ಚರ್ಮ ಸುಕ್ಕುಗಟ್ಟುತ್ತಿದೆಯಾ? ಗಂಭೀರ ಸಮಸ್ಯೆ ಇರಬಹುದು, ವೈದ್ಯರ ಬಳಿ ತೋರಿಸಿ ಬಿಡಿ

ಮುಖ ಸುಕ್ಕುಗಟ್ಟಿದರೆ ಸೌಂದರ್ಯ ಹಾಳಾಗುತ್ತದೆ ಎಂಬುದು ಎಲ್ಲರಿಗೂ ಗೊತ್ತು. ಆದರೆ, ಗಂಭೀರ ಆರೋಗ್ಯ ಸಮಸ್ಯೆ ಎದುರಾಗುವ ಲಕ್ಷಣವೂ ಹೌದು ಎಂದು ಇತ್ತೀಚೆಗೆ ನಡೆದ ಅಧ್ಯಯನವೊಂದು ಹೇಳಿದೆ.

ವಯಸ್ಕರಲ್ಲಿ ಮುಖ ತುಂಬ ಸುಕ್ಕುಗಟ್ಟುತ್ತಿದ್ದರೆ ಹೃದಯ ಸಮಸ್ಯೆ ಎದುರಾಗುವುದರ ಅಥವಾ ಪಾರ್ಶ್ವವಾಯು ರೋಗದ ಮುನ್ಸೂಚನೆಯೂ ಆಗಿರಬಹುದು ಎಂದು ಸಂಶೋಧಕರು ತಿಳಿಸಿದ್ದಾರೆ. ಅಲ್ಲದೆ, ಹಣೆಯ ಮೇಲೆ ಜಾಸ್ತಿ ಉಬ್ಬುಗಳು ಕಾಣಿಸಿಕೊಳ್ಳುತ್ತಿರುವುದು ಮುಂದೊಂದು ದಿನ ರಕ್ತನಾಳಗಳು ಬ್ಲಾಕ್​ ಆಗುವುದರ ಸೂಚನೆ ಆಗಿರಬಹುದು ಎಂದಿದ್ದಾರೆ.

ಹೃದಯ ಆರೋಗ್ಯ ವಿಶ್ವ ಸಮ್ಮೇಳನದಲ್ಲಿ ಸಂಶೋಧನೆ ಬಗ್ಗೆ ತಿಳಿಸಲಾಗಿದೆ. ಸುಕ್ಕುಗಟ್ಟಿದ ಚರ್ಮ ಹೊಂದಿದವರು, ನುಣುಪಾದ ಚರ್ಮ ಹೊಂದಿರುವವರಿಗಿಂತ ಮೊದಲು ಸಾಯುವ ಸಾಧ್ಯತೆ 10 ಪಟ್ಟು ಹೆಚ್ಚಾಗಿದೆ ಎಂಬುದು ಅಧ್ಯಯನದಿಂದ ತಿಳಿದು ಬಂದಿದೆ. ಫ್ರಾನ್ಸ್​ನ ಯೂನಿವರ್ಸಿಟಿ ಹಾಸ್ಪಿಟಲ್ ಆಫ್ ಟೌಲೌಸ್ ನ ಪ್ರಾಧ್ಯಾಪಕಿ ಯೊಲಾಂಡೆ ಎಸ್ಕ್ವಿರೊಲ್ ಅವರು ಅಧ್ಯಯನದ ಬಗ್ಗೆ ತಿಳಿಸಿದ್ದು, ಅಪಧಮನಿಗಳು ಮುಚ್ಚುತ್ತಿದ್ದಂತೆ ಚರ್ಮ ಸುಕ್ಕುಗುಟ್ಟಲು ಶುರುವಾಗುತ್ತದೆ. ಈ ಅಪಧಮನಿಗಳು ಮುಚ್ಚಿದರೆ ರಕ್ತ ಹಾಗೂ ಆಕ್ಸಿಜನ್​ ಸಂಚಾರ ಸರಿಯಾಗಿ ಆಗದೆ ಹೃದಯದಲ್ಲಿ ರಕ್ತ ಹೆಪ್ಪುಗಟ್ಟುವ ಸಾಧ್ಯತೆ ಹೆಚ್ಚಾಗುತ್ತದೆ ಎಂದಿದ್ದಾರೆ.

ಸುಕ್ಕುಗಟ್ಟುವಿಕೆ ಒತ್ತಡದ ಪರಿಣಾಮವೇ ಆಗಿರಬೇಕು ಎಂದಿಲ್ಲ. ರಕ್ತ ನಾಳ ಬ್ಲಾಕ್​ ಆಗುವುದು, ರಕ್ತ ಹೆಪ್ಪುಗಟ್ಟುವಿಕೆ, ಹೃದ್ರೋಗದ ಮುನ್ಸೂಚನೆಯೂ ಇರಬಹುದು. ಜೀವಕೋಶ, ಪ್ರೊಟೀನ್​ಗಳಿಗೂ ಹಾನಿಯಾಗಿ ಹೀಗೆ ಆಗಿರಬಹುದು ಎಂದಿದ್ದಾರೆ.