ಖರೀದಿ ಕೇಂದ್ರಗಳಿಂದ ರೈತರ ನೆಮ್ಮದಿ ಹಾಳು

ಯಾದಗಿರಿ: ಸರ್ಕಾರ ರೈತರು ಬೆಳೆದ ಆಹಾರಧಾನ್ಯಗಳನ್ನು ಖರೀದಿ ಕೇಂದ್ರಗಳ ಮೂಲಕ ಖರೀದಿಸುವ ವ್ಯವಸ್ಥೆ ಆರಂಭಿಸಿರುವುದು ಅವೈಜ್ಞಾನಿಕವಾಗಿದ್ದು, ಇದರಿಂದ ರೈತರ ನೆಮ್ಮದಿ ಹಾಳಾಗುತ್ತಿದೆ ಎಂದು ಕಲಬುರಗಿ ಹೈದರಾಬಾದ್ ಕರ್ನಾಟಕ ಚೇಂಬರ್ ಆಫ್ ಕಾಮರ್ಸ್​ ಅಧ್ಯಕ್ಷ ಅಮರನಾಥ ಪಾಟೀಲ್ ಆರೋಪಿಸಿದರು.

ಇಲ್ಲಿನ ಎಪಿಎಂಸಿ ಆವರಣದಲ್ಲಿನ ದಿ ಗ್ರೀನ್ ಸೀಡ್ಸ್, ಕಾಟನ್ ಮರ್ಚಂಟ್ಸ್ ಅಸೋಸಿಯೇಶನ್ನ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿದ್ದ ವರ್ತಕರ ಸಭೆಯಲ್ಲಿ ಮಾತನಾಡಿದ ಅವರು, ಸದಾ ರೈತರ ಹಿತ ಕಾಪಾಡುವಲ್ಲಿ ಹಾಗೂ ಅನ್ನದಾತನ ಸಂಕಷ್ಟಗಳಿಗೆ ನೆರವಾಗುವ ವರ್ತಕರ ಮೇಲೆ ಸಕರ್ಾರ ಯಾಕೆ ಕೆಂಗಣ್ಣು ಬೀರುತ್ತಿದೆಯೋ ನಮಗೆ ಅರ್ಥವಾಗುತ್ತಿಲ್ಲ. ರೈತರಿಂದ ತೊಗರಿ, ಉದ್ದು ಹಾಗೂ ಹೆಸರು ಧಾನ್ಯಗಳನ್ನು ಸಕರ್ಾರವೇ ನೇರವಾಗಿ ಖರೀದಿಸುತ್ತಿರುವುದು ಉತ್ತಮ ನಿರ್ಧಾರ. ಆದರೆ ರೈತರಿಗೆ ಸಕಾಲಕ್ಕೆ ಮಾರಾಟ ಮಾಡಿದ ಹಣ ನೀಡುತ್ತಿಲ್ಲ. ಇದರಿಂದ ಲಕ್ಷಾಂತರ ರೂ.ಸಾಲ ಮಾಡಿ ಬೆಳೆದ ಅನ್ನದಾಥ ಸಂಕಷ್ಟದಲ್ಲಿ ಸಿಲುಕಿಕೊಂಡಿದ್ದಾನೆ ಎಂದು ಅಸಮಧಾನ ವ್ಯಕ್ತಪಡಿಸಿದರು.

ಅಲ್ಲದೆ ರೈತರಿಂದ ಕೇವಲ 10 ಕ್ವಿಂಟಾಲ್ ಮಾತ್ರ ಆಹಾರಧಾನ್ಯಗಳನ್ನು ಸರ್ಕಾರ ಖರೀದಿಸುತ್ತಿದ್ದು, ಅದರಲ್ಲೂ ಅವ್ಯವಹಾರ ನಡೆದಿದೆ. ಇನ್ನೂ ಈ ಆಹಾರಧಾನ್ಯಗಳನ್ನು ವರ್ಷಾನುಗಟ್ಟಲೇ ಗೋದಾಮಿನಲ್ಲಿ ಸಂಗ್ರಹ ಮಾಡಿದರೆ ಅದರಲ್ಲಿನ ಪೌಷ್ಠಿಕಾಂಶಗಳ ಸತ್ವ ಹಾಳಾಗಿ ಇಡೀ ಧಾನ್ಯಗಳು ತಿನ್ನಲು ಯೋಗ್ಯವಾಗುತ್ತಿಲ್ಲ ಎಂದು ಆರೋಪಿಸಿದರು.

ಅಸೋಸಿಯೇಶನ್ನ ಅಧ್ಯಕ್ಷ ವಿಶ್ವನಾಥರಡ್ಡಿ ಜೋಳದಡಗಿ ಮಾತನಾಡಿ, ರಾಜ್ಯ ಸರ್ಕಾರ ಅವೈಕ್ಞಾನಿಕವಾಗಿ ಆರಂಭಿಸಿರುವ ಖರೀದಿ ಕೇಂದ್ರಗಳನ್ನು ಸ್ಥಗಿತಗೊಳಿಸಿ ಮಧ್ಯಪ್ರದೇಶ ಸರ್ಕಾರ ಜಾರಿಗೆ ತಂದಿರುವ ಭಾವಾಂತರ ಯೋಜನೆಯನ್ನು ನಮ್ಮ ರಾಜ್ಯದಲ್ಲೂ ಜಾರಿಗೆ ತರಬೇಕಿದೆ. ಇದರಿಂದ ವರ್ತಕರು ಹಾಗೂ ರೈತರಿಗೆ ಅನುಕೂಲವಾಗಲಿದೆ. ಭಾವಾಂತರ ಯೋಜನೆಯಡಿ ರೈತ ಬೆಳೆದ ಬೆಳೆಯನ್ನು ವರ್ತಕನಿಗೆ ಮಾರಾಟ ಮಾಡುತ್ತಾನೆ. ಸಕರ್ಾರ ಘೋಷಿಸಿದ ಬೆಂಬಲ ಬೆಲೆ ನೇರವಾಗಿ ರೈತನ ಖಾತೆಗೆ ಜಮೆಯಾಗಲಿದೆ. ಇದರಿಂದ ಬೆಳೆ ಮಾರಾಟ ಮಾಡಿದ ತಕ್ಷಣ ಅನ್ನದಾತನಿಗೆ ಹಣ ಸಿಗುವುದಲ್ಲದೆ ಎಪಿಎಂಸಿಯಲ್ಲಿ ಪ್ರತಿನಿತ್ಯ ದುಡಿಯುವ ಲಕ್ಷಾಂತರ ಕೂಲಿಕಾರ್ಮಿಕರಿಗೆ ಕೆಲಸವೂ ಸಿಕ್ಕಂತಾಗುತ್ತದೆ ಎಂದರು.

ಎಪಿಎಂಸಿ ಸದಸ್ಯ ಸೋಮನಾಥ ಜೈನ್ ಮಾತನಾಡಿ, ಕೇಂದ್ರ ಸರ್ಕಾರ ತನ್ನ ಪಾಲುದಾರನ್ನಾಗಿ ಮಾಡಿಕೊಂಡಿರುವ ರಿಮ್ಸ್ ಸಂಸ್ಥೆಯನ್ನು ಮೊದಲು ರದ್ದು ಮಾಡಬೇಕು ಎಂದು ಆಗ್ರಹಿಸಿದರು. ಸಭೆಯಲ್ಲಿ ಪ್ರಮುಖರಾದ ಶಶಿಕಾಂತ ಬಿ.ಪಾಟೀಲ್, ಶ್ರೀಮಂತ ಉದನೂರ, ವಿನೋದ ಬಂಢಾರಿ, ಮಲ್ಲಿಕಾರ್ಜುನ ಅಕ್ಕಿ, ದಿನೇಶ ದೋಖಾ, ಶಿವರಾಜ ಇಂಗಿನಶೆಟ್ಟಿ ಸೇರಿದಂತೆ ವರ್ತಕರು ಇದ್ದರು.