ವಿಕಾಸಕ್ಕಾಗಿ ಕಗ್ಗೋಡಿಗೆ ಬನ್ನಿ

ಯಾದಗಿರಿ: ಸಮಾಜದಲ್ಲಿ ಹೊಸ ಮನ್ವಂತರ ಬರೆಯುವ ಹೆಬ್ಬಯಕೆಯಿಂದ ಡಿಸೆಂಬರ್ 24ರಿಂದ ಏಳು ದಿನ ವಿಜಯಪುರ ಜಿಲ್ಲೆ ಕಗ್ಗೋಡಿನಲ್ಲಿ ವಿಕಾಸ ಅಕಾಡೆಮಿಯು ಭಾರತೀಯ ಸಂಸ್ಕೃತಿ ಉತ್ಸವ-05 ಹಮ್ಮಿಕೊಂಡಿದ್ದು, ಜಿಲ್ಲೆ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಶಾಸಕ ವೆಂಕಟರಡ್ಡಿ ಮುದ್ನಾಳ್ ಮನವಿ ಮಾಡಿದರು.

ಹಳೇ ಪ್ರವಾಸಿ ಮಂದಿರದಲ್ಲಿ ಭಾನುವಾರ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಸತತ ಏಳು ದಿನ ಮಾತೃ ಸಂಗಮ, ಜ್ಞಾನ ಸಂಗಮ, ಕೃಷಿ ಸಂಗಮ, ಯುವ ಸಂಗಮ, ಗ್ರಾಮ ಸಂಗಮ, ಧರ್ಮ ಮತ್ತು ಸಂಸ್ಕೃತಿ ಹೀಗೆ ಅನೇಕ ವಿಷಯಗಳ ಕುರಿತು ಗೋಷ್ಠಿಗಳು ನಡೆಯಲಿದ್ದು, ಸಮಾಜದಲ್ಲಿ ದೊಡ್ಡ ದೊಡ್ಡ ಸಾಧನೆ ಮಾಡಿ ಉತ್ತುಂಗದ ಶಿಖರವೇರಿದ ಸಾಧಕರ ಸಮಾಗಮವೂ ಕಾರ್ಯಕ್ರಮದಲ್ಲಿ ಆಗಲಿದೆ ಎಂದರು.

ಹಿರಿಯ ನ್ಯಾಯವಾದಿ ಎಸ್.ಬಿ. ಪಾಟೀಲ್ ಮಾತನಾಡಿ, ಎರಡು ದಶಕಗಳಿಂದ ಬಸವರಾಜ ಪಾಟೀಲ್ ಸೇಡಂ ಅವರು ಕಲ್ಯಾಣ ಕರ್ನಾಟಕದಲ್ಲಿ ಕ್ರಿಯಾಶೀಲವಾಗಿ ಸಮಗ್ರ ಬದಲಾವಣೆಗೆ ಶ್ರಮಿಸುತ್ತಿದ್ದಾರೆ. ನಾಡಿನ ಬದಲಾವಣೆಗೆ ಸ್ಫೂತರ್ಿ, ಪ್ರೇರಣೆ ನೀಡಲಿ ಎಂಬ ಉದ್ದೇಶ ಈ ಕಾರ್ಯಕ್ರಮದ್ದು. ಎಲ್ಲರೂ ಸಹಾಯ ಸಹಕಾರ ನೀಡಿ ಪಾಲ್ಗೊಳ್ಳಬೇಕು ಎಂದು ಕೋರಿದರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಶ್ರೀನಿವಾಸರೆಡ್ಡಿ ಪಾಟೀಲ್ ಚನ್ನೂರ, ಅಕಾಡೆಮಿ ಜಿಲ್ಲಾ ಸಂಚಾಲಕ ನೀಲಕಂಠರಾಯ ಎಲ್ಹೇರಿ, ಹಣಮಂತ ಇಟಗಿ, ಬಸವಂತರಾಯಗೌಡ ಮಲ್ಹಾರ, ಎಸ್.ಪಿ. ನಾಡೇಕರ್, ಪ್ರಶಾಂತ ಯಲ್ಹೇರಿ ಇದ್ದರು.