ಯೋಧನ ಕುಟುಂಬಕ್ಕೆ ನೆರವಾಗಲಿ ಸರ್ಕಾರ

ಯಾದಗಿರಿ: ತೆಲಂಗಾಣದ ರಾಮಗೊಂಡನಲ್ಲಿ ಕರ್ತವ್ಯ ನಿರತರಾಗಿದ್ದ ಶಹಾಪುರ ತಾಲೂಕಿನ ಅರಳಳ್ಳಿ ಗ್ರಾಮದ ವೀರಯೋಧ ತಿಪ್ಪಣ್ಣ ಸಾಹೇಬಗೌಡ ಅವರು ಹೃದಯಾಘಾತದಿಂದ ನಿಧನರಾದ ಹಿನ್ನಲೆಯಲ್ಲಿ ನಗರದ ಟೋಕರಿ ಕೋಲಿ ಸಮಾಜದ ಕಚೇರಿಯಲ್ಲಿ ಶೃದ್ಧಾಂಜಲಿ ಸಭೆ ನಡೆಸಲಾಯಿತು.

ಸಮಾಜದ ಜಿಲ್ಲಾಧ್ಯಕ್ಷ ಉಮೇಶ ಮುದ್ನಾಳ ಮಾತನಾಡಿ, ಕರ್ತವ್ಯದಲ್ಲಿ ನಿರತನಾಗಿದ್ದಾಗಲೇ ಮೃತಪಟ್ಟ ಯೋಧ ತಿಪ್ಪಣ್ಣ ಕಳೆದ 17 ವರ್ಷದಿಂದ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಅವರು 41 ವರ್ಷದವರಾಗಿದ್ದು ತೆಲಂಗಾಣದ ರಾಮಗೊಂಡ ಕೈಗಾರಿಕಾ ಭದ್ರತಾ ಪಡೆಯಲ್ಲಿ ಕಮಾಂಡೆಂಟ್ ಆಗಿ ಸೇವೆ ಸಲ್ಲಿಸುತ್ತಿದ್ದರು. ಸಣ್ಣ ವಯಸ್ಸಿನಲ್ಲಿಯೇ ಹೃದಯಾಘಾತಕ್ಕೀಡಾಗಿ ಮೃತಪಟ್ಟ ಯೋಧನಿಗೆ ಕೇಂದ್ರ ಮತ್ತು ರಾಜ್ಯ ಸಕರ್ಾರಗಳು ತಕ್ಷಣ ನೆರವಿಗೆ ಬಂದು ಸಹಾಯ ಮಾಡಬೇಕೆಂದು ಆಗ್ರಹಿಸಿದರು.

ಇತ್ತೀಚೆಗೆ ಎಲ್ಲರೂ ಸ್ವಾರ್ಥಕ್ಕಾಗಿ ಕೆಲಸ ಮಾಡುತ್ತಿದ್ದಾರೆ ಆದರೆ ಯೋಧರು ದೇಶಕ್ಕಾಗಿ ಕೆಲಸ ಮಾಡುತ್ತಿದ್ದಾರೆ. ಮನೆಯಲ್ಲಿ ಸಣ್ಣ ಮಕ್ಕಳಿದ್ದು, ಇದನ್ನು ಮನಗಂಡು ಮೃತ ಯೋಧನ ಕುಟುಂಬಕ್ಕೆ ಸಾಂತ್ವನ ಹೇಳಿ ಸೌಲತ್ತು ನೀಡಲು ಸರ್ಕಾರ ಮುಂದಾಗಬೇಕು ಎಂದರು.

ಅಣವೀರ್, ಸಿದ್ದು ಜಮಾದಾರ, ಪ್ರತಾಪ್, ಬಸವರಾಜ, ರಾಚಪ್ಪ, ಬಸವರಾಜ, ಹೊನ್ನಪ್ಪ, ಮಲ್ಲೇಶ, ಅಂಬವ್ವ, ತಾಯಪ್ಪ, ವಿಶಾಲ, ಭಜನ, ಭಾಗ್ಯ ಇನ್ನಿತರರು ಇದ್ದರು.