ಚರಂಡಿ ನೀರಲ್ಲೇ ಮಕ್ಕಳ ನಡಿಗೆ

ಸವಿತಾ ಮಾಡಬಾಳ ವಡಗೇರಾ
ಯಾದಗಿರಿ ಜಿಲ್ಲೆಯ ಗಡಿ ಗ್ರಾಮ ಸೂಗುರು ಮೂಲಸೌಕರ್ಯಗಳಿಂದ ವಂಚಿತವಾಗಿದ್ದು, ಗ್ರಾಮದ ಮುಖ್ಯ ರಸ್ತೆಯೇ ಚರಂಡಿ ನೀರಿನಿಂದಾಗಿ ಕೆಸರು ಕೊಚ್ಚೆಯಾಗಿ ಮಾರ್ಪಟ್ಟಿದೆ.

ಗೋನಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಈ ಊರಲ್ಲಿ 1000ಕ್ಕೂ ಹೆಚ್ಚು ಜನಸಂಖ್ಯೆ ಇದ್ದು, ನಿತ್ಯ ಚರಂಡಿ ದುವರ್ಾಸನೆಯಲ್ಲೇ ರೋಗ-ರುಜಿನುಗಳ ಭೀತಿಯಲ್ಲೇ ಜೀವನ ಸಾಗಿಸುವಂತಾಗಿದೆ.

ಸೂಕ್ತ ವ್ಯವಸ್ಥೆ ಇಲ್ಲದೆ ಊರಿನ ಎಲ್ಲ ಚರಂಡಿಗಳು ತುಂಬಿ ರಸ್ತೆಗೆ ಹೊಲಸು ಹರಿಯುತ್ತಿದೆ. ಮನೆಗಳ ಬಚ್ಚಲು, ಬಟ್ಟೆ ತೊಳೆದ ನೀರು ಸರಾಗವಾಗಿ ರಸ್ತೆಗೆ ಹರಿಯುವುದರಿಂದ ಎಲ್ಲೆಂದರಲ್ಲಿ ಕೆಸರು ಕೊಚ್ಚೆಯಾಗಿ ಸ್ವಚ್ಛತೆ ಎಂಬುದು ಮರೀಚಿಕೆಯಾಗಿದೆ.

ಇಂತಹ ದುರವಸ್ಥೆಯ ರಸ್ತೆಯಲ್ಲೇ ಮಕ್ಕಳು ಪುಟ್ಟ ಪುಟ್ಟ ಹೆಜ್ಜೆಗಳನ್ನಿಡುತ್ತ ಶಾಲೆಗೆ ತೆರಳುವುದು ಅನಿವಾರ್ಯವಾಗಿಬಿಟ್ಟಿದೆ. ಹಲವು ಬಾರಿ ಮಕ್ಕಳು ಚರಂಡಿಯಲ್ಲಿ ಕಾಲು ಜಾರಿ ಬಿದ್ದ ಪ್ರಸಂಗಗಳೂ ನಡೆದಿವೆ. ಚರಂಡಿಯಿಂದ ಸೊಳ್ಳೆ, ನೊಣಗಳ ಉತ್ಪತ್ತಿ ಹೆಚ್ಚಾಗಿ ಕಾಲರಾ, ಮಲೇರಿಯಾದಂತಹ ಸಾಂಕ್ರಾಮಿಕ ರೋಗ ಬರುವ ಭಯದಲ್ಲಿ ದಿನದೂಡುತ್ತಿದ್ದಾರೆ ನಾಗರಿಕರು.

ಸುಳ್ಳು ಆಶ್ವಾಸನೆ: ಚುನಾವಣೆ ಸಂದರ್ಭದಲ್ಲಿ ರಾಜಕೀಯ ಮುಖಂಡರು, ಜನಪ್ರತಿನಿಧಿಗಳು ಭೇಟಿ ನೀಡಿ ಆಶ್ವಾಸನೆ ಕೊಟ್ಟು ಹೋಗಿದ್ದಾರೆ. ಆದರೆ ಮತದಾನದ ನಂತರ ಇತ್ತ ತಿರುಗಿಯೂ ನೋಡುವವರಿಲ್ಲದಂತಾಗಿದೆ.

ಗ್ರಾಮದ ಸ್ವಚ್ಛತೆ ಬಗ್ಗೆ ಹಲವು ಭಾರಿ ಗ್ರಾಮ ಪಂಚಾಯಿತಿ ಸದಸ್ಯರು, ಪಿಡಿಒ, ಅಧ್ಯಕ್ಷರು ಸೇರಿ ಜನಪ್ರತಿನಿಧಿಗಳಿಗೆ ಮನವಿ ಮಾಡಿದ್ದರೂ ಯಾರೊಬ್ಬರೂ ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸುತ್ತಾರೆ ಗ್ರಾಮಸ್ಥರು.
ಕೇಂದ್ರ ಹಾಗೂ ರಾಜ್ಯ ಸಕರ್ಾರಗಳು ಸ್ವಚ್ಛತೆಗಾಗಿ ನೀರಿನಂತೆ ಹಣ ಖಚರ್ು ಮಾಡಿದರೂ ಗ್ರಾಮೀಣ ಭಾಗದಲ್ಲಿ ಸ್ವಚ್ಛತೆ ಎಂಬುದು ಗಗನ ಕುಸುಮವಾಗಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಿ ಗ್ರಾಮದಲ್ಲಿನ ಸಮಸ್ಯೆ ಬಗೆಹರಿಸಲು ಮುಂದಾಗಬೇಕು ಎಂಬುದು ಒಕ್ಕೊರಲ ಒತ್ತಾಸೆಯಾಗಿದೆ.

ಒಂದ್ ದಿನ ಅಲ್ಲ, ಎರಡು ದಿನ ಅಲ್ಲಾರ್ರಿ, ಕಳೆದ ಮೂರು ವರ್ಷದಿಂದ ನಮ್ ಹುಡ್ಗರು ಈ ಚರಂಡಿದಾಗ್ ನಡ್ಕೊಂಡೇ ಸ್ಕೂಲಿಗ್ ಹೊಂಟಾರ್. ಸಣ್ ಸಣ್ ಮಕ್ಕಳನ್ ಸಾಲಿಗ್ ಕಳಸೋಕು ಅಂಜಿಕಿ ಬರಂಗ್ ಆಗ್ಯಾದ್ರಿ. ಆದಷ್ಟ್ ಜಲ್ದಿ ಜೆಇ, ಪಿಡಿಒ, ಶಾಸಕರು ಇತ್ತ ಗಮನ ಹರಿಸಿ ಸಮಸ್ಯೆಗೆ ಸ್ಪಂದಿಸಬೇಕು.
| ರವಿಕುಮಾರ, ಎಸ್ಡಿಎಂಸಿ ಅಧ್ಯಕ್ಷ

ಗ್ರಾಮದಲ್ಲಿನ ಅವ್ಯವಸ್ಥೆ ಬಗ್ಗೆ ಗಮನಕ್ಕೆ ಬಂದಿದೆ. ಜೆಇ ಜತೆ ಮಾತನಾಡಿ ಹತ್ತು ದಿನದಲ್ಲಿ ಸಮಸ್ಯೆ ಬಗೆಹರಿಸುತ್ತೇವೆ.
| ಯಮನೂರಪ್ಪ ಗೋನಾಲ್, ಪಿಡಿಒ

ಈಗಾಗಲೇ ಸೂಗೂರು ಗ್ರಾಮಕ್ಕೆ ಭೇಟಿ ಕೊಟ್ಟು ಬಂದಿದ್ದೇನೆ. ಉದ್ಯೋಗ ಖಾತ್ರಿ ಮೂಲಕ ಶಾಲೆಗೆ ಹೋಗುವ ರಸ್ತೆಯನ್ನು ಹತ್ತು ದಿನದಲ್ಲಿ ಸರಿಪಡಿಸಿಕೊಡುತ್ತೇವೆ.
| ಶಶಿಕಾಂತ, ಜೆಇ