ಸಮನ್ವಯತೆಯಿಂದ ಕರ್ತವ್ಯ ನಿರ್ವಹಿಸಿ

ವಿಜಯವಾಣಿ ಸುದ್ದಿಜಾಲ ಯಾದಗಿರಿ
ಲೋಕಸಭೆ ಚುನಾವಣೆ ಜಿಲ್ಲಾದ್ಯಂತ ಸುಸೂತ್ರವಾಗಿ ನಡೆಯಲು ಅಗತ್ಯ ಪೂರ್ವ ಸಿದ್ಧತೆಗಳನ್ನು ಕೈಗೊಳ್ಳಬೇಕು. ಚುನಾವಣಾ ಕಾರ್ಯಕ್ಕೆ ನೇಮಕವಾದ ಎಲ್ಲ ಅಧಿಕಾರಿಗಳು ಸಮನ್ವಯತೆಯಿಂದ ಕರ್ತವ್ಯ ನಿರ್ವಹಿಸಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿಗಳೂ ಆದ ಜಿಲ್ಲಾಧಿಕಾರಿ ಎಂ. ಕೂರ್ಮಾರಾವ್ ಸೂಚನೆ ನೀಡಿದ್ದಾರೆ.

ಜಿಲ್ಲಾಧಿಕಾರಿಗಳ ಕಾರ್ಯಾಲಯದ ಸಭಾಂಗಣದಲ್ಲಿ ಗುರುವಾರ ಲೋಕಸಭಾ ಸಾರ್ವತ್ರಿಕ ಚುನಾವಣೆ-2019ಕ್ಕೆ ಸಂಬಂಧಿಸಿದಂತೆ ನಡೆದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಗುರುತಿಸಿರುವ ಮತಗಟ್ಟೆಗಳ ಶೌಚಗೃಹಗಳನ್ನು ಬಳಸಲು ಯೋಗ್ಯವಾಗಿರುವಂತೆ ಸಂಬಂಧಪಟ್ಟ ತಾಪಂ ಇಒ ಅವರು, ನಗರಸಭೆ ಪೌರಾಯುಕ್ತರು ಹಾಗೂ ಪುರಸಭೆ ಮುಖ್ಯಾಧಿಕಾರಿಗಳು ಕ್ರಮ ವಹಿಸಬೇಕು ಎಂದರು.

1950 ಸಹಾಯವಾಣಿಗೆ ಕರೆ ಮಾಡುವ ಮೂಲಕ ಚುನಾವಣೆಗೆ ಸಂಬಂಧಿಸಿದಂತೆ ಬೆಳಿಗ್ಗೆ 9ರಿಂದ ರಾತ್ರಿ 9 ಗಂಟೆಯವರೆಗೆ ಮಾಹಿತಿಯನ್ನು ಪಡೆದುಕೊಳ್ಳಬಹುದು. ಮತದಾರರ ಪಟ್ಟಿಯಲ್ಲಿ ಮತದಾರರು ತಮ್ಮ ಹೆಸರು, ಭಾಗ ಸಂಖ್ಯೆ, ಎಪಿಕ್ ನಂ, ಕ್ರ.ಸಂ ಗಳನ್ನು ಪರಿಶೀಲಿಸಿಕೊಳ್ಳಬಹುದಾಗಿದೆ ಎಂದು ಹೇಳಿದರು.

ಸೆಕ್ಟರ್ ಅಧಿಕಾರಿಗಳ ವಾಹನಗಳಿಗೆ ಜಿಪಿಎಸ್ ಅಳವಡಿಸಬೇಕು. ಜಿಲ್ಲೆಯ ಮತದಾನ ಪ್ರಮಾಣ ಹೆಚ್ಚಳಕ್ಕೆ ಚುನಾವಣಾ ರಾಯಭಾರಿಯನ್ನು ಗುರುತಿಸಬೇಕು ಎಂದು ಸೂಚಿಸಿದ ಅವರು, ಚೆಕ್ಪೋಸ್ಟ್ಗಳ ಸ್ಥಾಪನೆ, ದುರ್ಬಲ ಮತ್ತು ಸೂಕ್ಷ್ಮ ಮತಗಟ್ಟೆಗಳು, ಮತಗಟ್ಟೆಗಳ ಬದಲಾವಣೆ ಕುರಿತು ಚರ್ಚೆ ನಡೆಸಿದರು.

ಜಿಪಂ ಸಿಇಒ ಕವಿತಾ ಎಸ್.ಮನ್ನಿಕೇರಿ ಮಾತನಾಡಿ, ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಮೊದಲ ಹಂತದ ಸ್ವೀಪ್ ಚಟುವಟಿಕೆ ಈಗಾಗಲೇ ಮುಗಿದಿದೆ. ನಂತರದ ಸ್ವೀಪ್ ಚಟುವಟಿಕೆಯನ್ನು ಕಲಾಜಾಥಾ ತಂಡಗಳ ಮೂಲಕ ಮತದಾರರಲ್ಲಿ ಜಾಗೃತಿ ಮೂಡಿಸಲಾಗುವುದು ಎಂದು ತಿಳಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಸೋನಾವಣೆ ಋಷಿಕೇಶ ಭಗವಾನ್, ಅಪರ ಜಿಲ್ಲಾಧಿಕಾರಿಗಳಾದ ಪ್ರಕಾಶ್ ಜಿ.ರಜಪೂತ, ಸಹಾಯಕ ಆಯುಕ್ತ ಶಂಕರಗೌಡ ಸೋಮನಾಳ, ಡಿವೈಎಸ್ಪಿ ಯು.ಶರಣಪ್ಪ, ಯಾದಗಿರಿಯ ಅಬಕಾರಿ ಉಪ ಆಯುಕ್ತ ಜಿ.ಪಿ.ನರೇಂದ್ರಕುಮಾರ, ಚುನಾವಣಾ ತಹಸೀಲ್ದಾರ್ ಅರುಣಕುಮಾರ ಕುಲಕರ್ಣಿ ಇದ್ದರು.