- ಮೃತ ಪಿಎಸ್ಐ ಪರಶುರಾಮ್ ಮನೆಯಲ್ಲಿ ನೀರವ ಮೌನ
ಕೊಪ್ಪಳ: ಯಾದಗಿರಿ ಪಿಎಸ್ಐ ಪರಶುರಾಮ ಕಾರಟಗಿ ತಾಲೂಕಿನ ಸೋಮನಾಳ ನಿವಾಸದಲ್ಲಿ ನೀರವ ಮೌನ ಆವರಿಸಿದೆ. ಖಿನ್ನತೆಗೆ ಒಳಗಾಗಿದ್ದ ಮಗನನ್ನು ಬಿಟ್ಟು ಸೋಮನಾಳ ಗ್ರಾಮಕ್ಕೆ ಬಂದಿದ್ದ ಅವರ ತಾಯಿ ಗಂಗಮ್ಮ ಕರೆ ಮಾಡಿ ಮಗನನ್ನು ಎಬ್ಬಿಸುವಂತೆ ತಿಳಿಸಿದಾಗಲೇ ನಿಧನರಾದ ವಿಷಯ ಗೊತ್ತಾಗಿದೆ.
ಮಗನೊಂದಿಗೆ ವಾಸವಿದ್ದ ಗಂಗಮ್ಮ ಕಳೆದ ಸೋಮವಾರ ಸ್ವ ಗ್ರಾಮಕ್ಕೆ ಮರಳಿದ್ದಾರೆ. ಈ ವೇಳೆ ವರ್ಗಾವಣೆ ಆಗುತ್ತಿದೆ. ಈ ಸಮಯದಲ್ಲಿ ನೀನು ಊರಿಗೆ ಹೋಗಬೇಡ ಎಂದು ಹೇಳಿದ್ದ ಮಗನ ಮಾತು ನೆನೆದು ಗಂಗಮ್ಮ ಕಣ್ಣೀರು ಹಾಕುತ್ತಿದ್ದಾರೆ. “ನನ್ನ ಮಗ ಸಾಯುವ ಮುನ್ನಾ ಎರಡು ದಿನ ಗ್ರಾಮಕ್ಕೆ ಬಂದೆ. ನನ್ನ ಎದುರಿಗೂ ಪರಶುರಾಮ್ ವರ್ಗಾವಣೆ ವಿಷಯ ಪ್ರಸ್ತಾಪಿಸಿದ್ದ.
ಅಷ್ಟೊಂದು ದುಡ್ಡು ಅಣ್ಣ ಎಲ್ಲಿಂದ ಕೊಡುತ್ತಾನೆ ಎಂದು ಅಸಹಾಯಕತೆ ತೋಡಿಕೊಂಡದ್ದ. ಅವನ ಮನಸು ಅರಿಯದೇ ಹೋದೆ. ನಾವು ಬಡವರು. ಅಷ್ಟು ಹಣ ಎಲ್ಲಿಂದ ತರಲಿ. ಇರುವ ಕೆಲಸ ಮಾಡೋಣ ಬಿಡು ಎಂದಿದ್ದೆ. ಆದರೆ ಅದೇ ನನ್ನ ಮಗನನ್ನು ಸಾವಿನೆಡೆ ಕೊಂಡೊಯ್ದಿದೆ ಎಂದು ಗೋಳು ತೋಡಿಕೊಂಡರು.
ವಿಪಕ್ಷ ನಾಯಕ ಅಶೋಕ ಆಗಮನ
ವರ್ಗಾವಣೆ ದಂಧೆಯಿಂದ ಪ್ರಾಣ ಕಳೆದುಕೊಂಡ ಪಿಎಸ್ಐ ಪರಶುರಾಮ್ ಕುಟುಂಬ ಭೇಟಿಗೆ ವಿಪಕ್ಷ ನಾಯಕ ಆರ್. ಅಶೋಕ್ ಕಾರಟಗಿ ತಾಲೂಕಿನ ಸೋಮನಾಳಕ್ಕೆ ಆಗಮಿಸುತ್ತಿದ್ದಾರೆ. ಸೋಮನಾಳದಲ್ಲಿ ಗ್ರಾಮಸ್ಥರು, ಪರಶುರಾಮ್ ಸಂಬಂಧಿಗಳು ಹಾಗೂ ವಿವಿಧ ರಾಜಕೀಯ ನಾಯಕರು ನೆರೆದಿದ್ದಾರೆ. ಮಧ್ಯಾಹ್ನ 2 ಗಂಟೆಗೆ ಅಶೋಕ್ ಸೋಮನಾಳಗೆ ಬರಲಿದ್ದಾರೆ.
ಮಗನೇ ಅಡುಗೆ ಮಾಡಿ ಉಣಬಡಿಸಿದ್ದ
ಬಹಳ ಖಿನ್ನತೆಯಲ್ಲಿದ್ದ ನನ್ನ ಮಗ ಪರಶುರಾಮ್ ಸಾಯುವ ದಿನ ಮಧ್ಯಾಹ್ನ ತಾನೇ ಚಿತ್ರಾನ್ನ ಮಾಡಿ ಉಣಬಡಿಸಿದ ಎಂದು ಪರಶುರಾಮ್ ತಂದೆ ಜನಕಮುನಿ ಕಣ್ಣೀರಾದರು.
ಊಟದ ನಂತರ ಕೋಣೆಯೊಳಗೆ ಮಲಗಿದ. ಧಣಿವಾಗಿದೆ ಎಂದು ನಾನು ಎಬ್ಬಿಸಲಿಲ್ಲ. ಸಂಜೆಯಾದರೂ ಎದ್ದಿರಲಿಲ್ಲ. ನನ್ನ ಪತ್ನಿ ಕರೆ ಮಾಡಿ ಎಬ್ಬಿಸುವಂತೆ ತಿಳಿಸಿದಾಗಲೇ ನಾನು ಕೋಣೆಗೆ ಹೋದೆ. ಅಷ್ಟರಲ್ಲಿ ಅಸ್ವಸ್ಥನಾಗಿದ್ದ. ನಾನು ಅಕ್ಕಪಕ್ಕದವರನ್ನು ಕರೆದು ಆಸ್ಪತ್ರೆಗೆ ಸೇರಿಸಿದೆ. ಅಷ್ಟರಲ್ಲಿ ಮೃತಪಟ್ಟಿದ್ದಾನೆ ಎಂದು ವೈದ್ಯರು ತಿಳಿಸಿದರು.
ನನ್ನ ಎದುರು ವರ್ಗಾವಣೆ, ಹಣದ ಬಗ್ಗೆ ಮಾತನಾಡಿರಲಿಲ್ಲ. ಅವರ ತಾಯಿ ಹತ್ತಿರ ಮನಬಿಚ್ಚಿ ಮಾತನಾಡುತ್ತಿದ್ದ. ಬಹಳ ಕಷ್ಟಪಟ್ಟು ಮೇಲೆ ಬಂದಿದ್ದ. ಹಣಕ್ಕೆ ಪೀಡಿಸಿ ಅವನ ಸಾವಿಗೆ ಕಾರಣರಾದವರಿಗೆ ಶಿಕ್ಷೆಯಾಗಬೇಕು. ಅವನ ಕುಟುಂಬಕ್ಕೆ ಸರ್ಕಾರ ನ್ಯಾಯ ಕೊಡಿಸಬೇಕು ಎಂದು ಒತ್ತಾಯಿಸಿದರು.