರಮದ ಸಂಚಾಲಕ ಪಿ.ಗೋಣುಗೋಪಾಲ ವಿಶೇಷ ಉಪನ್ಯಾಸ ನೀಡಿ, ಜೀವನ ಚಕ್ರವಿದ್ದಂತೆ. ವಿದ್ಯಾರ್ಥಿಗಳು ಯೌವನದ ದುರುಪಯೋಗ ಮಾಡಿಕೊಂಡರೆ ಸಾಧನೆ ಮಾಡಲು ಸಾಧ್ಯವಿಲ್ಲ. 4 ವರ್ಷದ ಈ ಸಮಯವನ್ನು ಸದುಪಯೋಗ ಮಾಡಿಕೊಳ್ಳುವ ಮಹತ್ತರ ಜಿಮ್ಮೇದಾರಿ ನಿಮ್ಮ ಕೈಯಲ್ಲಿದೆ ಎಂದರು.

ಮಗ ಪರೀಕ್ಷೆಯಲ್ಲಿ ಉತ್ತೀರ್ಣನಾದರೂ, ಅನುತ್ತೀರ್ಣನಾದರೂ ತಾಯಿ ಅನ್ನ ಹಾಕುತ್ತಾಳೆ. ಅಂಥ ತಾಯಿ ಮನಸ್ಸಿಗೆ ಘಾಸಿಗೊಳಿಸುವಂಥ ಕೆಲಸ ಯಾವ ಮಕ್ಕಳೂ ಮಾಡಬಾರದು. ಸ್ವಾಮಿ ವಿವೇಕಾನಂದರು ಹೇಳಿದ್ದು ಇದನ್ನೇ. ಯುವಕರು ವಿವೇಕಾನಂದರ ಕೊಲಂಬೊದಿಂದ ಅಲ್ಮೋರಾವರೆಗೆ ಎಂಬ ಪುಸ್ತಕ ಅಧ್ಯಯನ ಮಾಡಿದ್ದಲ್ಲಿ ಜೀವನ ಎಂದರೆ ಏನು ಎಂಬುದು ತಿಳಿಯುತ್ತದೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಡಾ.ಸುಭಾಶ್ಚಂದ್ರ ಕೌಲಗಿ ಮಾತನಾಡಿ, ಇಂದು ನಾವು ಜಾತಿ ಅಂತಸ್ತು ಮೀರಿ ಮಾನವೀಯ ಮೌಲ್ಯಗಳಿಗೆ ಬೆಲೆ ಕೊಡಬೇಕಿದೆ. ಸ್ವಾಮಿ ವಿವೇಕಾನಂದರು ಮನುಷ್ಯನ ಜೀವನವನ್ನು ವ್ಯರ್ಥಗೊಳಿಸದೆ ಸಾರ್ಥಕಗೊಳಿಸಬೇಕಿದೆ. ವಿಜಯವಾಣಿ ದಿನಪತ್ರಿಕೆ ಮಾಧ್ಯಮ ಕ್ಷೇತ್ರದಲ್ಲಿ ನಿಂತ ನೀರಾಗದೆ, ನಿರಂತರ ಹರಿಯುವ ಸೆಲೆಯಾಗಿದೆ. ಹೊಸ ಹೊಸ ಪ್ರಯೋಗಗಳ ಮೂಲಕ ಸಮಸ್ತ ಕನ್ನಡಿಗರ ಮಾನಸದಲ್ಲಿ ಅಚ್ಚಳಿಯದೆ ಉಳಿದಿದೆ ಎಂದು ಶ್ಲಾಘಿಸಿದರು.

ಪತ್ರಿಕೆ ಜಿಲ್ಲಾ ವರದಿಗಾರ ಲಕ್ಷ್ಮೀಕಾಂತ್ ಕುಲಕರ್ಣಿ ಪ್ರಾಸ್ತಾವಿಕ ಮಾತನಾಡಿದರು. ಉಪನ್ಯಾಸಕ ಡಾ.ಮೋನಯ್ಯ ಕಲಾಲ ಸ್ವಾಗತಿಸಿದರು. ಡಾ.ಮರಿಯಪ್ಪ ನಾಟೇಕಾರ ನಿರೂಪಣೆ ಮಾಡಿದರು. ಜಾಹಿರಾತು ಪ್ರತಿನಿಧಿ ನಾರಾಯಣ ಕುಲಕರ್ಣಿ, ಉಪನ್ಯಾಸಕರು ಮತ್ತು ವಿದ್ಯಾರ್ಥಿ, ವಿದ್ಯಾರ್ಥಿನಿಯರು ಇದ್ದರು.

ರಾಮಕೃಷ್ಣರಿಗೆ ವಿವೇಕಾನಂದರ ಮೇಲಿದ್ದ ಪ್ರೇಮವೇ ವಿಶಿಷ್ಟವಾದದ್ದು. ಸ್ವತಃ ತಾನು ತಲುಪಿಸಲು ಅಸಾಧ್ಯವಾದ ತನ್ನ ಸಂದೇಶಗಳನ್ನು ಜಗತ್ತಿಗೆ ತಲುಪಿಸಬಲ್ಲ ಸೂಕ್ತ ವ್ಯಕ್ತಿಯೇ ವಿವೇಕಾನಂದ ಎಂಬ ಸಂಪೂರ್ಣ ಅರಿವು ಅವರಿಗಿತ್ತು. ವಿವೇಕಾನಂದರು ಸಹ ರಾಮಕೃಷ್ಣರ ಕುರಿತು ಅಷ್ಟೇ ಆಕಷರ್ಿತರಾಗಿದ್ದರು. ತನ್ನ ವಯಸ್ಸಿನ ಇತರ ಯುವಕರಂತೆ ಉದ್ಯೋಗ ಅಥವಾ ಆಕರ್ಷಣೆ ಇತ್ಯಾದಿಗಳ ಕಡೆ ಸಾಗದೆ ಸದಾ ರಾಮಕೃಷ್ಣರನ್ನೇ ಅನುಸರಿಸುತ್ತಿದ್ದರು.
| ಪಿ.ವೇಣುಗೋಪಾಲ ಶ್ರೀ ರಾಮಕೃಷ್ಣ ಆಶ್ರಮದ ಸಂಚಾಲಕ

Leave a Reply

Your email address will not be published. Required fields are marked *