ಅಗಲೀಕರಣ ನನೆಗುದಿಗೆ ವರ್ತಕರು ಬೀದಿಗೆ

ಕೆ.ಗವಿಸಿದ್ದೇಶ ಹೊಗರಿ ಕಕ್ಕೇರಾ
ರಸ್ತೆ ಅಗಲೀಕರಣ ಹಾಗೂ ವಾಲ್ಮೀಕಿ ವೃತ್ತ ಅಭಿವೃದ್ಧಿಪಡಿಸುವ ಉದ್ದೇಶದಿಂದ ಪಟ್ಟಣದಲ್ಲಿ 100ಕ್ಕೂ ಹೆಚ್ಚು ಅಂಗಡಿಗಳು ನೆಲಸಮಗೊಂಡು ವರ್ತಕರು ಬೀದಿಗೆ ಬಿದ್ದು ಸೋಮವಾರಕ್ಕೆ ತಿಂಗಳಾಗಿದೆ. ಆದರೆ ಇದುವರೆಗೆ ಶಾಸಕ ನರಸಿಂಹ ನಾಯಕ ಒಬ್ಬರನ್ನು ಬಿಟ್ಟರೆ, ಯಾವೊಬ್ಬ ಅಧಿಕಾರಿ ಕ್ಯಾರೆ ಎನ್ನದ್ದರಿಂದ ವರ್ತಕರ ಅತಂತ್ರ ಸ್ಥಿತಿಯಲ್ಲಿದ್ದಾರೆ.

ಹೈದರಾಬಾದ್ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ 50 ಲಕ್ಷ ವೆಚ್ಚದಲ್ಲಿ ಮಹರ್ಷಿ ವಾಲ್ಮೀಕಿ ವೃತ್ತ ಹಾಗೂ ರಸ್ತೆ ಅಗಲೀಕರಣ, ಜಿಲ್ಲಾ ಮುಖ್ಯ ರಸ್ತೆಯ ಶಾಂತಪುರ ಕ್ರಾಸ್, ಸೋಮನಾಥ ರಸ್ತೆ ಹಾಗೂ ಬಲಶೆಟ್ಟಿಹಾಳ ಮಾರ್ಗದಲ್ಲಿ 37 ಮೀಟರ್ವರೆಗೆ ವೃತ್ತದ ಮಧ್ಯಭಾಗದಿಂದ 12 ಮೀಟರ್ ರಸ್ತೆಯನ್ನು ಅಗಲೀಕರಣ ಮಾಡಲಾಗುತ್ತಿದೆ.

ಕಳೆದ ತಿಂಗಳಲ್ಲಿ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಮಾರ್ಕೌಟ್ ಮಾಡಿ ವರ್ತಕರಿಗೆ ನೋಟಿಸ್ ನೀಡಿದ್ದರು. ಆ.1ರಂದು ಡಂಗುರ ಸಾರುವ ಮೂಲಕ ಮತ್ತೊಮ್ಮೆ ಅಂಗಡಿಕಾರರನ್ನು ಎಚ್ಚರಿಸಿದ್ದರು. ಕೆಲ ವರ್ತಕರು ಗುರುತು ಮಾಡಿದ ಜಾಗದಿಂದ ಹಿಂದೆ ಸರಿದಿದ್ದರೂ ಅಧಿಕಾರಿಗಳು ಪೊಲೀಸರ ನೆರವಿನಿಂದ ಹಾಗೂ ಪುರಸಭೆ ಸಹಯೋಗದಲ್ಲಿ ಸಕರ್ಾರಿ ಶಾಲೆ ಎದುರಿನ ಅಂಗಡಿಗಳನ್ನು ದಿಢೀರ್ ನೆಲಸಮಗೊಳಿಸಿದರು.

ಇದರಿಂದ ದಂಗಾದ ವರ್ತಕರು ವಾರದ ನಂತರ ಪುರಸಭೆ ಮುಂದೆ ಧರಣಿ ನಡೆಸಿದರು. ಆಗ ಪುರಸಭೆ ಸರ್ವ ಸದಸ್ಯರ ಹಾಗೂ ಅಧಿಕಾರಿಗಳ ಸಭೆ ಕರೆದು ವ್ಯಾಪಾರಕ್ಕಾಗಿ ಸ್ಥಳಾವಕಾಶ ಮಾಡಿಕೊಡುವುದಾಗಿ ನೀಡಿದ ಭರವಸೆಯೂ ಹುಸಿಯಾಗಿದೆ.
ನಂತರ ಶಾಸಕ ನರಸಿಂಹ ನಾಯಕ ಆಗಮಿಸಿ, ನಿಯಮಗಳನ್ನು ಗಾಳಿಗೆ ತೂರಿ ಅಂಗಡಿ ಮತ್ತು ಮನೆಗಳನ್ನು ಡೆಮಾಲಿಷನ್ ಮಾಡಲಾಗಿದೆ. ಜಿಲ್ಲಾಧಿಕಾರಿಗಳು ಸಂತ್ರಸ್ತರಿಗೆ ಕೂಡಲೇ ಪರಿಹಾರ ಧನ ನೀಡಬೇಕು ಎಂದು ಒತ್ತಾಯಿಸಿದ್ದಲ್ಲದೆ ಶಾಲೆ ಮುಖ್ಯಸ್ಥರೊಂದಿಗೆ ಚಚರ್ಿಸಿ ವರ್ತಕರಿಗೆ ಸ್ಥಳಾವಕಾಶ ಮಾಡಿಕೊಡುವುದಾಗಿ ಹೇಳಿದ್ದರು.

ಪಟ್ಟಣದ ಅಭಿವೃದ್ಧಿ ವಿಷಯದಲ್ಲಿ ವರ್ತಕರ ತಕರಾರಿಲ್ಲ. ಆದರೆ ಅಭಿವೃದ್ಧಿ ಹೆಸರಿನಲ್ಲಿ ಅಂಗಡಿಗಳ ನೆಲಸಮ ಎಷ್ಟು ಸರಿ ಎಂಬುದು ಅವರ ಪ್ರಶ್ನೆಯಾಗಿದೆ. ಇನ್ನು ವಾಲ್ಮೀಕಿ ವೃತ್ತದ ಅಭಿವೃದ್ಧಿ ಹಾಗೂ ರಸ್ತೆ ಅಗಲೀಕರಣ ಜತೆಗೆ ನಗರೋತ್ಥಾನದಡಿ ರಸ್ತೆಯ ಒಂದು ಭಾಗದ ಗಿರಕಿ ಬಾವಿಯಿಂದ ಬನದೊಡ್ಡಿ ಕ್ರಾಸ್ವರೆಗೆ ಒಳಚರಂಡಿ ಕಾಮಗಾರಿ ಪ್ರಚಲಿತದಲ್ಲಿದೆ. ಅಂಗಡಿಗಳು ನೆಲಸಮಗೊಂಡು ತಿಂಗಳಾದರೂ ಮೂರು ಮಾರ್ಗದ ರಸ್ತೆಗಳಲ್ಲಿ ಇನ್ನೂ ಅಗಲೀಕರಣ ಕಾಮಗಾರಿ ಆರಂಭವಾಗಿಲ್ಲ.