ಏಕೋಭಾವದಿಂದ ಬಾಳಿದರೆ ಜೀವನ ಸುಂದರ

ವಿಜಯವಾಣಿ ಸುದ್ದಿಜಾಲ ಯಾದಗಿರಿ
ವಿಶ್ವಾರಾಧ್ಯರು ಅನಂತ ಲೀಲೆಗಳಿಂದ ಜಗದೊಡೆಯನಾಗಿ ಮೆರೆದ ಮಹಿಮಾಪುರುಷರು, ಈ ಸಿದ್ದಿ ಪುರುಷನ ಸಾಧನೆಗೆ ಆಸರೆಯಾಗಿ ಬಸ್ಸಮ್ಮ ತಾಯಿ ನಿಲ್ಲುತ್ತಾಳೆ ಎಂದು ಅಬ್ಬೆತುಮಕೂರು ಮಠದ ಪೀಠಾಧಿಪತಿ ಡಾ.ಗಂಗಾಧರ ಮಹಾಸ್ವಾಮಿಗಳು ನುಡಿದರು.

ಶುಕ್ರವಾರ ಸಂಜೆ ಅಬ್ಬೆತುಮಕೂರಿನ ಶ್ರೀ ಮಠದಲ್ಲಿ ನಡೆದ ವಿಶ್ವಾರಾಧ್ಯರ ಧರ್ಮಪತ್ನಿ ಬಸ್ಸಮ್ಮ ತಾಯಿಯ ಜಾತ್ರಾ ಮಹೋತ್ಸವದ ಧಾರ್ಮಿಕ ಸಭೆಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಸಾಂಸಾರಿಕ ಜಂಜಾಟದಲ್ಲಿ ತೊಳಲಾಡುತ್ತಾ, ಭವ ಬದುಕಿಗೆ ಸಿಲುಕಿಕೊಳ್ಳಬಾರದು, ಅಶಾಶ್ವತವಾದ ಈ ಜೀವನದ ಜಂಜಾಟದಿಂದ ಪಾರಾಗಲೂ ಶಾಶ್ವತವಾದ ಘನ ಸಂಪತ್ತನ್ನು ಪಡೆಯಲು ಭಕ್ತಿ, ಶ್ರದ್ಧೆಯಿಂದ ಜೀವನವನ್ನು ನಡೆಸಿದಾಗ ಸಾಧ್ಯವಾಗುತ್ತದೆ ಎಂದು ಹೇಳಿದರು.

ಸಾಂಸಾರಿಕ ಜೀವನದಲ್ಲಿ ಗಂಡ ಹೆಂಡತಿ, ಸಮಾನರಾಗಿ ಏಕೋಭಾವದಿಂದ ಬಾಳಿ ಬದುಕಬೇಕು, ಮೇಲು ಕೀಳೆಂಬ ಭಾವ ತೊರೆದು ಇಬ್ಬರೂ ಸಮಾನರೆಂಬ ವಿಶಾಲ ಮನೋಭಾವನೆಯನ್ನು ಹೊಂದಿದಾಗ ಸಾಂಸಾರಿಕ ಜೀವನ ಸುಂದರ ಮಯವಾಗುತ್ತದೆ ಎಂದು ತಿಳಿಸಿದರು.

ಬೆಳಗ್ಗೆ ಬಸ್ಸಮ್ಮ ತಾಯಿಯ ಕತರ್ೃ ಗದ್ದುಗೆಗೆ ವಿಶೇಷ ಪೂಜೆಯನ್ನು ನೆರವೇರಿಸಲಾಯಿತು. ಸಂಜೆ ಶ್ರೀಮಠದಿಂದ ಅಬ್ಬೆತುಮಕೂರಿನ ಪ್ರಮುಖ ಬೀದಿಗಳಲ್ಲಿ ಬಾಜಾ ಭಜಂತ್ರಿ, ಡೊಳ್ಳು ವಾದ ಸುಮಂಗಲಿಯರ ಕಳಸ ಪುರವಂತರ ಸೇವೆಯೊಂದಿಗೆ ಪಲ್ಲಕ್ಕಿ ಉತ್ಸವ ಜರುಗಿತು. ನಂತರ ಬಸ್ಸಮ್ಮ ತಾಯಿಯ ರಥೋತ್ಸವವನ್ನು ಅತ್ಯಂತ ಭಕ್ತಿಯಿಂದ ನಡೆಸಲಾಯಿತು.

ಜಾತ್ರಾಮಹೋತ್ಸವಕ್ಕೆ ಆಗಮಿಸಿದ ಸಮಸ್ತ ಭಕ್ತರಿಗೆ ಕಾಡಂಮಗೇರಾ ವಿಶ್ವಾರಾಧ್ಯ ಸೇವಾ ಸಮಿತಿವತಿಯಿಂದ ಪ್ರಸಾದ ಸೇವೆ ಜರುಗಿತು. ಈ ಸಂದರ್ಭದಲ್ಲಿ ಚೆನ್ನಪ್ಪಗೌಡ ಮೋಸಂಬಿ, ಡಾ.ಸುಭಾಶ್ಚಂದ್ರ ಕೌಲಗಿ, ಎಸ್.ಎನ್.ಮಿಂಚನಾಳ ಇದ್ದರು.

Leave a Reply

Your email address will not be published. Required fields are marked *