ಮನುಕುಲವನ್ನು ಬೆಳಗುವ ರೈತ ನೆಮ್ಮದಿಯಾಗಿರಲಿ

ಯಾದಗಿರಿ: ಲೋಕಕ್ಕೆ ಅನ್ನವನ್ನು ನೀಡಿ ಮನುಕುಲವನ್ನು ಸಾಕಿ, ಸಲುಹುವ ರೈತ ನೆಮ್ಮದಿಯಿಂದಿರಬೇಕು. ಕಾಲಕಾಲಕ್ಕೆ ಮಳೆಯಾಗಿ ಆತನ ದುಡಿಮೆಗೆ ತಕ್ಕಂತೆ ಬೆಳೆಬಂದು ರೈತ ಜನಾಂಗದ ಬದುಕು ಹಸನಾದರೆ ಇಡೀ ಲೋಕವೇ ಸಂತೃಪ್ತವಾಗಿರಲು ಸಾಧ್ಯ ಎಂದು ಅಬ್ಬೆತುಮಕೂರಿನ ಪೀಠಾಧಿಪತಿ ಡಾ.ಗಂಗಾಧರ ಮಹಾಸ್ವಾಮಿಗಳು ನುಡಿದರು.

ಪಾರಂಪರಾ ಪಾದಯಾತ್ರೆ ಹಿನ್ನೆಲೆಯಲ್ಲಿ ಗುರುವಾರ ಜೇವರ್ಗಿ ತಾಲೂಕಿನ ಗಂವ್ಹಾರ ಗ್ರಾಮದ ಬನ್ನಿ ಬಸವೇಶ್ವರ ಕರ್ತು ಗದ್ದುಗೆಗೆ ಹಾಗೂ ಪಂಚಗೃಹ ಹಿರೇಮಠದಲ್ಲಿನ ವಿಶ್ವಾರಾಧ್ಯರ ಕರ್ತು ಗದ್ದುಗೆಗೆ ವಿಶೇಷ ಪೂಜೆ ನೆರವೇರಿಸಿ ಪಾದಯಾತ್ರೆಯಲ್ಲಿ ಪಾಲ್ಗೊಂಡ ಸಹಸ್ರಾರು ಭಕ್ತರನ್ನುದ್ದೇಶಿಸಿ ಆಶೀರ್ವಚನ ನೀಡಿದ ಅವರು, ಇಡೀ ಮನುಕುಲ ಶಾಂತಿ, ಸಹನೆ, ಸಮೃದ್ಧವಾಗಿರಬೇಕು, ಲೋಕವೆಲ್ಲ ಒಳಿತಾಗಿ ಲೋಕಕಲ್ಯಾಣ ಉಂಟಾಗಲಿ ಎಂದು ತಿಳಿಸಿದರು.
ಗಂವ್ಹಾರದ ಬನ್ನಿ ಬಸವೇಶ್ವರ ಗದ್ದುಗೆಗೆ ಗೋರಟಾ ರುದ್ರ ಸಂಗೀತದವರಿಂದ ವಿಶೇಷ ಪೂಜಾ ವಿಧಿ ವಿಧಾನಗಳು ಜರುಗಿದವು.ಅಲ್ಲಿಂದ ಮಧ್ಯಾಹ್ನ 1 ಗಂಟೆಗೆ ಗಂವ್ಹಾರದ ಗ್ರಾಮಸ್ಥರಿಂದ ಅಮೃತೇಶ್ವರ ಕಲ್ಯಾಣಮಂಟಪದಲ್ಲಿ ಪಾದಯಾತ್ರಿಗಳು ಪ್ರಸಾದ ಸ್ವೀಕರಿಸಿಕೊಂಡು ಗ್ರಾಮಸ್ಥರಿಂದ ಬೀಳ್ಕೊಂಡು ಮುಂದೆ ಹೊರಟರು.

ಈ ವೇಳೆ ವಿಜಯಕುಮಾರ ಪೊಲೀಸ್ ಪಾಟೀಲ್, ನೀಲಕಂಠರಾಯ ಪಾಟೀಲ್, ವಿಜುಗೌಡ ಪಾಟೀಲ್, ಮಲ್ಲಿನಾಥಗೌಡ ಯಲಗೋಡ, ನರಸಣಗೌಡ ರಾಯಚೂರು ಸೇರಿದಂತೆ ಅನೇಕ ಭಕ್ತರಿದ್ದರು.

ಕಳೆದ ಮೂರು ದಶಕಗಳಿಂದಲೂ ಪಾರಂಪರಾ ಪಾದಯಾತ್ರೆಯನ್ನು ಪ್ರತಿವರ್ಷ ನಡೆಸಿಕೊಂಡು ಬರಲಾಗುತ್ತಿದೆ. ಅಬಾಲವೃದ್ಧರಾದಿಯಾಗಿ ಈ ಪಾದಯಾತ್ರೆಯಲ್ಲಿ ಅಸಂಖ್ಯಾತ ಭಕ್ತರು ಅತ್ಯಂತ ಭಕ್ತಿ ಶ್ರದ್ಧೆಯಿಂದ ಪಾಲ್ಗೊಳ್ಳುತ್ತಿರುವುದು ವಿಶೇಷವಾಗಿದೆ.
| ಡಾ.ಗಂಗಾಧರ ಮಹಾಸ್ವಾಮಿಗಳು ಅಬ್ಬೆತುಮಕೂರಿನ ಪೀಠಾಧಿಪತಿ

Leave a Reply

Your email address will not be published. Required fields are marked *