ನಾಡು, ನುಡಿ ಮತ್ತು ಸಂಸ್ಕೃತಿ ಉಳಿವಿಗಾಗಿ ಜಾಗೃತರಾಗಿ

ಚಿಕ್ಕಮಗಳೂರು: ಕನ್ನಡ ಸಾಹಿತ್ಯ ಪರಿಷತ್ ಶ್ರಮದಿಂದ ರಾಜ್ಯದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಶಕ್ತಿ ಕೇಂದ್ರ, ಕನ್ನಡ ಕಾವಲು ಸಮಿತಿ ರಚನೆಯಾದರೂ ನಾಡಿನ ನೆಲ, ಜಲದ ಸಮಸ್ಯೆಗಳು ಇನ್ನೂ ಜೀವಂತವಾಗಿವೆ ಎಂದು ಸಾಹಿತಿ ಬೆಳವಾಡಿ ಮಂಜುನಾಥ್ ವಿಷಾದಿಸಿದರು.

ಜಿಲ್ಲಾ ಕಸಾಪದಿಂದ ನಗರದ ಸುವರ್ಣ ಕನ್ನಡ ಭವನದಲ್ಲಿ ಭಾನುವಾರ ಏರ್ಪಡಿಸಿದ್ದ ಪರಿಷತ್​ನ 105ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ಹುಟ್ಟು ಮತ್ತು ಅದರ ಬೆಳವಣಿಗೆ ಹಿನ್ನೆಲೆ ಕುರಿತು ಉಪನ್ಯಾಸ ನೀಡಿದರು.

ಅಂದು ಬ್ರಿಟಿಷರ ವಿರೋಧದ ನಡುವೆಯೂ ನಾಡು, ನುಡಿ ಮತ್ತು ಸಂಸ್ಕೃತಿ ಉಳಿವಿಗಾಗಿ ನಮ್ಮ ಹಿರಿಯರು ಈ ಸಂಸ್ಥೆ ಸ್ಥಾಪಿಸಿದರು. ದುಬಾರಿ ಬೆಲೆ ಕೊಟ್ಟು ಖರೀದಿಸಬೇಕಾಗಿದ್ದ ಪುಸ್ತಕಗಳು ಕನ್ನಡ ಸಾಹಿತ್ಯ ಪರಿಷತ್​ನಿಂದಾಗಿ ಕಡಿಮೆ ಬೆಲೆಗೆ ಸಿಗುವಂತಾದವು. ಸಂಶೋಧನಾ ಗ್ರಂಥಗಳು ಹೊರಬಂದವು. ತಳಮಟ್ಟದಿಂದ ಕನ್ನಡ ಬೆಳೆಸುವ ಉದ್ದೇಶದಿಂದ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲೂ ಶಾಖೆಗಳು ಆರಂಭಗೊಂಡವು ಎಂದರು.

ಆದಿಚುಂಚನಗಿರಿ ವಿವಿ ಕುಲಸಚಿವ ಡಾ. ಸಿ.ಕೆ.ಸುಬ್ಬರಾಯ ಮಾತನಾಡಿ, ಕನ್ನಡದ ಕಾರ್ಯಕ್ರಮಗಳಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು. ಕನ್ನಡಿಗರು ಕನ್ನಡದ ಕಾರ್ಯಕ್ರಮಗಳಲ್ಲಿ ಹೆಚ್ಚು ಪಾಲ್ಗೊಳ್ಳುವುದರಿಂದ ಅವರಲ್ಲಿ ಮಾತೃಭಾಷೆ ಬಗ್ಗೆ ಗೌರವ, ಪ್ರೀತಿ, ಅಭಿಮಾನ ಬೆಳೆಯುತ್ತದೆ. ಆಗ ಮಾತ್ರ ಭಾಷೆ ಪೀಳಿಗೆಗೆ ಉಳಿಯುತ್ತದೆ ಎಂದರು.

ಜನರಿಂದ ಮಾತ್ರ ಭಾಷೆ ಬೆಳವಣಿಗೆ: 105 ವರ್ಷಗಳ ಕಾಲ ಶ್ರಮವಹಿಸಿದ ಕಸಾಪ ಕನ್ನಡಕ್ಕೆ ಅನೇಕ ಕೊಡುಗೆ ನೀಡಿದೆ. ನಾಡು, ನುಡಿ, ನೆಲ, ಜಲದ ರಕ್ಷಣೆ ಯಾವುದೆ ಒಂದು ಸಂಸ್ಥೆಯಿಂದ ಮಾತ್ರ ಸಾಧ್ಯವಿಲ್ಲ. ಜನ ಜಾಗೃತರಾಗಿ ಸಹಕಾರ ನೀಡಿದರೆ ಮಾತ್ರ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದು ಸಾಹಿತಿ ಬೆಳವಾಡಿ ಮಂಜುನಾಥ್ ಹೇಳಿದರು. ಕನ್ನಡಿಗರ ಜಾಗೃತಿಗಾಗಿ ಈ ಹಿಂದಿನಿಂದಲೂ ಸಾಹಿತ್ಯ ಸಮ್ಮೇಳನ ನಡೆಸಲಾಗುತ್ತಿದೆ. ಹೀಗಿದ್ದರೂ ಆಡಳಿತದಲ್ಲಿ ಕನ್ನಡ ಸಂಪೂರ್ಣ ಜಾರಿಯಾಗಿಲ್ಲ. ಕನ್ನಡ ಶಾಲೆಗಳು ಮುಚ್ಚುತ್ತಿವೆ ಎಂದು ವಿಷಾದಿಸಿದರು.

Leave a Reply

Your email address will not be published. Required fields are marked *