19ರಂದು ಬೆಂಗಳೂರಿನಲ್ಲಿ ಸಿಎಂ ಜತೆ ಸಭೆ

ಯಾದಗಿರಿ: ಸತತ ಹತ್ತು ವರ್ಷಗಳಿಂದ ಮಳೆ ಇಲ್ಲದೆ ಬರದಿಂದ ತತ್ತರಿಸಿರುವ ಯಾದಗಿರಿ ಜಿಲ್ಲೆಯನ್ನು ರಾಜ್ಯ ಸರ್ಕಾರ ಬರಪೀಡಿತ ಘೋಷಿಸಿದ್ದರ ಹಿನ್ನೆಲೆಯಲ್ಲಿ ಕೇಂದ್ರ ಬರ ಅಧ್ಯಯನ ತಂಡ ಶನಿವಾರ ಆಗಮಿಸಿ ಬೆಳೆ ಹಾನಿ ಪರಿಶೀಲನೆ ನಡೆಸಿತು.

ಬೆಳಗ್ಗೆ ಬೆಂಗಳೂರಿನಿಂದ ಆಗಮಿಸಿದ ಕೇಂದ್ರ ಕೃಷಿ ಇಲಾಖೆ ಜಂಟಿ ನಿರ್ದೇಶಕ ಅಮಿತಾಭ್ ಗೌತಮï ನೇತೃತ್ವದ ತಂಡ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕೆಲಹೊತ್ತು ಸಭೆ ನಡೆಸಿ ಅಧಿಕಾರಿಗಳಿಂದ ಮಾಹಿತಿ ಕಲೆ ಹಾಕಿತು. ಪ್ರಸಕ್ತ ವರ್ಷ ಸಮರ್ಪಕ ಮಳೆಯಾಗದೆ ಜಿಲ್ಲಾದ್ಯಂತ 99 ಕೋಟಿ ರೂ. ಮೌಲ್ಯದ 137067 ಹೆಕ್ಟೇರ್ ಪ್ರದೇಶದ ಬೆಳೆ ನಷ್ಟವಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್ ತಂಡಕ್ಕೆ ವಿವರ ಮಾಹಿತಿ ನೀಡಿದರು.

ನಂತರ ಬಳಿಚಕ್ರ, ಕಿಲ್ಲನಕೇರಾ, ಕೂಡ್ಲೂರು, ಕಡೇಚೂರ ಹಾಗೂ ಶೆಟ್ಟಿಹಳ್ಳಿ ಗ್ರಾಮಗಳಿಗೆ ಭೇಟಿ ನೀಡಿದ ತಂಡದ ಅಧಿಕಾರಿಗಳು, ಬೆಳೆ ಹಾನಿ ಬಗ್ಗೆ ರೈತರಿಂದ ಮಾಹಿತಿ ಪಡೆದರು. ಮಳೆ ಇಲ್ಲದೆ ಈ ಬಾರಿ ಇಳುವರಿ ಕಡಿಮೆ ಬಂದಿದ್ದರಿಂದ ಕೃಷಿಯಲ್ಲಿ ಹೆಚ್ಚಿನ ನಷ್ಟ ಅನುಭವಿಸುವಂತಾಗಿದೆ ಎಂದು ಅನ್ನದಾತರು ತಂಡದ ಮುಂದೆ ನೋವು ತೋಡಿಕೊಂಡರು.

ನಂತರ ದುಪ್ಪಲ್ಲಿ ಕೆರೆಗೆ ಭೇಟಿ ನೀಡಿ ಉದ್ಯೋಗ ಖಾತ್ರಿ ಕಾಮಗಾರಿ ವೀಕ್ಷಣೆ ನಡೆಸಿತು. ಈ ವೇಳೆ ಕೂಲಿ ಕಾರ್ಮಿಕರ ಬಗ್ಗೆ ದಾಖಲೆಗಳು ಸರಿಯಾಗಿ ತೋರಿಸದ ಕಾರಣ ಅಧಿಕಾರಿಗಳು ಗರಂ ಆದ ಪ್ರಸಂಗವೂ ನಡೆಯಿತು.  ಹೈದರಾಬಾದ್‍ನ ಕೃಷಿ, ಸಹಕಾರ ಮತ್ತು ರೈತರ ಕಲ್ಯಾಣ ಇಲಾಖೆ ಬೆಳೆ ವಿಭಾಗದ ನಿರ್ದೇಶಕ ಬಿ.ಕೆ.ಶ್ರೀವಾಸ್ತವ್ ಹಾಗೂ ಕೇಂದ್ರ ಕುಡಿಯುವ ನೀರು ಮತ್ತು ನೈರ್ಮಲ್ಯ ಸಚಿವಾಲಯದ ಹಿರಿಯ ಸಲಹೆಗಾರ ಎಸ್.ಸಿ.ಶರ್ಮಾ, ಜಿಪಂ ಸಿಇಒ ಕವಿತಾ ಮನ್ನಿಕೇರಿ, ಜಂಟಿ ಕೃಷಿ ನಿರ್ದೇಶಕಿ ಆರ್.ದೇವಿಕಾ ಇತರರಿದ್ದರು.

ವಾರದಲ್ಲಿ ಕೇಂದ್ರ ಸರ್ಕಾರಕ್ಕೆ ವರದಿ: ಕರ್ನಾಟಕದಲ್ಲಿ ಮಳೆ ಅಭಾವ ಎದುರಾಗಿದ್ದರಿಂದ ರಾಜ್ಯ ಸರ್ಕಾರ ಬರ ಪರಿಹಾರ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದು, ಈ ಹಿನ್ನಲೆಯಲ್ಲಿ ರಾಜ್ಯದ 24 ಜಿಲ್ಲೆಗಳಲ್ಲಿ ಕೇಂದ್ರ ಬರ ಅಧ್ಯಯನ ತಂಡಗಳು ಮೂರು ದಿನ ಪರಿಶೀಲನೆ ನಡೆಸುತ್ತಿವೆ ಎಂದು ಕೇಂದ್ರ ಬರ ಅಧ್ಯಯನ ತಂಡದ ಮುಖ್ಯಸ್ಥ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಅಮಿತಾಭ್ ಗೌತಮ ಹೇಳೀದರು.

ದುಪ್ಪಲ್ಲಿ ಗ್ರಾಮದ ಕೆರೆಯಲ್ಲಿ ನಡೆದಿರುವ ನರೇಗಾ ಕಾಮಗಾರಿಯನ್ನು ಶುಕ್ರವಾರ ವೀಕ್ಷಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬರಪೀಡಿತ ಜಿಲ್ಲೆಗಳಿಗೆ ಭೇಟಿ ನೀಡಿ ಹಾನಿ ಪರಿಶೀಲನೆ ನಡೆಸಲಾಗುತ್ತಿದೆ. ಒಂದು ವಾರದಲ್ಲಿ ಕೇಂದ್ರ ಸರ್ಕಾರಕ್ಕೆ ಅಧ್ಯಯನ ವರದಿ ಸಲ್ಲಿಸಲಾಗುತ್ತದೆ ಎಂದರು.
ರೈತರ ಆತ್ಮಹತ್ಯೆ ಪ್ರಕರಣಗಳು ರಾಜ್ಯ ಸರ್ಕಾರಕ್ಕೆ ಸಂಬಂಧಪಟ್ಟದ್ದು ಎಂದ ಗೌತಮ್, ಇಲ್ಲಿನ ರೈತರ ಸಮಸ್ಯೆಗಳು ಸೇರಿ ಎಷ್ಟು ಬೆಳೆ ಹಾನಿಯಾಗಿದೆ. ಕೈಗೊಳ್ಳಬಹುದಾದ ಬರ ಪರಿಹಾರ ಕಾಮಗಾರಿಗಳ ಬಗ್ಗೆ ಸರ್ಕಾರದೊಂದಿಗೆ ಚರ್ಚಿಸಿದ ಬಳಿಕ ಕೇಂದ್ರಕ್ಕೆ ವರದಿ ಸಲ್ಲಿಸುವುದು ನಮ್ಮ ಕರ್ತವ್ಯ ಎಂದರು.
ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್ ಇತರರಿದ್ದರು.

ಇಂದಿನಿಂದ ಮೂರು ದಿನ ರಾಜ್ಯದ ವಿವಿಧೆಡೆ ಬರ ಅಧ್ಯಯನ ನಡೆಯಲಿದ್ದು, 19ರಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿಗಳ ಜತೆ ಸಭೆ ನಡೆಸಲಾಗುವುದು. ಒಂದು ವಾರದಲ್ಲಿ ಕೇಂದ್ರಕ್ಕೆ ಬರ ಅಧ್ಯಯನದ ವರದಿ ಸಲ್ಲಿಸಲಾಗುವುದು.
| ಅಮಿತಾಭ್ ಗೌತಮ
ಕೇಂದ್ರ ಬರ ಅಧ್ಯಯನ ತಂಡದ ಮುಖ್ಯಸ್ಥ, ಕೇಂದ್ರ ಕೃಷಿ ಇಲಾಖೆ ಜಂಟಿ ನಿರ್ದೇಶಕ