ಪ್ಯಾರಿಸ್: ಭಾರತದ ಯುವ ಕುಸ್ತಿಪಟು ಅಮನ್ ಸೆಹ್ರಾವತ್ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಆರನೇ ಪದಕ ಗೆದ್ದುಕೊಟ್ಟಿದ್ದಾರೆ. ಶುಕ್ರವಾರ ನಡೆದ ಪುರುಷರ 57 ಕೆಜಿ ವಿಭಾಗದ ಕುಸ್ತಿ ಸ್ಪರ್ಧೆಯ ರಿಪಷಾಷ್ ಸುತ್ತಿನಲ್ಲಿ 21 ವರ್ಷದ ಅಮನ್ ಸೆಹ್ರಾವತ್ 13- 5ರಿಂದ ಪೋರ್ಟೋರಿಕೋದ ಡೇರಿಯನ್ ಟೋಯಿ ಕ್ರುಜ್ ಎದುರು ರೋಚಕ ಗೆಲುವು ಸಾಧಿಸಿದರು. ಇದರೊಂದಿಗೆ ಸತತ 5ನೇ ಒಲಿಂಪಿಕ್ಸ್‌ನ ಕುಸ್ತಿಯಲ್ಲಿ ಭಾರತ ಪದಕ ಜಯಿಸಿದಂತಾಗಿದೆ. ಪದಾರ್ಪಣೆಯ ಕೂಟದಲ್ಲಿ ಪದಕ ಗೆದ್ದ ಹೆಗ್ಗಳಿಕೆಯೂ ಅಮನ್ ಅವರದಾಗಿದೆ. ಹಾಲಿ ಕೂಟದಲ್ಲಿ ಕುಸ್ತಿಯಲ್ಲಿ ಒಲಿದ ಮೊದಲ ಪದಕ ಇದಾಗಿದೆ.
ಅಮನ್ ಗುರುವಾರ ಸೆಮಿಫೈನಲ್‌ನಲ್ಲಿ ಜಪಾನ್‌ನ ಅಗ್ರ ಶ್ರೇಯಾಂಕಿತ ರೀ ಹಿಗುಚಿ ವಿರುದ್ಧದ ಸೋಲು ಅನುಭವಿಸಿದರೂ, ಕಂಚಿನ ಪದಕಕ್ಕೆ ಹೋರಾಡುವ ಅವಕಾಶ ಪಡೆದುಕೊಂಡಿದ್ದರು. ಅಮನ್ ಪ್ಯಾರಿಸ್‌ನಲ್ಲಿ ಸ್ಪರ್ಧಿಸಿದ್ದ ಭಾರತದ ಏಕೈಕ ಪುರುಷ ಕುಸ್ತಿಪಟುವಾಗಿದ್ದಾರೆ.
ಸತತ 2ನೇ ಪದಕ: ಅಮನ್ ಗೆಲುವಿನೊಂದಿಗೆ ಭಾರತ ಒಲಿಂಪಿಕ್ಸ್‌ನ ಪುರುಷರ 57 ಕೆಜಿ ವಿಭಾಗದಲ್ಲಿ ಸತತ 2ನೇ ಬಾರಿ ಪದಕ ಒಲಿಸಿಕೊಂಡಂತಾಗಿದೆ. 2021ರ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ರವಿಕುಮಾರ್ ದಹಿಯಾ ಇದೇ ವಿಭಾಗದಲ್ಲಿ ರಜತ ಪದಕ ಗೆದ್ದುಕೊಂಡಿದ್ದರು. ಆದರೆ ಒಲಿಂಪಿಕ್ಸ್ ಆಯ್ಕೆ ಟ್ರಯಲ್ಸ್‌ನಲ್ಲಿ ರವಿ ದಹಿಯಾ ಅವರನ್ನು ಮಣಿಸಿ ಹರಿಯಾಣದ ಅಮನ್ ಪ್ಯಾರಿಸ್ ಟಿಕೆಟ್ ಗಿಟ್ಟಿಸಿಕೊಂಡಿದ್ದು ವಿಶೇಷ.
7: ಅಮನ್ ಸೆಹ್ರಾವತ್ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದ 7ನೇ ಭಾರತೀಯ ಕುಸ್ತಿಪಟು ಎನಿಸಿದರು. ಕೆಡಿ ಜಾಧವ್ (1952 ಕಂಚು), ಸುಶೀಲ್ ಕುಮಾರ್ (2008 ಕಂಚು, 2012 ಬೆಳ್ಳಿ), ಯೋಗೇಶ್ವರ್ ದತ್ (2012 ಕಂಚು), ಸಾಕ್ಷಿ ಮಲಿಕ್ (2016 ಕಂಚು), ರವಿ ಕುಮಾರ್ ದಹಿಯಾ (2020 ಬೆಳ್ಳಿ), ಭಜರಂಗ್ ಪೂನಿಯಾ (2020 ಕಂಚು) ಹಿಂದಿನ ಸಾಧಕರು.