ಬೀದರ್: ಜಿಲ್ಲೆಯಲ್ಲಿ ಕೋಚಿಂಗ್ ಸೆಂಟರ್‍ಗಳನ್ನು ಶಾಶ್ವತವಾಗಿ ಮುಚ್ಚುವ ಸುತ್ತೋಲೆಯನ್ನು ತಡೆ ಹಿಡಿಯಬೇಕು ಎಂದು ಜಿಲ್ಲಾ ಕೋಚಿಂಗ್ ಸೆಂಟರ್ಸ್ ಮತ್ತು ಟ್ಯುಟೋರಿಯಲ್ಸ್ ಅಸೋಸಿಯೇಷನ್ ಆಗ್ರಹಿಸಿದೆ.
ಅಸೋಸಿಯೇಷನ್ ಪದಾಧಿಕಾರಿಗಳು ಹಾಗೂ ಸದಸ್ಯರು ನಗರದಲ್ಲಿ ನಿಯೋಗದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಗಿರೀಶ್ ಬದೋಲೆ ಅವರನ್ನು ಭೇಟಿ ಮಾಡಿ ಈ ಕುರಿತು ಮನವಿ ಪತ್ರ ಸಲ್ಲಿಸಿದರು.
ಜಿಲ್ಲೆಯ ಮಕ್ಕಳು ಮೂಲ ಶಿಕ್ಷಣದ ಕೊರತೆಯಿಂದ ಬಳಲುತ್ತಿದ್ದು, ಮಕ್ಕಳ ಭವಿಷ್ಯದ ಹಿತದೃಷ್ಟಿಯಿಂದ ಪಾಲಕರು ಸ್ವ ಇಚ್ಛೆಯಿಂದ ಅವರನ್ನು ಕೋಚಿಂಗ್ ಸೆಂಟರ್‍ಗಳಲ್ಲಿ ದಾಖಲಿಸುತ್ತಿದ್ದಾರೆ. ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಿರುವ ಕೋಚಿಂಗ್ ಸೆಂಟರ್‍ಗಳು ಮಕ್ಕಳ ಮೂಲ ಶಿಕ್ಷಣದ ಕೊರತೆ ನೀಗಿಸುವಲ್ಲಿ ಯಶಸ್ವಿಯಾಗಿವೆ ಎಂದು ಗಮನ ಸೆಳೆದರು.
ಜಿಲ್ಲಾ ಪಂಚಾಯಿತಿ ವತಿಯಿಂದ ಮೇ 6 ರಂದು ಕೋಚಿಂಗ್ ಸೆಂಟರ್‍ಗಳನ್ನು ಶಾಶ್ವತವಾಗಿ ಮುಚ್ಚಲು ಸುತ್ತೋಲೆ ಹೊರಡಿಸಿರುವುದರಿಂದ ಕೋಚಿಂಗ್ ಸೆಂಟರ್‍ಗಳಿಗೆ ಆಘಾತವಾಗಿದೆ ಎಂದು ತಿಳಿಸಿದರು.
ಬೀದರ್ ಮೊದಲಿನಿಂದಲೂ ಶೈಕ್ಷಣಿಕವಾಗಿ ಹಿಂದುಳಿದ ಜಿಲ್ಲೆಯಾಗಿದೆ. ಕೋಚಿಂಗ್ ಸೆಂಟರ್‍ಗಳಿಂದಾಗಿ ಜಿಲ್ಲೆಯ ಸಾವಿರಾರು ವಿದ್ಯಾರ್ಥಿಗಳು ಮೂಲ ಶಿಕ್ಷಣದ ಕೊರತೆಯಿಂದ ಹೊರ ಬರುತ್ತಿದ್ದಾರೆ. ಎಸ್‍ಎಸ್‍ಎಲ್‍ಸಿ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅತ್ಯುತ್ತಮ ಸಾಧನೆ ಮಾಡುತ್ತಿದ್ದಾರೆ ಎಂದು ಹೇಳಿದರು.
ಕೋಚಿಂಗ್ ಸೆಂಟರ್‍ಗಳು ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಸಹಕಾರಿಯಾಗಿವೆ. ಜಿಲ್ಲೆಯ ಮಕ್ಕಳ ಭವಿಷ್ಯದ ಹಿತದೃಷ್ಟಿಯಿಂದ ಅವಶ್ಯಕವಾಗಿವೆ. ಕಾರಣ, ಎಲ್ಲ ಕೋಚಿಂಗ್ ಸೆಂಟರ್‍ಗಳ ಮೂಲಸೌಕರ್ಯ ಗಮನಿಸಿ, ಶಾಲಾ ಅವಧಿ ಹೊರತುಪಡಿಸಿ, ಕೋಚಿಂಗ್ ಸೆಂಟರ್‍ಗಳನ್ನು ನಡೆಸಲು ಅನುಮತಿ ಕೊಡಬೇಕು ಎಂದು ಮನವಿ ಮಾಡಿದರು.
ಅಸೋಸಿಯೇಷನ್ ಮನವಿಗೆ ಸ್ಪಂದಿಸಿದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅವರು, ಕೋಚಿಂಗ್ ಸೆಂಟರ್‍ಗಳನ್ನು ಅನುಮತಿ ಪಡೆದು, ನಿಯಮಾನುಸಾರ ನಡೆಸಬೇಕು. ಶಾಲಾ ಅವಧಿಗೆ ಮುನ್ನ ಹಾಗೂ ನಂತರ ನಡೆಸಬೇಕು ಎಂದು ತಿಳಿಸಿದರು ಎಂದು ಅಸೋಸಿಯೇಷನ್ ಅಧ್ಯಕ್ಷ ಮನೋಜಕುಮಾರ ಬುಕ್ಕಾ ಹೇಳಿದರು.
ಅಸೋಸಿಯೇಷನ್ ಗೌರವಾಧ್ಯಕ್ಷ ಮಲ್ಲಿಕಾರ್ಜುನ ಮೈನಾಳೆ, ಉಪಾಧ್ಯಕ್ಷ ಅನೀಶ್ ಪಾಟೀಲ, ಪ್ರಧಾನ ಕಾರ್ಯದರ್ಶಿ ಗೋಪಾಲ್ ಕುಲಕರ್ಣಿ, ಸದಸ್ಯರಾದ ಪ್ರದೀಪ್, ಮುಕೇಶ್, ಶಿವಾನಂದ, ದತ್ತಾತ್ರಿ ಅಲ್ಲಮಕೆರೆ, ಧನರಾಜ ವಿಶ್ವಕರ್ಮ, ಶಿವಕುಮಾರ ಎಸ್.ಬಿ, ಸಾಯಿಪ್ರಕಾಶ್, ಸುಭಾಷ್ ಹುಲಸೂರೆ, ಅಭಿಜೀತ್ ಕಾರಬಾರಿ, ಪ್ರದೀಪ್, ಅರವಿಂದ ಎಸ್. ಜಾಗಾವೆ, ಹಣಮಂತ ಪಾಟೀಲ, ಅರುಣ, ಸಿದ್ದು, ಪ್ರವೀಣ್, ಅಮರೇಶ್ವರ, ಸಂತೋಷ್, ಪ್ರದೀಪ್ ಬೇಂದ್ರೆ, ಕೈಲಾಶ ಬಿರಾದಾರ, ಪದ್ಮಾಕರ್, ಎಸ್.ಎಂ. ಕೃಷ್ಣ ಮೊದಲಾದವರು ಇದ್ದರು.
