ಸರ್ಕಾರ ರಚನೆಗೆ ‘ಬೇರೆ ಮಾರ್ಗ’ ಹಿಡಿದರೆ ತಪ್ಪೇನು?

ಮೈಸೂರು: ಸರ್ಕಾರ ರಚನೆ ಮಾಡಲು ನಾವು ‘ಬೇರೆ ಮಾರ್ಗ’ ಹಿಡಿದರೆ ಏನು ತಪ್ಪು ಎಂದು ಸಂಸದ ಪ್ರತಾಪ್‌ಸಿಂಹ ಪ್ರಶ್ನಿಸಿದರು.

ರಾಜ್ಯದಲ್ಲಿ ಮೈತ್ರಿ ಸರ್ಕಾರ ರಚಿಸುವಾಗ ಜೆಡಿಎಸ್ ಮತ್ತು ಕಾಂಗ್ರೆಸ್ ಹಿಡಿದಿದ್ದು ಅನ್ಯ ಮಾರ್ಗವೇ ಅಲ್ಲವೆ? ಅದನ್ನೇ ನಾವು ಮಾಡಿದರೆ ತಪ್ಪೇನು ಎಂದು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.

ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗುವುದು ಖಚಿತ. ಇದರಲ್ಲಿ ಯಾವುದೇ ಅನುಮಾನ ಇಲ್ಲ. ವಿಧಾನಸಭೆಯಲ್ಲಿ 104 ಸ್ಥಾನ ಹೊಂದಿರುವ ಬಿಜೆಪಿಯ ಶಾಸಕಾಂಗ ಪಕ್ಷದ ನಾಯಕ ಯಡಿಯೂರಪ್ಪ ಸಿಎಂ ಆಗುತ್ತ್ತಾರೆಂದೇ ಜನರು ಭಾವಿಸಿದ್ದರು. ಆದರೆ, ಜನರ ಇಚ್ಚೆಗೆ ವಿರುದ್ಧವಾಗಿ ಸಮ್ಮಿಶ್ರ ಸರ್ಕಾರ ರಚನೆಯಾಗಿದೆ ಎಂದರು.

ಪ್ರಜಾಪ್ರಭುತ್ವದಲ್ಲಿ ‘ಮ್ಯಾಜಿಕ್ ನಂಬರ್’ ಮುಖ್ಯ ಎಂಬುದನ್ನು ಗೌರವಿಸುತ್ತೇವೆ. ಆದರೆ, ಹೆಚ್ಚಿನ ಸಂಖ್ಯಾಬಲವಿದ್ದರೂ ನಾವು ಸುಮ್ಮನೆ ಕೂರಬೇಕೆ? ಹಾಗೆ ಮಾಡಲು ನಾವೇನು ಸನ್ಯಾಸಿಗಳೆ? ಜನರಿಂದ ತಿರಸ್ಕೃತಗೊಂಡ ಪಕ್ಷಗಳು ಅಧಿಕಾರದಲ್ಲಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಮರು ಪ್ರಶ್ನಿಸಿದರು.
ಪಕ್ಷದ ಸಂಸದರು ಹಾಗೂ ಶಾಸಕರಿಗಾಗಿ ದೆಹಲಿಯಲ್ಲಿ ಕಾರ್ಯಾಗಾರ ನಡೆಯುತ್ತಿರುವುದರಿಂದ ರಾಜ್ಯದ ಬಿಜೆಪಿ ಮುಖಂಡರು ಅಲ್ಲಿಗೆ ತೆರಳಿದ್ದಾರೆ. ಆದರೆ, ಅಲ್ಲಿ ಯಾವುದೇ ‘ಆಪರೇಷನ್’ ಮಾಡುತ್ತಿಲ್ಲ. ಎಲ್ಲರೂ ಮುಂದಿನ ಲೋಕಸಭಾ ಚುನಾವಣೆಯ ಕೆಲಸದಲ್ಲಿ ತೊಡಗಿದ್ದಾರೆ. ಅದಕ್ಕೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.

ಸಾಧನೆಗಳ ವಿವರ ನೀಡಲಿ: ‘ರಾಜ್ಯ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದು ಆರು ತಿಂಗಳು, ಸಾಧನೆ ನೂರಾರು’ ಎಂಬುದಾಗಿ ಪ್ರಚಾರ ಮಾಡುತ್ತಿರುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಮ್ಮ ಸಾಧನೆಗಳ ವಿವರ ನೀಡಲಿ ಎಂದು ಸವಾಲು ಹಾಕಿದರು.