ರೈಲಿನಲ್ಲಿ ಯುವತಿ ಜತೆ ಅಸಭ್ಯ ವರ್ತನೆ

ಬೆಂಗಳೂರು: ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ ಅಪರಿಚಿತನೊಬ್ಬ ಅಸಭ್ಯವಾಗಿ ವರ್ತಿಸಿದ್ದಾನೆ ಎಂದು ಆರೋಪಿಸಿ ಸಿಟಿ ರೈಲ್ವೆ ಪೊಲೀಸರಿಗೆ ಯುವತಿ ದೂರು ನೀಡಿದ್ದಾಳೆ.

ಕಾಡುಗುಡಿ ನಿವಾಸಿ ಉತ್ತರಭಾರತ ಮೂಲದ 26 ವರ್ಷದ ಸಂತ್ರಸ್ತೆ ಮಂಗಳವಾರ ನೀಡಿದ ದೂರಿನ ಆಧಾರದ ಮೇಲೆ ಆರೋಪಿ ವಿರುದ್ಧ ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಸಂತ್ರಸ್ತೆ ಬ್ಯಾಂಕ್ ಉದ್ಯೋಗಿ ಯಾಗಿದ್ದು, ಮಾಲೂರಿನಿಂದ ಕಾಡುಗುಡಿಗೆ ಪ್ರತಿನಿತ್ಯ ರೈಲಿನಲ್ಲಿ ಪ್ರಯಾಣಿಸುತ್ತಿದ್ದರು. ನಿತ್ಯ ಓಡಾಡುವ ಹಿನ್ನಲೆಯಲ್ಲಿ ರೈಲ್ವೆ ಪಾಸ್ ಹೊಂದಿದ್ದಾಳೆ. ಶನಿವಾರ (ಮೇ 18) ಸಂಜೆ ಕೆಲಸ ಮುಗಿಸಿ ಎಂದಿನಂತೆ ರೈಲಿನಲ್ಲಿ ಮನೆಗೆ ಹಿಂದಿರುಗುತ್ತಿದ್ದಳು. ಆ ದಿನ ರೈಲಿನೊಳಗೆ ಜನಸಂದಣಿ ಹೆಚ್ಚಾಗಿತ್ತು. ಯುವತಿಯಿದ್ದ ಬೋಗಿಯಲ್ಲೇ ಕುಳಿತಿದ್ದ ಅಪರಿಚಿತ ವ್ಯಕ್ತಿ ಆಕೆಯ ಮೈ ಕೈ ಮುಟ್ಟಿ ಕಿರುಕುಳ ನೀಡಿದ್ದಾನೆ. ಆಗ ಯುವತಿ ಅದೇ ಬೋಗಿಯಲ್ಲಿದ್ದ

ತನ್ನ ಸ್ನೇಹಿತೆಯನ್ನು ಸಹಾಯಕ್ಕೆ ಕರೆದಿದ್ದಾಳೆ. ಅದರಿಂದ ಆತಂಕಗೊಂಡ ಆರೋಪಿ ಅಲ್ಲಿಂದ ಬೇರೊಂದು ಬೋಗಿಗೆ ತೆರಳಿ ಪರಾರಿಯಾಗಿದ್ದಾನೆ ಎಂದು ರೈಲ್ವೆ ಪೊಲೀಸರು ತಿಳಿಸಿದ್ದಾರೆ.

ಕೃತ್ಯ ನಡೆದ ದಿನ ರೈಲಿನಲ್ಲಿ ಜನಸಂದಣಿ ಹೆಚ್ಚಾಗಿತ್ತು. ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದೇವೆ ಎಂದು ರೈಲ್ವೆ ಪೊಲೀಸರು ತಿಳಿಸಿದ್ದಾರೆ.

ಫೇಸ್​ಬುಕ್​ನಲ್ಲಿ ಅಳಲು: ಸಂತ್ರಸ್ತೆಯು ತನಗಾದ ಕಿರುಕುಳದ ಬಗ್ಗೆ ಫೇಸ್​ಬುಕ್​ನಲ್ಲಿ ಬರೆದು ರೈಲ್ವೆ ಸಚಿವಾಲಯ, ಮಹಿಳಾ ಮತ್ತು ಮಕ್ಕಳ ಸಚಿವಾಲಯಕ್ಕೆ ಟ್ಯಾಗ್ ಮಾಡಿದ್ದಾಳೆ. ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ ನಿದ್ದೆಗೆ ಜಾರಿದ್ದೆ. ಆಗ ಸುಮಾರು 55 ವರ್ಷದ ವ್ಯಕ್ತಿ ನನ್ನ ಮೈ ಮುಟ್ಟಿ ಅಸಭ್ಯವಾಗಿ ವರ್ತಿಸಿದ್ದ. ನಾನು ಎಚ್ಚರಗೊಂಡಾಗ ಆತ ಆಶ್ಲೀಲವಾಗಿ ನಡೆದುಕೊಂಡಿದ್ದಾನೆ. ರೈಲಿನಿಂದ ಇಳಿದ ಕೂಡಲೇ ವೈಟ್​ಫೀಲ್ಡ್ ಠಾಣೆಗೆ ದೂರು ನೀಡಲು ತೆರಳಿದ್ದೆ. ಆದರೆ, ಕಾಡುಗುಡಿ ವ್ಯಾಪ್ತಿಯಲ್ಲಿ ಪ್ರಕರಣ ನಡೆದ ಹಿನ್ನೆಲೆಯಲ್ಲಿ ಅಲ್ಲಿಯೇ ದೂರು ನೀಡುವಂತೆ ಪೊಲೀಸರು ಸೂಚಿಸಿದರು. ಕಾಡುಗುಡಿ ಠಾಣೆಗೆ ಬಂದು ದೂರು ನೀಡಲು ಮುಂದಾದಾಗ, ಅಲ್ಲಿನ ಪೊಲೀಸರು ರೈಲ್ವೆ ಪೊಲೀಸ್ ಬಳಿ ಹೋಗಿ ದೂರು ನೀಡುವಂತೆ ತಿಳಿಸಿದ್ದರು. ಅದರಂತೆ ನ್ಯಾಯಕ್ಕಾಗಿ ರೈಲ್ವೆ ಪೊಲೀಸರ ಮೊರೆ ಹೋದಾಗ ಅವರು ಈ ಪ್ರಕರಣವನ್ನು ನಿರ್ಲಕ್ಷಿಸಿರುವುದು ಕಂಡುಬಂದಿದೆ ಎಂದು ಯುವತಿ ಬರೆದುಕೊಂಡಿದ್ದಾಳೆ.

Leave a Reply

Your email address will not be published. Required fields are marked *