ಅಧಿಕಾರ ಲಾಲಸೆಗೆ ಜೆಡಿಎಸ್​ಗೆ ಕಾಂಗ್ರೆಸ್ ಶರಣು

ಯಾದಗಿರಿ: ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತದೆ ಎಂದು ಹೆದರಿದ ಕಾಂಗ್ರೆಸ್, ಫಲಿತಾಂಶ ಸಂಪೂರ್ಣ ಪ್ರಕಟವಾಗುವುದರೊಳಗೆ ಜೆಡಿಎಸ್ಗೆ ಶರಣಾಗಿರುವುದು ನಾಚಿಕೆಗೇಡಿನ ಸಂಗತಿ ಎಂದು ಬಿಜೆಪಿ ರಾಜ್ಯಾಧ್ಯಕ್ಷರಾದ ವಿಧಾನಸಭೆ ಪ್ರತಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ ಕಿಡಿಕಾರಿದ್ದಾರೆ.

ವಿದ್ಯಾಮಂಗಲ ಕಾರ್ಯಾಲಯದಲ್ಲಿ ಜಿಲ್ಲಾ ಬಿಜೆಪಿಯ ಪ್ರಮುಖ ಕಾರ್ಯಕರ್ತರ ಸಭೆಯನ್ನು ಶುಕ್ರವಾರ ಉದ್ಘಾಟಿಸಿದ ಅವರು, ಕರ್ನಾಟಕ ರಾಜಕೀಯ ಇತಿಹಾಸದಲ್ಲಿ 104 ಸ್ಥಾನ ಪಡೆದ ಬಿಜೆಪಿ ಪ್ರತಿಪಕ್ಷದಲ್ಲಿರುವುದು, ಕೇವಲ 37 ಸ್ಥಾನಗಳಲ್ಲಿ ಗೆದ್ದ ಜೆಡಿಎಸ್ ಅಧಿಕಾರ ನಡೆಸುತ್ತಿರುವುದು ಪ್ರಜಾತಂತ್ರ ವ್ಯವಸ್ಥೆಗೆ ಮಾಡಿದ ಅಪಮಾನ ಎಂದು ಸಮ್ಮಿಶ್ರ ಸರ್ಕಾರದ ವಿರುದ್ಧ ಹರಿಹಾಯ್ದರು.

ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದರೂ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ದೊರೆತಿಲ್ಲ. ನೀರಾವರಿ ಹಾಗೂ ಲೋಕೋಪಯೋಗಿ ಇಲಾಖೆಗಳಲ್ಲಿ ಸುಮಾರು 10 ಸಾವಿರ ಕೋಟಿ ಅನುದಾನ ಖರ್ಚಾಗದೆ ಉಳಿದಿದೆ. ಸಿಎಂ ಎಚ್.ಡಿ.ಕುಮಾರಸ್ವಾಮಿ ಮಾತೆತ್ತಿದರೆ ಸಾಕು, ರೈತರ ಸಾಲ ಮನ್ನಾ ಬಗ್ಗೆ ಹೇಳಿಕೆ ಕೊಡುತ್ತಿದ್ದಾರೆ. ಆದರೆ ಆ ಕೆಲಸವನ್ನೂ ಸರಿಯಾಗಿ ಮಾಡುತ್ತಿಲ್ಲ. ಗುರುವಾರ ಸಹಕಾರಿ ಸಂಘಗಳಲ್ಲಿನ ರೈತರ 10 ಸಾವಿರ ಕೋಟಿ ರೂ. ಸಾಲ ಮನ್ನಾ ಘೋಷಿಸಿದ್ದು, ಅದು ಸಂಘಗಳ ಖಾತೆಗೆ ಜಮೆ ಆಗಬೇಕಿದೆ ಎಂದರು.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ನಮ್ಮಲ್ಲಿನ ಆಂತರಿಕ ಗೊಂದಲಗಳಿಂದಾಗಿ 20-30 ಸ್ಥಾನ ಕೈತಪ್ಪಿವೆ. ಅಂತಲೇ ಪ್ರತಿಪಕ್ಷದಲ್ಲಿ ಕುಳಿತುಕೊಳ್ಳಬೇಕಿದೆ. ಆಗಿರುವ ದೋಷ ಸರಿಪಡಿಸುವ ಮೂಲಕ ಮತ್ತೆ ಸಂಘಟಿತರಾಗಬೇಕಿದೆ. ಯಾದಗಿರಿ, ಸುರಪುರ ನಗರಸಭೆ ಹಾಗೂ ಗುರುಮಠಕಲ್ ಪುರಸಭೆಯಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರುವುದು ಸ್ಥಳೀಯ ಶಾಸಕರು, ಮುಖಂಡರು ಹಾಗೂ ಕಾರ್ಯಕರ್ತರ ಜವಾಬ್ದಾರಿ ಎಂದು ಸೂಚಿಸಿದರು.

ದೇಶದಲ್ಲಿ ಕಾಂಗ್ರೆಸ್ ದಿನೇದಿನೆ ಪ್ರಾಬಲ್ಯ ಕಳೆದುಕೊಳ್ಳುತ್ತಿದೆ. ಲೋಕಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸಕರ್ಾರದ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸಿ ಸೋತಿದೆ. ದೇಶದ ಆರ್ಥಿಕ ಪರಿಸ್ಥಿತಿಯಲ್ಲಿ ಸುಧಾರಣೆ ಕಾಣುತ್ತಿದೆ. ನನೆಗುದಿಗೆ ಬಿದ್ದಿರುವ ರೈಲ್ವೆ ಯೋಜನೆಗಳಿಗೆ ಚಾಲನೆ ದೊರೆತಿದೆ. ಇದೆಲ್ಲ ಪ್ರಧಾನಿ ಮೋದಿ ಕಾರ್ಯಕ್ಷಮತೆಯಿಂದ ಸಾಧ್ಯವಾಗಿದೆ ಎಂದರು.

ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದ ವರ್ಗದವರನ್ನು ಕಾರ್ಯಕರ್ತರು ವಿಶ್ವಾಸಕ್ಕೆ ತೆಗೆದುಕೊಂಡು ಸಂಘಟನೆ ಬಲಪಡಿಸಬೇಕು ಎಂದು ಕರೆ ನೀಡಿದ ಬಿಎಸ್ವೈ, ಗುರುಮಠಕಲ್ ಕ್ಷೇತ್ರದ ಕಡೇಚೂರು-ಬಾಡಿಯಾಳ ಕೈಗಾರಿಕೆ ಪ್ರದೇಶದ ಅಭಿವೃದ್ಧಿ ಕುಂಠಿತಗೊಂಡಿದೆ. ಜಿಲ್ಲೆಯ ಅಭಿವೃದ್ಧಿ ಸಂಪೂರ್ಣ ನೆಲಕಚ್ಚಿದೆ. ರಾಜ್ಯ ಸರ್ಕಾರ ದಿವಾಳಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮಾಜಿ ಸಚಿವ ಗೋವಿಂದ ಕಾರಜೋಳ ಮಾತನಾಡಿ, ಈ ಹಿಂದೆ ರಾಜ್ಯದಲ್ಲಿ ನೆರೆ ಪರಿಸ್ಥಿತಿ ಉಂಟಾದಾಗ ಯಡಿಯೂರಪ್ಪ ನೇತೃತ್ವದ ನಮ್ಮ ಸರ್ಕಾರ 1500 ಕೋಟಿ ರೂ. ಖರ್ಚು ಮಾಡಿ ಸಂತ್ರಸ್ತರಿಗೆ ಉಚಿತವಾಗಿ ಮನೆಗಳನ್ನು ನಿರ್ಮಿಸಿಕೊಟ್ಟಿತ್ತು. ಆದರೆ ಇಂದಿನ ಸರ್ಕಾರ ಕೇವಲ ಮಾತನಾಡುತ್ತಿದೆ. ಕೆಲಸ ಮರೆತಿದೆ ಎಂದರು.
ಶಾಸಕ ನರಸಿಂಹ ನಾಯಕ ಮಾತನಾಡಿ, ಪಕ್ಷದ ಕಾರ್ಯಕರ್ತರು ನಮ್ಮನ್ನು ಗೆಲ್ಲಿಸಲು ಶಕ್ತಿಮೀರಿ ಪ್ರಯತ್ನಿಸಿದ್ದಾರೆ. ಅದರಂತೆ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಜಿಲ್ಲೆಯ ಮೂರು ಕ್ಷೇತ್ರಗಳಲ್ಲಿ ಕಮಲ ಬಾವುಟ ಹಾರಿಸಲು ನಾವು ಸಿದ್ಧರಿದ್ದೇವೆ. ಪಕ್ಷದ ರಾಜ್ಯಾಧ್ಯಕ್ಷರ ಆದೇಶಕ್ಕೆ ತಲೆಬಾಗಿ ಲೋಕಸಭೆ ಚುನಾವಣೆಯಲ್ಲಿ ಯಾರಿಗೆ ಟಿಕೆಟ್ ನೀಡಿದರೂ ಅಭ್ಯರ್ಥಿಯನ್ನು ಗೆಲ್ಲಿಸುವುದಾಗಿ ಭರವಸೆ ನೀಡಿದರು.

ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ ಮಾತನಾಡಿ, ಈ ರಾಜ್ಯದ ಸೂಪರ್ ಸಿಎಂ ಎಚ್.ಡಿ.ರೇವಣ್ಣ ಆಗಿದ್ದಾರೆ. ಅವರ ಮಾತಿನಂತೆ ಸರ್ಕಾರದಲ್ಲಿ ಎಲ್ಲ ಕೆಲಸಗಳು ಆಗುತ್ತಿದ್ದು, ಸಿಎಂ ಎಚ್.ಡಿ.ಕುಮಾರಸ್ವಾಮಿ ಪವರ್ಲೆಸ್ ಸಿಎಂ ಆಗಿದ್ದಾರೆ ಎಂದು ವ್ಯಂಗ್ಯವಾಡಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಚಂದ್ರಶೇಖರಗೌಡ ಮಾಗನೂರ, ಶಾಸಕ ವೆಂಕಟರಡ್ಡಿ ಮುದ್ನಾಳ್ ಮಾತನಾಡಿದರು. ಎಂಎಲ್ಸಿ ಬಿ.ಜಿ.ಪಾಟೀಲ್, ರಘುನಾಥರಾವ ಮಲ್ಕಾಪುರೆ, ಮಾಜಿ ಶಾಸಕರಾದ ಡಾ.ವೀರಬಸವಂತರಡ್ಡಿ ಮುದ್ನಾಳ, ಅಮರನಾಥ ಪಾಟೀಲ್, ಪ್ರಮುಖರಾದ ಡಾ.ಶರಣಭೂಪಾಲರಡ್ಡಿ ನಾಯ್ಕಲ್, ನಾಗರತ್ನ ಕುಪ್ಪಿ, ದೇವಿಂದ್ರನಾಥ ನಾದ್, ಸಾಯಿಬಣ್ಣ ಬೋರಬಂಡ, ಖಂಡಪ್ಪ ದಾಸನ್, ಡಾ.ಮಲ್ಲನಗೌಡ ಪಾಟೀಲ್ ಉಕ್ಕಿನಾಳ, ಡಾ.ಭೀಮಣ್ಣ ಮೇಟಿ, ನಗರಸಭೆ ಅಧ್ಯಕ್ಷೆ ಲಲಿತಾ ಅನಪುರ ಇತರರಿದ್ದರು. ಶರಣಗೌಡ ಬಾಡಿಯಾಳ ನಿರೂಪಣೆ ಮಾಡಿದರು. ವೆಂಕಟರಡ್ಡಿ ಅಬ್ಬೆತುಮಕೂರು ಸ್ವಾಗತಿಸಿದರು.

ಕಾರ್ಯಕರ್ತರ ಸಭೆಯಲ್ಲಿ ಭಿನ್ನಮತ ಸ್ಫೋಟ: ಬಿಜೆಪಿ ಪ್ರಮುಖತ ಸಭೆಯಲ್ಲಿ ರಾಜ್ಯ ಪ್ರಧಾನ ಕಾರ್ಯದಶರ್ಿ ಎನ್.ರವಿಕುಮಾರ ಮಾತನಾಡುತ್ತಿದ್ದ ವೇಳೆ ಕಾರ್ಯಕರ್ತರು ಅಸಮಾಧಾನ ವ್ಯಕ್ತಪಡಿಸಿದರು. ಲೋಕಸಭೆ ಚುನಾವಣೆ ನಿಮಿತ್ತ ಪ್ರತಿಯೊಬ್ಬ ಕಾರ್ಯಕರ್ತ ಪಕ್ಷ ಬಲವರ್ಧನೆಗೆ ಮುಂದಾಗಬೇಕು ಎಂದು ರವಿಕುಮಾರ ಒತ್ತಿ ಹೇಳಿದರು. ಆಗ ಕೆಲವರು, ನಾವು ಎಷ್ಟೇ ಕಷ್ಟಪಟ್ಟು ಕೆಲಸ ಮಾಡಿದರೂ ಚುನಾವಣೆಯಲ್ಲಿ ಬೇರೆಯವರಿಗೆ ಟಿಕೆಟ್ ನೀಡುತ್ತೀರಿ. ಪಕ್ಷದಲ್ಲಿ ಪ್ರಾಮಾಣಿಕ ಕಾರ್ಯಕರ್ತರಿಗೆ ಬೆಲೆ ಇಲ್ಲದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದರಿಂದ ಸಭೆಯಲ್ಲಿ ಕ್ಷಣಕಾಲ ಗೊಂದಲದ ಸ್ಥಿತಿ ನಿಮರ್ಾಣವಾಯಿತು. ಶಾಸಕ ವೆಂಕಟರಡ್ಡಿ ಮುದ್ನಾಳ್ ಮಧ್ಯಪ್ರವೇಶಿಸಿ ಕಾರ್ಯಕರ್ತರನ್ನು ಸಮಾಧಾನಪಡಿಸಿದರು. ಆದರೆ ರವಿಕುಮಾರ ತಮ್ಮ ಭಾಷಣವನ್ನು ಅರ್ಧಕ್ಕೆ ಮೊಟಕುಗೊಳಿಸಿ ಆಸನದತ್ತ ತೆರಳಿದರು.

ದುಡ್ಡಿನ ಗಿಡ ನೆಟ್ಟಿಲ್ಲ ಎಂದು ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ. ನೀವು ದುಡ್ಡಿನ ಗಿಡ ನೆಡುತ್ತೀರೋ ಅಥವಾ ಮರ ನೆಡುತ್ತೀರೋ ನಮಗದು ಬೇಕಿಲ್ಲ. ಅಧಿಕಾರದಲ್ಲಿರುವ ನೀವು ರಾಜ್ಯದ ಅಭಿವೃದ್ಧಿ ಮಾಡಬೇಕು. ಇಲ್ಲವಾದಲ್ಲಿ ಖುಚರ್ಿ ಖಾಲಿ ಮಾಡಿ. ಕೆಲಸ ಮಾಡಲಿಲ್ಲವೆಂದರೆ ನಾವು ಸುಮ್ಮನೆ ಕೂಡುವುದಿಲ್ಲ. ಮುಂದಿನ ಲೋಕಸಭೆ ಚುನಾವಣೆಯಲ್ಲಿ 24 ಸ್ಥಾನ ಗೆಲ್ಲುವ ಮೂಲಕ ಮತ್ತೆ ನರೇಂದ್ರ ಮೋದಿ ಅವರನ್ನು ಪ್ರಧಾನಿಯಾಗಿ ಮಾಡುತ್ತೇವೆ.
| ಬಿ.ಎಸ್.ಯಡಿಯೂರಪ್ಪ ಬಿಜೆಪಿ ರಾಜ್ಯಾಧ್ಯಕ್ಷ

Leave a Reply

Your email address will not be published. Required fields are marked *