ಅಧಿಕಾರಿಗಳ ಮಾಹಿತಿಗೆ ಸಚಿವರ ಬೇಸರ

ಸುರಪುರ: ಜಿಲ್ಲೆಯಲ್ಲಿ ಒಂದೇ ಒಂದು ಮಣ್ಣು ಪರೀಕ್ಷಾ ಕೇಂದ್ರವಿದೆ. ರೈತರಿಗೆ ಸಕಾಲದಲ್ಲಿ ಮಣ್ಣು ಪರೀಕ್ಷಾ ವರದಿ ನೀಡದೆ ಏನು ಕೆಲಸ ಮಾಡುತಿದ್ದೀರಿ ಎಂದು ಕೃಷಿ ಸಚಿವ ಶಿವಶಂಕರರಡ್ಡಿ ಅವರು ಕೃಷ್ಣಾಪುರ ಮಣ್ಣು ಪರೀಕ್ಷಾ ಕೇಂದ್ರದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ತಾಲೂಕಿನ ರೈತರ ಜತೆ ಸಂವಾದ ನಡೆಸಲು ಶನಿವಾರ ಆಗಮಿಸಿದಾಗ ಮಾರ್ಗಮಧ್ಯದ ಕೃಷ್ಣಾಪುರ ಗ್ರಾಮದಲ್ಲಿರುವ ಜಿಲ್ಲೆಯ ಏಕೈಕ ಮಣ್ಣು ಆರೋಗ್ಯ ಪರೀಕ್ಷಾ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಇದುವರೆಗೆ ಕೇವಲ 44 ಸಾವಿರ ರೈತರಿಗೆ ಮಣ್ಣು ಪರೀಕ್ಷೆ ಕಾರ್ಡ್​ ನೀಡಲಾಗಿದೆ ಎಂದು ಕೇಂದ್ರದ ಅಧಿಕಾರಿ ಪ್ರಕಾಶ ಬಂಡೆಪ್ಪನಹಳ್ಳಿ ತಿಳಿಸಿದಾಗ ಸಿಡಿಮಿಡಿಗೊಂಡ ಸಚಿವರು, ಪ್ರತಿನಿತ್ಯ ಸುಮಾರು 200 ರೈತರಿಗೆ ಮಣ್ಣು ಪರೀಕ್ಷಾ ಕಾರ್ಡ್ ನೀಡಬೇಕು. ಆದರೆ ಇದುವರೆಗೆ ಅರ್ಧದಷ್ಟು ಕಾರ್ಡ್ ನೀಡಿಲ್ಲ. 1.30 ಲಕ್ಷ ರೈತರಿಗೆ ಕಾರ್ಡ್ ನೀಡಬೇಕೆಂದರೆ ಯಾವ ರೀತಿ ಕೆಲಸ ಮಾಡುತ್ತೀರಿ ಎಂಬುದು ಅರ್ಥವಾಗುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು.

ರೈತ ಸಂಘದ ರಾಜ್ಯ ಕಾರ್ಯದರ್ಶಿ  ಮಲ್ಲಿಕಾರ್ಜುನ ಸತ್ಯಂಪೇಟೆ ಅವರು ಕೃಷ್ಣಾಪುರ ಕ್ಯಾಂಪ್ ಉದ್ಯಾನ ಹಾಳಾಗಿದ್ದರೂ ದುರಸ್ತಿ ಮಾಡಿಲ್ಲ. ಮಣ್ಣು ಪರೀಕ್ಷಾ ಕೇಂದ್ರದ ಅಧಿಕಾರಿಗಳ ಕರ್ತವ್ಯಲೋಪದಿಂದಾಗಿ ಮೂರು ವರ್ಷದಿಂದ ಮಣ್ಣು ಆರೋಗ್ಯ ಪರೀಕ್ಷೆ ಕಾರ್ಡ್ ನೀಡದಿರುವ ಬಗ್ಗೆ ಸಚಿವರ ಗಮನಕ್ಕೆ ತಂದರು.
ಸಚಿವರ ಜೊತೆಗಿದ್ದ ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಸಹ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ತಹಸೀಲ್ದಾರ್ ಸುರೇಶ ಅಂಕಲಗಿ, ಜಂಟಿ ಕೃಷಿ ನಿರ್ದೇಶಕಿ ದೇವಿಕಾ, ಜಿಪಂ ಸದಸ್ಯ ಮರಿಲಿಂಗಪ್ಪ, ಕೃಷಿ ಅಧಿಕಾರಿ ಮಹಾದೇವಪ್ಪ, ಪಿಐ ಹರಿಬಾ ಜಮಾದಾರ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮರಿಗೌಡ ಹುಲಕಲ್, ಬಿಜೆಪಿ ಮುಖಂಡ ದೊಡ್ಡದೇಸಾಯಿ ದೇವರಗೋನಾಲ, ದೇವರಾಜ ಮಕಾಶಿ ಇದ್ದರು.

ರೈತರೊಂದಿಗೆ ಸಂವಾದ ನಡೆಸಿದ ಸಚಿವ: ಚಂದ್ಲಾಪುರ ಗ್ರಾಮಕ್ಕೆ ಕೃಷಿ ಸಚಿವ ಶಿವಶಂಕರರಡ್ಡಿ ಭೇಟಿ ನೀಡಿ ರೈತರೊಂದಿಗೆ ಸಂವಾದ ನಡೆಸಿದರು. ಕೃಷಿ ಹೊಂಡ ರೈತರಿಗೆ ವರದಾನವಾಗಿದೆ. ಹೊಂಡ ನಿರ್ಮಿಸಿಕೊಂಡು ಉತ್ತಮ ಬೆಳೆ ಬೆಳೆಯಬಹುದಾಗಿದೆ. ಸರ್ಕಾರ ಕೃಷಿ ಹೊಂಡ ನಿರ್ಮಾಣಕ್ಕೆ ಒಂದು ಲಕ್ಷ ರೂಪಾಯಿವರೆಗೆ ಧನಸಹಾಯ ನೀಡುತ್ತಿದೆ. ರೈತರು ಸದುಪಯೊಗ ಮಾಡಿಕೊಳ್ಳುವಂತೆ ಸಲಹೆ ನೀಡಿದರು. ಅರ್ಧ ತಾಸಿಗೂ ಹೆಚ್ಚು ಸಂವಾದ ನಡೆಸಿ ಕೃಷಿಗೆ ಸಂಬಂಧಿಸಿದ ಯೋಜನೆಗಳ ಮಾಹಿತಿ ನೀಡಿದರು.