ಶಿಕ್ಷಣದಲ್ಲಿ ಮಹಿಳೆಯ ಪಾತ್ರ ವಿಶಿಷ್ಟ

ಸುರಪುರ: ಸಮಾಜದ ಬೆಳವಣಿಗೆಯಲ್ಲಿ ಮಹಿಳೆಯರು ಅತ್ಯುತ್ತಮ ಕೊಡುಗೆ ಕೊಟ್ಟಿದ್ದಾರೆ. ಮೊದಲ ಮಹಿಳಾ ಶಿಕ್ಷಕಿ ಜ್ಯೋತಿ ಬಾ ಫುಲೆಯಿಂದ ಹಿಡಿದು ಇಂದಿನವರೆಗೂ ಮಗುವಿನ ಆರಂಭಿಕ ಶಿಕ್ಷಣದಲ್ಲಿ ಮಹಿಳೆಯರ ಪಾತ್ರ ಶ್ಲಾಘನೀಯ ಎಂದು ಅಜೀಮ್ ಪ್ರೇಮ್ಜಿ ಫೌಂಡೇಷನ್ ಮುಖ್ಯಸ್ಥ ರುದ್ರೇಶ.ಎಸ್ ಹೇಳಿದರು.

ತಿಂಥಣಿಯ ಜೈವಿಕ ಇಂಧನ ಕೇಂದ್ರದಲ್ಲಿ ಅಜೀಮ್ ಪ್ರೇಮಜಿ ಫೌಂಡೇಷನ್ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಹಮ್ಮಿಕೊಂಡ ಮಹಿಳಾ ದಿನಾಚರಣೆಯಲ್ಲಿ ಮಾತನಾಡಿದ ಅವರು, ಮಹಿಲೆಯಿಂದ ಮನೆ, ಮನ ಹಾಗೂ ಸಮಾಜ ಬೆಳಗುತ್ತದೆ ಎಂದು ಹೇಳಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ನಾಗರತ್ನಾ ಓಲೇಕಾರ ಮಾತನಾಡಿ, ಎಲ್ಲ ಶಿಕ್ಷಕರು ತಮ್ಮ ಶಾಲೆಗಳಲ್ಲಿ ಮಾನಸಿಕ ಮತ್ತು ಬೌದ್ಧಿಕ ವಾತವರಣ ಉತ್ತಮಗೊಳಿಸುವುದರ ಮೂಲಕ ಮಕ್ಕಳಲ್ಲಿ ಗುಣಮಟ್ಟದ ಶಿಕ್ಷಣ ಕೊಡಬೇಕು ಎಂದರು.

ಶಿಕ್ಷಕಿಯರಾದ ರಾಜೇಶ್ವರಿ, ಸುನೀತಾ ಹಾಗೂ ಸವಿತಾ ಶಿಕ್ಷಣದಲ್ಲಿ ಮಹಿಳೆಯರ ಪಾತ್ರ ಮತ್ತು ಪಠ್ಯಪುಸ್ತಕದಲ್ಲಿ ಮಹಿಳೆಯರ ಪಾತ್ರದ ಕುರಿತು ವಿಷಯ ಮಂಡನೆ ಮಾಡಿದರು. ಎಪಿಎಫ್ನ ಮೇಘಾ ಕುಲ್ಕರ್ಣಿ, ಸರೋಜಾ ನಿರಂಜನ್, ಕೃಷ್ಣಯ್ಯ, ಶ್ರೀಹರಿ, ಪರಮಣ್ಣ, ವಿನೋದ್ ಕುಮಾರ್, ಅನ್ವರ್ ಜಮಾದಾರ, ರೇಣುಕಾ ವಾಲಿ ಇತರರಿದ್ದರು.