ಕೈ ಸಂಘಟನೆಗೆ ಬೇಕಿದೆ ಸಮರ್ಥ ಸಾರಥ್ಯ

ಲಕ್ಷ್ಮೀಕಾಂತ್ ಕುಲಕರ್ಣಿ ಯಾದಗಿರಿ
2018ರ ವಿಧಾನಸಭೆ ಚುನಾವಣೆಯಲ್ಲಿ ಪಕ್ಷಕ್ಕೆ ಭಾರಿ ಹಿನ್ನಡೆಯಾಗಿದ್ದನ್ನು ಗಂಭೀರವಾಗಿ ಪರಿಗಣಿಸಿರುವ ಕಾಂಗ್ರೆಸ್ ಹೈಕಮಾಂಡ್, 2019ರ ಲೋಕಸಭೆ ಚುನಾವಣೆ ಹೊತ್ತಿಗೆ ಜಿಲ್ಲೆಯಲ್ಲಿ ಬೇರು ಮಟ್ಟದಿಂದ ಸಂಘಟಿಸಲು ನಿರ್ಧರಿಸಿದೆ.

2013ರಲ್ಲಿ ಜಿಲ್ಲೆಯ 4 ವಿಧಾನಸಭೆ ಕ್ಷೇತ್ರಗಳ ಪೈಕಿ ಶಹಾಪುರ ಹೊರತುಪಡಿಸಿ ಮೂರರಲ್ಲಿ ಕಾಂಗ್ರೆಸ್ ಅಧಿಪತ್ಯ ಸ್ಥಾಪಿಸಿತ್ತು. ಆದರೆ ಪಕ್ಷದೊಳಗಿನ ಆಂತರಿಕ ಕಚ್ಚಾಟ, ಭಿನ್ನಮತಗಳಿಂದ 2018ರ ಚುನಾವಣೆಯಲ್ಲಿ ಅದೇ ಶಹಾಪುರ ಕ್ಷೇತ್ರ ಹೊರತುಪಡಿಸಿ ಯಾದಗಿರಿ, ಗುರುಮಠಕಲ್ ಮತ್ತು ಸುರಪುರ ಕ್ಷೇತ್ರಗಳಲ್ಲಿ ಕೈ ಅಭ್ಯರ್ಥಿಗಳು ಪರಾಭವಗೊಂಡಿದ್ದಾರೆ. ಇದರಿಂದಾಗಿ ಲೋಕಸಭೆ ಚುನಾವಣೆ ಕಾಂಗ್ರೆಸ್ ಪಾಲಿಗೆ ಮಾಡು ಇಲ್ಲವೇ ಮಡಿ ಎಂಬಂತಾಗಿದೆ.

ಹೈದರಾಬಾದ್ ಕರ್ನಾಟಕದ 5 ಲೋಕಸಭೆ ಕ್ಷೇತ್ರಗಳಲ್ಲಿ ಕಲಬುರಗಿ ಮತ್ತು ರಾಯಚೂರು ಕಾಂಗ್ರೆಸ್ ಹಿಡಿತದಲ್ಲಿವೆ. ಕಲಬುರಗಿ ಕ್ಷೇತ್ರವನ್ನು ಲೋಕಸಭೆ ಕಾಂಗ್ರೆಸ್ ನಾಯಕ ಡಾ.ಮಲ್ಲಿಕಾರ್ಜುನ ಖರ್ಗೆ ಪ್ರತಿನಿಧಿಸಿದರೆ, ರಾಯಚೂರು ಕ್ಷೇತ್ರವನ್ನು ಕಾಂಗ್ರೆಸ್‍ನ ಹಿರಿಯ ಧುರೀಣರಾಗಿದ್ದ ದಿ.ವೆಂಕಟೇಶ ನಾಯಕ ಅವರ ಪುತ್ರ ಬಿ.ವಿ.ನಾಯಕ ಪ್ರತಿನಿಧಿಸುತ್ತಿದ್ದಾರೆ. ವಿಧಾನಸಭೆಗೆ ಹೋಲಿಸಿದರೆ ಲೋಕಸಭೆ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಹಿಡಿತ ಬಲವಾಗಿಯೇ ಇದೆ. ಇದು ಮುಂದಿನ ಚುನಾವಣೆಯಲ್ಲೂ ಅನುಕೂಲವಾಗಬೇಕಾದರೆ ಜಿಲ್ಲೆಯಲ್ಲಿ ತುಕ್ಕು ಹಿಡಿದಿರುವ ಪಕ್ಷ ಸಂಘಟನೆಗೆ ಚುರುಕು ಮುಟ್ಟಿಸಬೇಕು ಎಂಬ ಒತ್ತಡ ಕಾರ್ಯಕರ್ತರಿಂದ ಕೇಳಿ ಬರುತ್ತಿದೆ.

ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮರಿಗೌಡ ಹುಲಕಲ್ ಹಾಲುಮತ ಸಮಾಜದ ಪ್ರಭಾವಿ ಮುಖಂಡರು. ಮಾಜಿ ಸಿಎಂ ಸಿದ್ದರಾಮಯ್ಯ ಕೃಪಕಟಾಕ್ಷದಿಂದ ಎರಡನೇ ಅವಧಿಗೂ ಅವರನ್ನೇ ಅಧ್ಯಕ್ಷರಾಗಿಸಲಾಗಿತ್ತು. ಅಲ್ಲದೆ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ ಭೀಮರಾಯನ ಗುಡಿ ಕಾಡಾ ಅಧ್ಯಕ್ಷರಾಗಿಯೂ ಏಕಕಾಲಕ್ಕೆ ಎರೆಡೆರಡು ಅಧಿಕಾರ ಅನುಭವಿಸಿದ್ದಾರೆ. ಹೀಗಾಗಿ ಈ ಬಾರಿ ಮುಂದುವರಿದ ಜಾತಿಗೆ ಅವಕಾಶ ನೀಡಬೇಕೆಂಬ ಕೂಗು ಹೆಚ್ಚಾಗಿದೆ.

ರಾಜ್ಯದಲ್ಲಿ ಸದ್ಯ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಅಧಿಕಾರದಲ್ಲಿದ್ದು, ಕಾಂಗ್ರೆಸ್‍ಗೆ ಅಧಿಕಾರವಂತೂ ಕೈತಪ್ಪಿಲ್ಲ. ಹೀಗಾಗಿ ವಿಧಾನಸಭೆ ಚುನಾವಣೆ ವೇಳೆ ಕೆಲ ಭಿನ್ನಮತಗಳಿಂದಾಗಿ ಪಕ್ಷದಿಂದ ದೂರವಾಗಿದ್ದ ಮುಖಂಡರನ್ನು ಮತ್ತೆ ಒಂದೇ ವೇದಿಕೆಗೆ ಕರೆತರಬಲ್ಲ ಸಮರ್ಥರನ್ನು ಪಕ್ಷದ ಜಿಲ್ಲಾಧ್ಯಕ್ಷ ಸ್ಥಾನದಲ್ಲಿ ಕೂಡಿಸಬೇಕು ಎಂಬ ಆಗ್ರಹ ಪಕ್ಷ ನಿಷ್ಠರದ್ದಾಗಿದೆ.

ಸಾಂಘಿಕ ಹೋರಾಟದ ಕೊರತೆಯಿಂದಲೇ ವಿಧಾನಸಭೆ ಮತ್ತು ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಪಕ್ಷಕ್ಕೆ ಜಬರದಸ್ತ್ ಹೊಡೆತ ಬಿದ್ದಿದೆ ಎಂಬುದನ್ನು ಕೈ ನಾಯಕರೇ ಒಪ್ಪಿಕೊಳ್ಳುತ್ತಿದ್ದಾರೆ. ಅಲ್ಲದೆ ಆರೇಳು ವರ್ಷಗಳಿಂದ ಪಕ್ಷದ ಬ್ಲಾಕ್ ಮಟ್ಟದಿಂದ ಜಿಲ್ಲಾ ಮಟ್ಟದವರೆಗೆ ಪದಾಧಿಕಾರಿಗಳನ್ನು ಬದಲಾವಣೆ ಮಾಡಿಲ್ಲ. ಅಸಲಿಗೆ ಕೆಪಿಸಿಸಿಗೆ ರಾಜ್ಯದಲ್ಲಿ ಯಾದಗಿರಿ ಜಿಲ್ಲೆ ಇದೆ ಎಂಬುದು ಸಹ ಮರೆತಂತೆ ಕಾಣುತ್ತಿದೆ. ಅಂತಲೇ ಜಿಲ್ಲೆಯಲ್ಲಿನ ಪಕ್ಷದ ಸದÀ್ಯದ ಪರಿಸ್ಥಿತಿ ಬಗ್ಗೆ ಮನವರಿಕೆ ಮಾಡಿಕೊಡಲು ಶೀಘ್ರವೇ ನಿಯೋಗವೊಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರನ್ನು ಭೇಟಿ ಮಾಡಲಿದೆ ಎಂದು ಬಲ್ಲ ಮೂಲಗಳು ಹೇಳುತ್ತವೆ.

ಬದಲಾವಣೆ ಆಗದಿದ್ದರೆ ಮತ್ತೆ ಹಿನ್ನಡೆ: 2019ರ ಲೋಕಸಭೆ ಚುನಾವಣೆಯನ್ನು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಗಂಭೀರ ಪರಿಗಣಿಸಿದ್ದು, ದೇಶಾದ್ಯಂತ ಪಕ್ಷದ ಬಲವರ್ಧನೆಗಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ. ಯಾದಗಿರಿ ಜಿಲ್ಲಾ ಕಾಂಗ್ರೆಸ್ ಮಾತ್ರ ನೆಹರು, ಇಂದಿರಾ, ರಾಜೀವ್‍ಗಾಂಧಿ ಜಯಂತಿ ಮತ್ತು ಪುಣ್ಯಸ್ಮರಣೆಗಳಂಥ ಕಾರ್ಯಕ್ರಮಗಳಲ್ಲೇ ಕಾಲ ಕಳೆಯುತ್ತಿದೆ ಎಂಬುದು ನಿಷ್ಠಾವಂತ ಕಾರ್ಯಕರ್ತರ ಅನಿಸಿಕೆ. ಲೋಕಸಭೆ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇರುವುದರಿಂದ ಕೂಡಲೇ ಜಿಲ್ಲಾ ಮತ್ತು ಬ್ಲಾಕ್ ಮಟ್ಟದಲ್ಲಿ ಹೊಸ ಮುಖಗಳಿಗೆ ಮನ್ನಣೆ ನೀಡಿದರೆ ಪಕ್ಷದಲ್ಲಿ ಲವಲವಿಕೆ ಮೂಡಲಿದೆ. ಮೈ ಮರೆತರೆ ಮತ್ತೆ ಪಕ್ಷಕ್ಕೆ ಹಿನ್ನಡೆ ಕಟ್ಟಿಟ್ಟ ಬುತ್ತಿ ಎನ್ನುತ್ತಾರೆ ಹಿರಿಯ ಮುಖಂಡರು.

ಯುವ ಮುಖಗಳಿಗೆ ಆದ್ಯತೆ ಗುಂಡೂರಾವ್ ಆಸಕ್ತಿ: ಸದ್ಯ ಪಕ್ಷದಲ್ಲಿ ಎರಡನೇ ಹಂತದ ನಾಯಕರಾಗಿರುವ ಕಲಬರುಗಿ ಕಾಡಾ ಮಾಜಿ ಅಧ್ಯಕ್ಷ ಶ್ರೀನಿವಾಸರಡ್ಡಿ ಕಂದಕೂರ ಯುವಕರಾಗಿದ್ದು, ಪಕ್ಷ ಸಂಘಟನೆಯಲ್ಲಿ ಮುಂಚೂಣಿಯಲ್ಲಿದ್ದಾರೆ. ಇನ್ನು ಕಂದಕೂರ ಶಹಾಪುರ ಶಾಸಕ ಶರಣಬಸಪ್ಪ ದರ್ಶನಾಪುರ ಹಾಗೂ ಮಾಜಿ ಸಚಿವ ಡಾ.ಎ.ಬಿ.ಮಾಲಕರಡ್ಡಿ ಪರಮಾಪ್ತರು. ಜಿಲ್ಲೆಯಲ್ಲಿ ಉತ್ತಮ ನೆಟ್‍ವರ್ಕ್ ಹೊಂದಿದ್ದಾರೆ. ಶ್ರೀನಿವಾಸರಡ್ಡಿ ಗುರುಮಠಕಲ್ ಕ್ಷೇತ್ರದ ಕಂದಕೂರ ಮೂಲದವರು. ಈಗಾಗಲೇ ಹಿಂದುಳಿದ ವರ್ಗಕ್ಕೆ ಅಧ್ಯಕ್ಷ ಸ್ಥಾನ ಕಲ್ಪಿಸಿರುವ ಕೆಪಿಸಿಸಿ ಈ ಬಾರಿ ವೀರಶೈವ ರಡ್ಡಿ ಸಮಾಜದ ಕಂದಕೂರಗೆ ಜಿಲ್ಲಾಧ್ಯಕ್ಷ ಸ್ಥಾನ ನೀಡಬೇಕು ಎಂಬ ವಾದ ಪಕ್ಷದ ಮೊಗಸಾಲೆಯಲ್ಲಿ ಕೇಳಿ ಬರುತ್ತಿದೆ.