ಒಗ್ಗಟ್ಟಾಗಿ ಚುನಾವಣೆ ಎದುರಿಸೋಣ

ಯಾದಗಿರಿ: ಕೋಮುಶಕ್ತಿಗಳನ್ನು ಅಧಿಕಾರದಿಂದ ದೂರವಿಡಲು ರಾಜ್ಯದಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ರಚನೆ ಮಾಡಿದ್ದಲ್ಲದೆ ಲೋಕಸಭೆ ಚುನಾವಣೆಯಲ್ಲೂ ಮೈತ್ರಿ ಧರ್ಮ ಪಾಲಿಸುತ್ತಿವೆ. ಹೀಗಾಗಿ ಜೆಡಿಎಸ್ ಕಾರ್ಯಕರ್ತರು ತಮಗೆ ಬೆಂಬಲ ಸೂಚಿಸುವಂತೆ ರಾಯಚೂರು ಲೋಕಸಭೆ ಕಾಂಗ್ರೆಸ್ ಅಭ್ಯರ್ಥಿ ಬಿ.ವಿ.ನಾಯಕ್ ಮನವಿ ಮಾಡಿದರು.

ನಗರದ ಜವಾಹರ್ ಶಿಕ್ಷಣ ಸಂಸ್ಥೆಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಚುನಾವಣೆ ಸಂದರ್ಭದಲ್ಲಿ ತಮ್ಮನ್ನು ಕರೆದಿಲ್ಲ ಎಂದು ಯಾರೂ ಹತಾಶರಾಗುವುದು ಬೇಡ. ಎಲ್ಲರೂ ಒಗ್ಗಟ್ಟಾಗಿ ಚುನಾವಣೆ ಎದುರಿಸೋಣ. ಕಳೆದ 5 ವರ್ಷಗಳ ಹಿಂದೆ ಮಾತಿನಲ್ಲೇ ಚಂದ್ರನನ್ನು ತೋರಿಸಿದ ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ನಂತರ ದೇಶದ ಅಭಿವೃದ್ಧಿಯನ್ನು ಸಂಪೂರ್ಣ ಮರೆತಿದ್ದಾರೆ ಎಂದು ಆರೋಪಿಸಿದರು.

ಜೆಡಿಎಸ್ ಹಿರಿಯ ಮುಖಂಡ ಎ.ಸಿ.ಕಾಡ್ಲೂರು ಮಾತನಾಡಿ, ಬದಲಾದ ರಾಜಕೀಯ ವಿದ್ಯಮಾನಗಳಿಂದ ಇಂದು ರಾಜ್ಯದಲ್ಲಿ ಜೆಡಿಎಸ್ ಕಾಂಗ್ರೆಸ್ ಮೈತ್ರಿ ಸಕರ್ಾರ ಅಧಿಕಾರದಲ್ಲಿದೆ. ಮೈತ್ರಿ ಧರ್ಮದ ಪ್ರಕಾರ ಕಾಂಗ್ರೆಸ್ ಅಭ್ಯಥರ್ಿ ಪರ ನಾವು ಕೆಲಸ ಮಾಡಬೇಕಿದೆ. ಪ್ರತಿಯೊಬ್ಬ ಕಾರ್ಯಕರ್ತ ಬಿ.ವಿ.ನಾಯಕ್ ಪರ ಪ್ರಚಾರ ಮಾಡಬೇಕು ಎಂದು ಸಲಹೆ ನೀಡಿದರು.

ಕೆಪಿಸಿಸಿ ಕಾರ್ಯದರ್ಶಿ ಹನಮೇಗೌಡ ಮರಕಲ್ ಮಾತನಾಡಿ, ರಾಯಚೂರು ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ 1850 ಹಳ್ಳಿಗಳು ಬರುತ್ತವೆ. ಪ್ರತಿಯೊಬ್ಬರಿಗೂ ಸಂಸದರು ತಮ್ಮ ಗ್ರಾಮಕ್ಕೆ ಏನಾದರೂ ಕೊಡುಗೆ ನೀಡಬೇಕು ಎಂಬ ಬಯಕೆ ಇರುತ್ತದೆ. ಆದರೆ ಕೇವಲ 5 ಕೋಟಿ ಅನುದಾನದಲ್ಲಿ ಎಲ್ಲ ಗ್ರಾಮಗಳಿಗೂ ಯೋಜನೆ ಕೊಡಲು ಆಗುವುದಿಲ್ಲ. ಹೀಗಾಗಿ ಈ ಸಲ ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸಿದ್ದಲ್ಲಿ ನಿಮ್ಮೂರಿನಲ್ಲಿರುವ ಸಮಸ್ಯೆಗಳ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಹೇಳಿದರು. ಪ್ರಮುಖರಾದ ಗುಂಡಪ್ಪ ಕಲಬರುಗಿ, ವಿಶ್ವನಾಥ ಸಿರವಾರ, ಡಾ.ಶಫಿ ತುನ್ನೂರ ಇತರರಿದ್ದರು.