ಆಪರೇಷನ್ ಕಮಲ ಮಾಡಿಯೇ ಸಿದ್ಧ

ಯಾದಗಿರಿ: ಜೆಡಿಎಸ್- ಕಾಂಗ್ರೆಸ್ನಲ್ಲಿ ಭಿನ್ನಮತ ಕುದಿಯುತ್ತಿದ್ದು, ಆ ಪಕ್ಷಗಳ ಶಾಸಕರು ತಾವಾಗಿಯೇ ಬಿಜೆಪಿಗೆ ಬರಲು ಸಿದ್ಧರಾಗಿರುವಾಗ ಸಿಎಂ ಎಚ್.ಡಿ. ಕುಮಾರಸ್ವಾಮಿ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ವಿನಾಕಾರಣ ಬಿಜೆಪಿ ಆಪರೇಷನ್ ಕಮಲ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ. ಆದರೆ ಇನ್ಮುಂದೆ ನಾವು ಆಪರೇಷನ್ ಕಮಲ ಮಾಡೇ ಮಾಡುತ್ತೇವೆ ಎಂದು ಮಾಜಿ ಉಪ ಮುಖ್ಯಮಂತ್ರಿ, ಬಿಜೆಪಿ ಹಿರಿಯ ಮುಖಂಡ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.

ವಿದ್ಯಾಮಂಗಲ ಕಾರ್ಯಾಲಯದಲ್ಲಿ ಮಂಗಳವಾರ ಬಿಜೆಪಿ ಜಿಲ್ಲಾ ಪ್ರಮುಖ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಇಡೀ ರಾಜ್ಯಕ್ಕೆ ಬರಗಾಲ ಆವರಿಸಿದೆ. ಇಂಥದರಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ಗೆ ಅಧಿಕಾರ ಉಳಿಸಿಕೊಳ್ಳುವುದೇ ದೊಡ್ಡ ಕೆಲಸವಾಗಿದೆ. ನಾವೇನು ಆ ಪಕ್ಷದ ಶಾಸಕರನ್ನು ನಮ್ಮಲ್ಲಿ ಬನ್ನಿ ಎಂದು ಕೈಬೀಸಿ ಕರೆಯುತ್ತಿಲ್ಲ. ಅವರಾಗಿಯೇ ಪಕ್ಷದ ಸಿದ್ಧಾಂತ ಒಪ್ಪಿ ಬರಲು ಸಿದ್ಧರಾಗಿದ್ದಾರೆ. ಕೇವಲ ಶಾಸಕರಲ್ಲ, ಕಾಂಗ್ರೆಸ್ನ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಬಂದರೂ ಪಕ್ಷಕ್ಕೆ ಸೇರಿಸಿಕೊಳ್ಳುವುದಾಗಿ ಟಾಂಗ್ ನೀಡಿದರು.

ನಮ್ಮಲ್ಲಿನ ಕೆಲ ಸಣ್ಣಪುಟ್ಟ ತಪ್ಪುಗಳಿಂದಾಗಿ ಅಧಿಕಾರ ತಪ್ಪಿದೆ. ಆದರೆ ವಿಧಾನಸಭೆಯಲ್ಲಿ ಪಕ್ಷದ 104 ಹುಲಿಗಳಿವೆ. ರಾಜ್ಯದ ಜನರ ಹಿತದೃಷ್ಟಿಯಿಂದ ವಿಧಾನಸಭೆ ಹೊರಗೂ ಹಾಗೂ ಒಳಗೂ ನಿರಂತರ ಹೋರಾಟ ಮಾಡುತ್ತೇವೆ ಎಂದ ಈಶ್ವರಪ್ಪ, ಬೆಳಗಾವಿ ಅಧಿವೇಶನದಲ್ಲಿ ರಾಜ್ಯ ಸಕರ್ಾರವನ್ನು ತರಾಟೆಗೆ ತೆಗೆದುಕೊಳ್ಳಲು ಎಲ್ಲ ರೀತಿಯಿಂದ ಸಿದ್ಧತೆ ಮಾಡಿಕೊಂಡಿದ್ದೇವೆ. ಈ ಕಾರಣಕ್ಕೆ ಬಿಜೆಪಿಯ 5 ತಂಡ ರಚಿಸಿ ರಾಜ್ಯಾದ್ಯಂತ ಬರ ಅಧ್ಯಯನ ನಡೆಸುತ್ತಿರುವುದಾಗಿ ಹೇಳಿದರು.
ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ ಮಾತನಾಡಿ, ಸಮ್ಮಿಶ್ರ ಸರ್ಕಾರ ಲಜ್ಜೆಗೆಟ್ಟು ನಿಂತಿದೆ. ಇದಕ್ಕೆ ನಾಚಿಕೆ, ಮಾನ ಮರ್ಯಾದೆಯೇ ಇಲ್ಲ. ಸಿಎಂ ಕುಮಾರಸ್ವಾಮಿ ಕೇವಲ ಹಾಸನಕ್ಕೆ ಮುಖ್ಯಮಂತ್ರಿಯಂತೆ ವರ್ತಿಸುತ್ತಿದ್ದಾರೆ. ರಾಜ್ಯ ಸಕರ್ಾರದ ವೈಫಲ್ಯಗಳ ವಿರುದ್ಧ ಬೆಳಗಾವಿ ಅಧಿವೇಶನ ವೇಳೆ ಒಂದು ಲಕ್ಷ ಬಿಜೆಪಿ ಕಾರ್ಯಕರ್ತರಿಂದ ಹೋರಾಟ ನಡೆಯಲಿವೆ. ಜಿಲ್ಲೆಯಿಂದಲೂ ಹೆಚ್ಚಿನ ಕಾರ್ಯಕರ್ತರು ಆಗಮಿಸಬೇಕು ಎಂದು ಮನವಿ ಮಾಡಿದರು.

ಶಾಸಕ ವೆಂಕಟರಡ್ಡಿ ಮುದ್ನಾಳ್, ಪಕ್ಷದ ಜಿಲ್ಲಾಧ್ಯಕ್ಷ ಚಂದ್ರಶೇಖರಗೌಡ ಮಾಗನೂರ ಮಾತನಾಡಿದರು. ಕಲಬುರಗಿ ದಕ್ಷಿಣ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ, ಮಾಜಿ ಸಚಿವ ಬಾಬುರಾವ್ ಚವ್ಹಾಣ್, ಮಾಜಿ ಶಾಸಕರಾದ ಡಾ.ವೀರಬಸವಂತರಡ್ಡಿ ಮುದ್ನಾಳ್, ತಿಪ್ಪರಾಜು ಹವಾಲ್ದಾರ್, ರಾಜ್ಯ ಉಪಾಧ್ಯಕ್ಷೆ ನಾಗರತ್ನ ಕುಪ್ಪಿ, ಪ್ರಮುಖರಾದ ಡಾ.ಚಂದ್ರಶೇಖರ ಸುಬೇದಾರ, ಸಾಯಿಬಣ್ಣ ಬೋರಬಂಡ, ದೇವರಾಜ ನಾಯಕ, ಭೀಮಣ್ಣ ಮೇಟಿ, ಸಿದ್ಧಣಗೌಡ ಕಾಡಂನೂರ ಇದ್ದರು. ಶರಣಗೌಡ ಬಾಡಿಯಾಳ ಸ್ವಾಗತಿಸಿದರು. ಮಾರುತಿ ಕಲಾಲ್ ವಂದಿಸಿದರು. ವೆಂಕಟರಡ್ಡಿ ಅಬ್ಬೆತುಮಕೂರ ನಿರೂಪಣೆ ಮಾಡಿದರು.

ಬಿಎಸ್ವೈ ಮೇಲಿನ ಪ್ರಕರಣ ಖುಲಾಸೆ ಸುಪ್ರೀಂ ತೀರ್ಪು ಸ್ವಾಗತಾರ್ಹ: ವಿಧಾನಸಭೆ ಪ್ರತಿಪಕ್ಷ ನಾಯಕರಾದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ವಿರುದ್ಧದ ಐದು ಪ್ರಕರಣಗಳನ್ನು ಸುಪ್ರಿಂಕೋರ್ಟ್​ ಖುಲಾಸೆಗೊಳಿಸಿ ತೀರ್ಪು ನೀಡಿದ್ದನ್ನು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಸ್ವಾಗತಿಸಿದ್ದಾರೆ. ಕೆಲ ಕಾಣದ ಕೈಗಳು ಹಾಗೂ ಕಾಂಗ್ರೆಸ್ ಸೇರಿ ಬಿಎಸ್ವೈ ವಿರುದ್ಧ ಅಂದು ರಾಜ್ಯಪಾಲರ ಅನುಮತಿ ಪಡೆದು ಖಾಸಗಿ ದೂರು ಸಲ್ಲಿಸಿದ್ದವು. ಆದರೆ ಇಂದು ಸುಪ್ರಿಂಕೋರ್ಟ್​ಯಡಿಯೂರಪ್ಪ ಮೇಲಿದ್ದ ಎಲ್ಲ ಪ್ರಕರಣಗಳನ್ನು ರದ್ದುಗೊಳಿಸಿರುವುದು ಸತ್ಯಕ್ಕೆ ಸಂದ ಜಯವಾಗಿದೆ ಎಂದು ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಸಂತಸ ವ್ಯಕ್ತಪಡಿಸಿದರು. ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣವಾಗುವುದು ಶತಸಿದ್ಧ. ಲೋಕಸಭೆ ಚುನಾವಣೆ ಸಂದರ್ಭದಲ್ಲಿ ರಾಮಮಂದಿರ ವಿಷಯವನ್ನು ಬಿಜೆಪಿ ಅಸ್ತ್ರ ಮಾಡಿಕೊಂಡಿದೆ ಎಂಬ ಪ್ರತಿಪಕ್ಷಗಳ ಆರೋಪಗಳಲ್ಲಿ ಹುರುಳಿಲ್ಲ. ಮಂದಿರ ನಿರ್ಮಾಣದ ಕನಸು ಇಂದು ನಿನ್ನೆಯದ್ದಲ್ಲ. ಲಕ್ಷಾಂತರ ಸಾಧು ಸಂತರು ಈಗಾಗಲೇ ಮಂದಿರ ನಿರ್ಮಾಣಕ್ಕೆ ಪಣ ತೊಟ್ಟಿದ್ದಾರೆ. ಕೇಂದ್ರ ಸರ್ಕಾರ ಸುಗ್ರೀವಾಜ್ಞೆ ಹೊರಡಿಸುವ ಮೂಲಕ ಮಂದಿರ ನಿರ್ಮಾಣಕ್ಕೆ ಒತ್ತಡ ಹೇರಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಯಾವ ನಿರ್ಧಾರ ಕೈಗೊಳ್ಳಲಿದ್ದಾರೆ ಎಂಬುದು ಕಾದು ನೋಡಬೇಕಿದೆ ಎಂದರು.

ಮಾಜಿ ಸಿಎಂ ಸಿದ್ದರಾಮಯ್ಯ ಇತ್ತೀಚೆಗೆ ಹುಚ್ಚರಂತೆ ವತರ್ಿಸುತ್ತಿದ್ದಾರೆ. ಪ್ರಕೃತಿ ಚಿಕಿತ್ಸೆಗಾಗಿ ತೆರಳಿದ್ದ ವೇಳೆ ಇನ್ಮುಂದೆ ನಾನು ರಾಜಕೀಯದಲ್ಲಿ ಸಕ್ರಿಯವಾಗಿ ಇರೋಲ್ಲ ಎಂದು ಹೇಳಿದ್ದರು. ಆದರೆ ಬೆಂಗಳೂರಿಗೆ ಬಂದ ತಕ್ಷಣ ನಾನೂ ಮುಂದೆ ಸಿಎಂ ಆಗುತ್ತೇನೆ ಎಂದು ಉಲ್ಟಾ ಹೊಡೆದಿದ್ದಾರೆ.
| ಕೆ.ಎಸ್.ಈಶ್ವರಪ್ಪ
ಮಾಜಿ ಉಪ ಮುಖ್ಯಮಂತ್ರಿ