ಲಕ್ಷ್ಮೀಕಾಂತ್ ಕುಲಕರ್ಣಿ ಯಾದಗಿರಿ
ಯಾದಗಿರಿ ಜಿಲ್ಲೆಯಾಗಿ ಬರೋಬ್ಬರಿ ಒಂಬತ್ತು ವರ್ಷಗಳಾಗುತ್ತಿದ್ದರೂ ಜಿಲ್ಲೆಯ ಬಹುತೇಕ ಸರ್ಕಾರಿ ಕಚೇರಿಗಳಲ್ಲಿ ಮಂಜೂರಾದ ಹುದ್ದೆಗಳು ಭರ್ತಿಯಾಗದೆ ಜಿಲ್ಲಾಭಿವೃದ್ಧಿಯಲ್ಲಿ ಕುಂಠಿತವಾಗುತ್ತಿದ್ದು, ಇದರ ಸಾಲಿಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಅಧಿಕಾರಿಗಳ ಕಚೇರಿಗಳು ಸೇರ್ಪಡೆಗೊಂಡಿವೆ.
ಜಿಲ್ಲಾ ಮಟ್ಟದ ವಿವಿಧ ಸಕರ್ಾರಿ ಇಲಾಖೆಗಳಲ್ಲಿ ಅಗತ್ಯ ಅಧಿಕಾರಿ, ಸಿಬ್ಬಂದಿ ಇಲ್ಲದೆ ಪ್ರಭಾರಿಗಳೇ ಕಾರ್ಯಾಭಾರ ಇದೆ. ಕಾಯಂ ಅಧಿಕಾರಿ ಮತ್ತು ಸಿಬ್ಬಂದಿ ಒದಗಿಸುವತ್ತ ಸರ್ಕಾರ ಚಿತ್ತ ಹರಿಸಿಲ್ಲ. ಸುಗಮ ಆಡಳಿತ ದೃಷ್ಟಿಯಿಂದ ಕಲಬುರಗಿಯಿಂದ ಬೇರ್ಪಡಿಸಿ ಯಾದಗಿರಿ ಜಿಲ್ಲೆಯಾಗಿಸಿದರೂ ಅಧಿಕಾರಿಗಳಿಲ್ಲದೆ ಇಲಾಖೆಗಳು ಜನರ ಪಾಲಿಗೆ ಇದ್ದೂ ಇಲ್ಲದಂತಾಗಿವೆ.
ಜಿಲ್ಲಾಡಳಿತ ಭವನದಲ್ಲಿರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ 370 ಅಧಿಕಾರಿ, ಸಿಬ್ಬಂದಿ ಹುದ್ದೆಗಳ ಪೈಕಿ ಭರ್ತಿಯಾಗಿದ್ದು ಕೇವಲ 226. ಉಳಿದ 144ರಲ್ಲಿ ಮೂರು ತಾಲೂಕಿನ ಅಧಿಕಾರಿ ಹುದ್ದೆ ಖಾಲಿ ಇವೆ. 64 ನಿಲಯ ಮೇಲ್ವಿಚಾರಕ ಹುದ್ದೆ ಪೈಕಿ ಭತರ್ಿಯಾಗಿದ್ದು ಕೇವಲ 35. ಜಿಲ್ಲಾ ಕೇಂದ್ರದಲ್ಲಿರುವ ಕಚೇರಿಯಲ್ಲಿ 8 ಹುದ್ದೆ ಖಾಲಿ ಇವೆ. ಇಷ್ಟೊಂದು ಪ್ರಮಾಣದಲ್ಲಿ ಹುದ್ದೆ ಖಾಲಿ ಇದ್ದರೂ ಮೇಲಧಿಕಾರಿಗಳು ಇದಕ್ಕೂ ತನಗೂ ಸಂಬಂಧವಿಲ್ಲದಂತೆ ನಡೆದುಕೊಳ್ಳುತ್ತಿರುವುದು ವರ್ತಮಾನದ ದುರಂತ.
ಪರಿಶಿಷ್ಟ ವರ್ಗಗಳ ಕಲ್ಯಾಣ ಅಧಿಕಾರಿಗಳ ಕಚೇರಿಗೆ 47 ಹುದ್ದೆ ಮಂಜೂರಾಗಿದ್ದು, ಇದರಲ್ಲಿ ಕೇವಲ ಮೂರು ಭರ್ತಿಯಾಗಿವೆ. ಇದೇ ಕಚೇರಿ ವ್ಯಾಪ್ತಿಯಲ್ಲಿ 11 ಮುರಾರ್ಜಿ ಹಾಗೂ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಗಳು, ಒಂದು ಆಶ್ರಮ ಶಾಲೆ, ಮೆಟ್ರಿಕ್ಪೂರ್ವ ಮತ್ತು ಮೆಟ್ರಿಕ್ ನಂತರದ ವಸತಿ ನಿಲಯಗಳಿವೆ.
ಇದರಲ್ಲಿ ಪ್ರಾಚಾರ್ಯರು, ವಾರ್ಡನ್, ಸ್ಟಾಫ್ನಸರ್್, ಪ್ರಥಮ ದರ್ಜೆ ಸಹಾಯಕರು ಸೇರಿ 84 ಹುದ್ದೆ ಮಂಜೂರಾಗಿವೆ. ಈ ಪೈಕಿ ಜಿಲ್ಲಾದ್ಯಂತ ಕೇವಲ 8 ಹುದ್ದೆ ಭರ್ತಿಯಾಗಿ 76 ಖಾಲಿ ಉಳಿದಿವೆ. ಹೈದರಾಬಾದ್ ಕರ್ನಾಟಕ ಪ್ರದೇಶಕ್ಕೆ ಅಧಿಕಾರಿಗಳು ವರ್ಗಾವಣೆ ಬಯಸುವುದಿಲ್ಲ ಎಂಬ ಆರೋಪಗಳ ಮಧ್ಯೆ ಸರ್ಕಾರ ಮತ್ತು ಜನಪ್ರತಿನಿಧಿಗಳ ಇಚ್ಚಾಶಕ್ತಿ ಕೊರತೆಯಿಂದ ಇಷ್ಟೊಂದು ಹುದ್ದೆ ಖಾಲಿ ಉಳಿದಿವೆ.
ಫೆಬ್ರವರಿ 8ರಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮಂಡಿಸಲಿರುವ ಬಜೆಟ್ನಲ್ಲಿ ಜಿಲ್ಲೆಯ ಸರ್ಕಾರಿ ಇಲಾಖೆಗಳಲ್ಲಿನ ಖಾಲಿ ಹುದ್ದೆಗಳ ಭತರ್ಿಗೆ ಮುಂದಾಗಬೇಕು ಎಂಬುದು ಸಾರ್ವಜನಿಕರ ಒಕ್ಕೂರಲ ಆಗ್ರಹವಾಗಿದೆ.
ಶಾಸಕರೇ ನಿಮ್ಮ ಕ್ಷೇತ್ರಗಳ ಬಗ್ಗೆ ಇರಲಿ ಕಾಳಜಿ: ಜಿಲ್ಲೆಯ 4 ವಿಧಾನಸಭೆ ಕ್ಷೇತ್ರ ಸೇರಿ 6 ತಾಲೂಕು(ಹೊಸ ಮೂರು ತಾಲೂಕು ಸೇರಿ) ಕಚೇರಿಗಳಲ್ಲಿ ಖಾಲಿ ಹುದ್ದೆಗಳು ರಾರಾಜಿಸುತ್ತಿವೆ. ಶಾಸಕರು ಆಗಾಗ್ಗೆ ತಮ್ಮ ತಾಲೂಕಿನ ಕೆಡಿಪಿ ಸಭೆ ನಡೆಸುತ್ತಾರೆ. ಈ ವೇಳೆ ಖಾಲಿ ಹುದ್ದೆಗಳ ಬಗ್ಗೆಯೇ ಹೆಚ್ಚಿನ ಚರ್ಚೆಯಾಗುತ್ತದೆ. ಆದರೂ ಗಮನ ಹರಿಸದಿರುವುದು ದುರಂತ. ಯಾದಗಿರಿ ಹಾಗೂ ಗುರುಮಠಕಲ್ನಲ್ಲಿ ಇದೇ ಮೊದಲ ಬಾರಿಗೆ ವೆಂಕಟರಡ್ಡಿ ಮುದ್ನಾಳ್ ಹಾಗೂ ನಾಗನಗೌಡ ಕಂದಕೂರ ಶಾಸಕರಾಗಿದ್ದಾರೆ. ಸುರಪುರ ಮತ್ತು ಶಹಾಪುರ ಶಾಸಕರಿಗೆ ಆಡಳಿತ ಬಗ್ಗೆ ಸಾಕಷ್ಟು ಅನುಭವವಿದ್ದು, ಆಡಳಿತಯಂತ್ರ ಸುಗಮವಾಗಿ ಸಾಗಬೇಕಾದರೆ ಸರ್ಕಾರಿ ಇಲಾಖೆಗಳಲ್ಲಿ ಪೂರ್ಣಪ್ರಮಾಣದಲ್ಲಿ ಅಧಿಕಾರಿಗಳು ಇರಬೇಕಾಗುತ್ತದೆ. ಹೀಗಾಗಿ ಈ 4 ಶಾಸಕರು ಬಜೆಟ್ ಪೂರ್ವದಲ್ಲಿ ಸಿಎಂ ಮೇಲೆ ಒತ್ತಡ ಹೇರಿದ್ದಲ್ಲಿ ಸಮಸ್ಯೆಗೆ ಕೊಂಚವಾದರೂ ಪರಿಹಾರ ಸಿಗಬಹುದಾಗಿದೆ.