ಬೀದರ್: ಮಹಿಳೆಯರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಬೇಕು ಎಂದು ಭಾಲ್ಕಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಚಾರ್ಯೆ ಡಾ. ಹೇಮಾವತಿ ಪಾಟೀಲ ಸಲಹೆ ಮಾಡಿದರು.
ನಗರದ ಓಡವಾಡದಲ್ಲಿ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ವಿಶೇಷ ಶಿಬಿರದ ಪ್ರಯುಕ್ತ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಶಿಸ್ತು, ದೃಢ ಸಂಕಲ್ಪ, ಸಮರ್ಪಣಾ ಭಾವ ಹಾಗೂ ಕಠಿಣ ಪರಿಶ್ರಮದಿಂದ ಜೀವನದಲ್ಲಿ ಯಶಸ್ಸು ಗಳಿಸಲು ಸಾಧ್ಯವಿದೆ ಎಂದು ತಿಳಿಸಿದರು.
ಬ್ರಿಮ್ಸ್‍ನ ಒಬಿಜಿ ವಿಭಾಗದ ಡಾ. ಸಂಗೀತಾ ಹಲಮಂಡಗೆ ಮಾತನಾಡಿ, ದೇಹ ಸದೃಢವಾಗಿದ್ದರೆ ಮನಸ್ಸು ಆರೋಗ್ಯಕರವಾಗಿರುತ್ತದೆ ಎಂದು ಹೇಳಿದರು.
ಮಹಿಳೆಯರು ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಸ್ವಚ್ಛತೆಗೆ ಪ್ರಾಮುಖ್ಯತೆ ಕೊಡಬೇಕು ಎಂದು ತಿಳಿಸಿದರು.
ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥೆ ವಿಜಯಲಕ್ಷ್ಮಿ ಅಧ್ಯಕ್ಷೆ ವಹಿಸಿದ್ದರು.
ಕಾಲೇಜಿನ ಎನ್‍ಎಸ್‍ಎಸ್ ಕಾರ್ಯಕ್ರಮ ಅಧಿಕಾರಿಗಳಾದ ಡಾ. ವಿದ್ಯಾ ಪಾಟೀಲ, ಶ್ರೀನಿವಾಸ್ ರೆಡ್ಡಿ, ಕನ್ನಡ ಪ್ರಾಧ್ಯಾಪಕಿ ವಿಜಯಕುಮಾರಿ ಉಪಸ್ಥಿತರಿದ್ದರು.
