ಪ್ರಯಾಣಿಕರೆ ಗಮನಿಸಿ ಫುಟ್ಪಾತ್, ತಿರುವಿನಲ್ಲಿ ಎಚ್ಚರ !!

ಲಕ್ಷ್ಮೀಕಾಂತ್ ಕುಲಕರ್ಣಿ ಯಾದಗಿರಿ
ನೀವು ನಗರದ ಮುಖ್ಯ ರಸ್ತೆಗಳಲ್ಲಿ ಸಂಚರಿಸಬೇಕಾದರೆ ತಿರುವಿನಲ್ಲಿ ಹುಷಾರ್ನಿಂದ ಸಾಗಬೇಕು. ಇನ್ನು ಚರಂಡಿಗಳ ಮೇಲೆ ನಿರ್ಮಿಸಿದ ಪಾದಚಾರಿ ಮಾರ್ಗದಲ್ಲಿ ನಡೆದಾಡಬೇಕಾದರೆ ಮೈಯೆಲ್ಲ ಕಣ್ಣಾಗಿಸಲೇಬೇಕು. ಅಷ್ಟರ ಮಟ್ಟಿಗೆ ಮುಖ್ಯ ರಸ್ತೆಯ ತಿರುವು ಮತ್ತು ಫುಟ್ಪಾತ್ಗಳು ಅಪಾಯಕಾರಿಯಾಗಿವೆ.

ಮೈಲಾಪುರ ಬೇಸ್ನಿಂದ ಲಾಲ್ ಬಹದ್ದೂರ್ ಶಾಸ್ತ್ರಿ ವೃತ್ತ ಹಾಗೂ ಸುಭಾಷ ವೃತ್ತದಿಂದ ಬಸವೇಶ್ವರ ಗಂಜ್ವರೆಗಿನ ಮುಖ್ಯ ರಸ್ತೆಯಲ್ಲಿ ನಿಮರ್ಿಸಿದ ತಿರುವುಗಳಲ್ಲಿ ಕಂದಕಗಳು ಸೃಷ್ಠಿಯಾಗಿ ಪ್ರಯಾಣಿಕರ ಪ್ರಾಣಕ್ಕೆ ಸಂಚಕಾರ ತರುತ್ತಿರುವುದು ಒಂದೆಡೆಯಾದರೆ, ಮತ್ತೊಂದೆಡೆ ಪಾದಚಾರಿಗಳ ಫುಟ್ಪಾತ್ಗಳಲ್ಲಿ ಕಬ್ಬಿಣದ ಸಲಾಕೆಗಳನ್ನು ಹಾಗೆಯೇ ಬಿಟ್ಟಿದ್ದರಿಂದ ಅವಘಡಕ್ಕೆ ಕೈಬೀಸಿ ಕರೆಯುವಂತಿವೆ.

ನಗರದಲ್ಲಿ ರಸ್ತೆ ಅಗಲೀಕರಣದ ಬಳಿಕ ಹೊಸ ರಸ್ತೆಗಳನ್ನು ನಿಮರ್ಿಸಲಾಗಿದೆ. ವಿಶೇಷವಾಗಿ ಮೈಲಾಪುರ ಬೇಸ್ನಿಂದ ನಗರಸಭೆ ಕಚೇರಿವರಗಿನ ಮುಖ್ಯರಸ್ತೆ ಪಕ್ಕದ ಪಾದಚಾರಿ ಮಾರ್ಗದುದ್ದಕ್ಕೂ ಅಲ್ಲಲ್ಲಿ ಕಂದಕಗಳನ್ನು ಬಿಡಲಾಗಿದೆ. ಹೀಗೇಕೆ ಎಂಬ ಪ್ರಶ್ನೆಗೆ ಕಾಮಗಾರಿ ಪೂರ್ಣಗೊಳಿಸಿದ ಅಧಿಕಾರಿಗಳ ಬಳಿಯೂ ಉತ್ತರ ಇಲ್ಲವಾಗಿದೆ.

ಮುಖ್ಯರಸ್ತೆ ಪಕ್ಕದ ಫುಟ್ಪಾತ್ ಯಾವ ಭಂಗಿಯಿಂದ ನೋಡಿದರೂ ಪಾದಚಾರಿಗಳ ಅನುಕೂಲಕ್ಕಾಗಿ ನಿರ್ಮಿಸಲಾಗಿದೆ ಎಂದು ಅನಿಸೋದಿಲ್ಲ. ಚರಂಡಿಗಳ ಮೇಲೆ ಒಂದಿಷ್ಟು ಸಿಮೆಂಟ್ ಬೆಡ್ ಹಾಕಿ ಗುತ್ತಿಗೆದಾರರು ಕೈ ತೊಳೆದುಕೊಂಡಿದ್ದು, ಜನತೆ ಗುಟ್ಖಾ ಜಿಗಿದು ಉಗಿದಿರುವ ಕಲೆಗಳೇ ಕಲರ್ ನೀಡಿವೆ. ಇನ್ನೂ ಆತಂಕಕಾರಿ ಸಂಗತಿ ಎಂದರೆ, ಈ ಫುಟ್ಪಾತ್ನುದ್ದಕ್ಕೂ ಅಲ್ಲಲ್ಲಿ ಬಿಟ್ಟಿರುವ ಗ್ಯಾಪ್ಗಳು. ಸಿಮೆಂಟ್ನಿಂದ ಮಾಡಿದ ಬೆಡ್ನ ಕೆಳಗಡೆ ತುಕ್ಕು ಹಿಡಿದಿರುವ ಕಬ್ಬಿಣದ ಸಲಾಕೆಗಳು ತೀರಾ ಅಪಾಯಕಾರಿ ಆಗಿದ್ದು, ಪಾದಚಾರಿಗಳು ಸ್ವಲ್ಪ ಮೈಮರೆತರೂ ಸಲಾಕೆಗಳು ದೇಹಕ್ಕೆ ಸೇರುವುದು ಗ್ಯಾರಂಟಿ.

ಇನ್ನು ಮುಖ್ಯ ರಸ್ತೆಯಲ್ಲಿನ ಯು ಟನರ್್ಗಳು ಕೂಡ ಅಪಾಯಕ್ಕೆ ಆಹ್ವಾನಿಸುವಂತಿವೆ. ರಸ್ತೆ ನಿರ್ಮಿಸುವ ವೇಳೆ ತೋರಿದ ನಿರ್ಲಕ್ಷೃದಿಂದ ಸಾರ್ವಜನಿಕರು ಪ್ರತಿನಿತ್ಯ ತೊಂದರೆ ಅನುಭವಿಸುವಂತಾಗಿದೆ. ಶುಭಂ ಪೆಟ್ರೋಲ್ ಬಂಕ್ನ ಮುಖ್ಯರಸ್ತೆ ತಿರುವಿನಲ್ಲಿ ಬೈಕ್ನಿಂದ ಬಿದ್ದು ಕೈ ಕಾಲು ಮುರಿದುಕೊಂಡವರ ಸಂಖ್ಯೆ ಹೆಚ್ಚುತ್ತಿದ್ದರೂ ಸಂಬಂಧಿಸಿದ ಅಧಿಕಾರಿಗಳು ನಜರ್ ಹರಿಸದಿರುವುದು ದುರ್ದೈವದ ಸಂಗತಿ.

ಪ್ರತಿನಿತ್ಯ ಇದೇ ರಸ್ತೆಗಳ ಮೇಲೆ ಸಂಚರಿಸುವ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಈ ಆ್ಯಕ್ಸಿಡೆಂಟ್ ಜೋನ್ ಕಣ್ಣಿಗೆ ಬೀಳುತ್ತಿಲ್ಲವೇ? ಅಥವಾ ಬಿದ್ದರೂ ಜಾಣಕುರುಡು ಪ್ರದಶರ್ಿಸುತ್ತಿದ್ದಾರೆಯೇ ಎಂಬ ಅನುಮಾನ ಮೂಡಿದೆ.

ಇದ್ದೂ ಇಲ್ಲದಂತಾದ ನಗರಸಭೆ: ನಗರದಲ್ಲಿ ರಸ್ತೆ ಹಾಗೂ ಚರಂಡಿಗಳು ಅಧೋಗತಿಗಳಿದಿದ್ದರೂ ನಗರಸಭೆ ಅಧಿಕಾರಿಗಳು ನಿದ್ರಾವಸ್ಥೆಯಲ್ಲಿ ಇರುವುದು ವಿಪರ್ಯಾಸ. ನಗರಸಭೆ ಚುನಾವಣೆ ಮುಗಿದು ಮೂರು ತಿಂಗಳಾದರೂ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳ ಆಯ್ಕೆಗೆ ದಿನ ನಿಗದಿಗೊಳಿಸಲು ಸರ್ಕಾರ ಮೀನಮೇಷ ಎಣಿಸುತ್ತಿರುವ ಕಾರಣ ಅಧಿಕಾರಿಗಳಿಗೆ ಒಂದು ರೀತಿಯಿಂದ ಸುಗ್ಗಿಯಾಗಿಬಿಟ್ಟಿದೆ. ಬೆಕ್ಕು ಇರದ ಮನೆಯಲ್ಲಿ ಇಲಿ ಲಗಾಟಿ ಹೊಡೆದಂತೆ, ಪುರಪಿತೃಗಳಿಗೆ ಅಧಿಕಾರ ಸಿಗದ ಕಾರಣ ಅಧಿಕಾರಿಗಳು ಆಡಿದ್ದೇ ಆಟವಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.