ನಮ್ ಸಾಲಿ ಪ್ರಾಬ್ಲಮ್ ಸಾಲೋ ಮಾಡಿ !

ವಿಜಯವಾಣಿ ಸುದ್ದಿಜಾಲ ಯಾದಗಿರಿ
ಸರ್, ನಮ್ ಸಾಲ್ಯಾಗ್ ಕುಡ್ಯಾಕ್ ನೀರಿಲ್ರಿ. ಸಾಲಿ ಇದ್ರೂ ಆಟ ಆಡಕ್ಕ ಮೈದಾನ ಇಲ್ರಿ. ಸಾಲ್ಯಾಗ್ ಇಂಗ್ಲಿಷ್ ಮಾಸ್ತರೇ ಇಲ್ಲ. ಪ್ಲೀಸ್, ಹೆಂಗಾರ ಮಾಡಿ ನಮ್ ಪ್ರಾಬ್ಲಮ್ ಸಾಲೋ ಮಾಡ್ರಿ… ಮೇಲಿನ ಸಾಲುಗಳೊಮ್ಮೆ ಓದಿದರೆ ನಿಮಗೆ ಅರ್ಥವಾಗಿರಬಹುದು ಇದು ಅಪ್ಪಟ ಶಾಲಾ ಮಕ್ಕಳ ದೂರು ಎಂಬುದು.

ಜಿಲ್ಲಾ ಬಾಲಭವನ ಮಂಗಳವಾರ ಜಿಲ್ಲೆಯ ವಿವಿಧ ಶಾಲಾ ಮಕ್ಕಳಿಂದ ಗಿಜುಗುಡುತ್ತಿತ್ತು. ಅಲ್ಲಿ ಸೇರಿದ್ದ ಮಕ್ಕಳ ಮೊಗದಲ್ಲಿ ನಮ್ಮ ಶಾಲೆ ಸಮಸ್ಯೆ ಬಗ್ಗೆ ಜಿಲ್ಲಾಡಳಿತದ ಗಮನ ಸೆಳೆಯುವ ತವಕ ಎದ್ದು ಕಾಣುತ್ತಿತ್ತು. ಪ್ರತಿಯೊಂದು ವಿದ್ಯಾಥರ್ಿ ಪ್ರಶ್ನೆಗೆ ಸಮಾಧಾನದಿಂದಲೇ ಉತ್ತರಿಸಿದ ಅಪರ ಜಿಲ್ಲಾಧಿಕಾರಿ, ನಿಮ್ ಶಾಲೆ ಸಮಸ್ಯೆಗೆ ಪರಿಹಾರ ಕಲ್ಪಿಸುವುದಾಗಿ ಮಕ್ಕಳಿಗೆ ಭರವಸೆ ನೀಡುತ್ತಿದ್ದರು.

ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಜಿಲ್ಲಾಡಳಿತ, ವಾರ್ತಾ ಇಲಾಖೆ, ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕಗಳ ಸಹಯೋಗದಡಿ ಆಯೋಜಿಸಿದ್ದ ಮೂಲಸೌಕರ್ಯ ಸಮಸ್ಯೆ ಬಗ್ಗೆ ಮಕ್ಕಳಿಂದ ಅಹವಾಲು ಸ್ವೀಕಾರ ಹಾಗೂ ಮಕ್ಕಳ ಹಕ್ಕುಗಳ ರಕ್ಷಣೆ ಕುರಿತ ಜಾಗೃತಿ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ತಾವು ಕಲಿಯುತ್ತಿರುವ ಶಾಲೆ ಸಮಸ್ಯೆ ಬಗ್ಗೆ ಲಿಸ್ಟ್ ಮಾಡಿ ಹೇಳಿ ಗಮನ ಸೆಳೆದರು.

ವರ್ಕನಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾಥರ್ಿನಿ ಗೌರಮ್ಮ, ತಮ್ಮ ಶಾಲೆಯಲ್ಲಿರುವ ಶುದ್ಧ ಕುಡಿಯುವ ನೀರಿನ ಸಮಸ್ಯೆ ಪರಿಹಾರದತ್ತ ಗಮನಹರಿಸುವಂತೆ ಮನವಿ ಮಾಡಿದಳು. ತಮ್ಮೂರಿಗೆ ಒಂದು ಸರ್ಕಾರಿ ಪ್ರೌಢಶಾಲೆ ಬೇಕು ಎಂದು ಮನವಿಯಲ್ಲಿ ನಮೂದಿಸಿ ಅಪರ ಜಿಲ್ಲಾಧಿಕಾರಿಗಳ ಕೈಗಿಟ್ಟಳು.
ವಡಗೇರಾ ತಾಲೂಕಿನ ಹಾಲಗೇರಾ ಸಕರ್ಾರಿ ಪ್ರೌಢಶಾಲೆ ವಿದ್ಯಾರ್ಥಿ ವಿಶ್ವಾರಾಧ್ಯ, 250 ಮಕ್ಕಳಿರುವ ನಮ್ಮ ಶಾಲೆಯಲ್ಲಿ ಕುಡಿಯುವ ನೀರಿನದ್ದೇ ದೊಡ್ಡ ಸಮಸ್ಯೆ. ಒಂದೇ ನಲ್ಲಿಯಲ್ಲಿ ಬಿಸಿಯೂಟವಾದ ನಂತರ ಕೈತೊಳೆಯುವಂತಾಗಿದ್ದು, ಪರ್ಯಾಯ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ. ಬಾಲಕಿಯರ ಶೌಚಗೃಹದಲ್ಲಿ ನೀರಿಲ್ಲದೆ ತೊಂದರೆಯಾಗುತ್ತಿದ್ದು, ತಮ್ಮ ಶಾಲೆಗೆ ಬೇಕಿರುವ ಮೂಲಸೌಲಭ್ಯದ ಬಗ್ಗೆ 15 ಅಂಶಗಳನ್ನು ಒಳಗೊಂಡ ವರದಿ ನೀಡಿ ಗಮನ ಸೆಳೆದ.

ಇನ್ನು ಪೊಗಲಾಪುರ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆ ವಿದ್ಯಾಥರ್ಿ ಭೀಮರಾಯ ತಮ್ಮ ಶಾಲೆಯಲ್ಲಿ ದೈಹಿಕ ಶಿಕ್ಷಕರ ಹುದ್ದೆ ಖಾಲಿ ಇದೆ. ಪರಿಹರಿಸಿ ಸರ್ ಎಂದ. ಕಟಗಿಶಹಾಪುರ ಸಕರ್ಾರಿ ಶಾಲೆ ವಿದ್ಯಾರ್ಥಿನಿ ಶಿಲ್ಪಾ, ತಮ್ಮ ಶಾಲೆಯಲ್ಲಿ ಶುದ್ಧ ಕುಡಿಯುವ ನೀರು ಹಾಗೂ ಆಟದ ಮೈದಾನ ನಿರ್ಮಾಣ ಮಾಡುವಂತೆ ಮನವಿ ಮಾಡಿದಳು. ಹೀಗೆ 25ಕ್ಕೂ ಹೆಚ್ಚು ವಿದ್ಯಾಥರ್ಿಗಳು ತಮ್ಮ ತಮ್ಮ ಶಾಲೆ ಸಮಸ್ಯೆ ಬಗ್ಗೆ ಜಿಲ್ಲಾಡಳಿತದ ಗಮನ ಸೆಳೆದರು.

ನಂತರ ಮಾತನಾಡಿದ ಅಪರ ಜಿಲ್ಲಾಧಿಕಾರಿ ಪ್ರಕಾಶ ರಜಪೂತ್, ಮಕ್ಕಳಿಗೆ ಕಲಿಯುವ ಮನಸ್ಸು, ಸಾಧಿಸುವ ಛಲ ಹಾಗೂ ಹಠವಾದಿಯಾಗಿ ಇದ್ದಾಗ ನಿರೀಕ್ಷಿತ ಗುರಿ ಮುಟ್ಟಲು ಸಾಧ್ಯವಾಗುತ್ತದೆ. ಮುಂದೆ ಗುರಿ, ಹಿಂದೆ ಗುರು ಇರಬೇಕು. ಅಂದಾಗಲೇ ಸಾಧನೆ ಸಾಧ್ಯವಾಗಲಿದೆ. ಜೀವನದಲ್ಲಿ ಸಮಯ ಮುಖ್ಯವಾಗಿದ್ದು, ಸಮಯದ ಸದುಪಯೋಗ ಮಾಡಿಕೊಳ್ಳಬೇಕು. ಡಾ.ಎ.ಪಿ.ಜೆ. ಅಬ್ದುಲ್ ಕಲಾಂ ಹೇಳಿರುವಂತೆ, ಯಾವುದು ನಮಗೆ ನಿದ್ದೆ ಮಾಡಲು ಬಿಡುವುದಿಲ್ಲವೋ, ಅದೇ ನಮ್ಮ ನಿಜವಾದ ಕನಸು ಆಗಿರುತ್ತದೆ. ಅಂತಹ ಕನಸು ಪ್ರತಿಯೊಬ್ಬ ವಿದ್ಯಾರ್ಥಿ ಕಾಣಬೇಕು ಎಂದು ಸಲಹೆ ನೀಡಿದರು.

ಶಾಲೆಗಳಲ್ಲಿ ಮಕ್ಕಳ ಕಲಿಕೆ ಗುಣಮಟ್ಟದಲ್ಲಿರಬೇಕು. ಪಠ್ಯ-ಪಠ್ಯೇತರ ಚಟುವಟಿಕೆಗಳಲ್ಲಿ ಸಮಾನವಾಗಿ ಆಸಕ್ತಿ ಹೊಂದಬೇಕು. ಇದು ಅವರ ಮಾನಸಿಕ, ದೈಹಿಕ ಸದೃಢತೆಗೆ ಪೂರಕವಾಗುತ್ತದೆ. ಓದು, ಬರಹ, ಆಲಿಸುವುದು, ಮಾತನಾಡುವ ಕೌಶಲಗಳನ್ನು ಸರಿಯಾಗಿ ಪಾಲಿಸದ ಮಕ್ಕಳ ಶೈಕ್ಷಣಿಕ ಮಟ್ಟದಲ್ಲಿ ಏರುಪೇರು ಉಂಟಾಗುತ್ತದೆ. ಕಲಿಕೆಗೆ ಉತ್ತಮ ವಾತಾವರಣ ಸೃಷ್ಟಿಸಿಕೊಳ್ಳಬೇಕು ಎಂದರು.

ಸಮಸ್ಯೆಗಳ ಬುಕ್ಲೆಟ್ ಸಲ್ಲಿಕೆ: ಯಾದಗಿರಿ ತಾಲೂಕಿನ ಬಂದಳ್ಳಿ, ಕೇಶ್ವಾರ, ಹತ್ತಿಕುಣಿ, ಕಟಗಿಶಹಾಪುರ, ಕಡೇಚೂರ, ಮೋಟ್ನಳ್ಳಿ, ಮುದ್ನಾಳ್, ಮುಷ್ಠೂರು ಸೇರಿ 10 ಗ್ರಾಮ ಪಂಚಾಯಿತಿ ಪಿಡಿಒಗಳು ತಮ್ಮ ಗ್ರಾಪಂ ವ್ಯಾಪ್ತಿಯಲ್ಲಿ 120 ಶಾಲೆ ಹಾಗೂ ಅಂಗನವಾಡಿ ಕೇಂದ್ರಗಳಿದ್ದು, ಅಲ್ಲಿನ ಸಮಸ್ಯೆಗಳನ್ನು ಪಟ್ಟಿ ಮಾಡಿದ ಬುಕ್ಲೆಟ್ ಜಿಲ್ಲಾಡಳಿತಕ್ಕೆ ಸಲ್ಲಿಸಿ ಪರಿಹಾರಕ್ಕೆ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು.