ಭಾಲ್ಕಿ: ಸಂತೃಪ್ತ ಜೀವನಕ್ಕೆ ಬಸವಾದಿ ಶರಣರ ಸಂದೇಶಗಳು ಪೂರಕವಾಗಿವೆ ಎಂದು ಹಿರೇಮಠ ಸಂಸ್ಥಾನದ ಪೀಠಾಧಿಪತಿ ಶ್ರೀ ಗುರುಬಸವ ಪಟ್ಟದ್ದೇವರು ಹೇಳಿದರು.
ಪಟ್ಟಣದ ಹಿರೇಮಠ ಸಂಸ್ಥಾನದಲ್ಲಿ ಆಯೋಜಿಸಿದ್ದ ಶ್ರಾವಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಸವತತ್ವದಲ್ಲಿ ಎಲ್ಲದಕ್ಕೂ ಪರಿಹಾರವಿದೆ. ಕಷ್ಟದಲ್ಲಿರುವ ಜನರ ಕಣ್ಣೀರು ಒರೆಸುವುದೇ ನಿಜವಾದ ಬಸವಧರ್ಮ. ಜೀವನದಲ್ಲಿ ಎಂದಿಗೂ ಹಣ, ಸಂಪತ್ತು, ಆಸ್ತಿ, ಅಧಿಕಾರ ಮುಖ್ಯವಾಗಬಾರದು. ಶಾಂತಿ, ನೆಮ್ಮದಿ ಇಲ್ಲದ ಅರಮನೆ ವಾಸವೂ ಸೆರೆಮನೆ ಆಗುತ್ತದೆ. ಹೀಗಾಗಿ ಇದ್ದುದರಲ್ಲೇ ತೃಪ್ತಿಕರ ಜೀವನ ಸಾಗಿಸಿದರೆ ದೇವನ ಒಲವು ಸಿಗಲಿದೆ ಎಂದರು.
ಜೀವನದಲ್ಲಿ ಕಷ್ಟ, ಸುಖ, ನೋವು ನಲಿವು ಎಲ್ಲವೂ ಬರುತ್ತವೆ. ಅವುಗಳನ್ನು ಸಮರ್ಥವಾಗಿ ಎದುರಿಸಿ ಸುಂದರ ಬದುಕು ಕಟ್ಟಿಕೊಳ್ಳುವ ಪ್ರಯತ್ನ ಮಾಡಬೇಕು ಎಂದು ಸಲಹೆ ನೀಡಿದರು.
ಜನ್ಮದಿನ ಹಿನ್ನೆಲೆಯಲ್ಲಿ ಪೂಜ್ಯರಿಂದ ಸನ್ಮಾನ ಸ್ವೀಕರಿಸಿದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಗಿರೀಶ ಬದೋಲೆ ಮಾತನಾಡಿ, ಹಿರೇಮಠ ಸಂಸ್ಥಾನದ ಸಾಮಾಜಿಕ ಕಾರ್ಯಗಳು ಮಾದರಿಯಾಗಿವೆ. ಶೈಕ್ಷಣಿಕ, ಧಾರ್ಮಿಕ, ಅಧ್ಯಾತ್ಮ ಕ್ಷೇತ್ರದ ಮೂಲಕ ಅದ್ಭುತ ಕೊಡುಗೆ ನೀಡಲಾಗುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಡಾ.ಹಂಸಾ ಬದೋಲೆ ಮಾತನಾಡಿ, ಹಿರೇಮಠ ಸಂಸ್ಥಾನ ಸಿದ್ದಗಂಗೆ ಮಾದರಿಯಲ್ಲಿ ಬಡವರಿಗೆ ಅನ್ನ, ಅಕ್ಷರ, ಆಶ್ರಯ ಕಲ್ಪಿಸುತ್ತಿರುವುದು ಹೆಮ್ಮೆ ತರಿಸಿದೆ ಎಂದು ಸಂತಸ ವ್ಯಕ್ತಪಡಿಸಿದರು.
ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ ಕೋಸಂಬೆ, ತಾಪಂ ಇಒ ಸೂರ್ಯಕಾಂತ ಬಿರಾದಾರ್, ಎಡಿ ಚಂದ್ರಶೇಖರ ಬನ್ನಾಳೆ, ಶೋಭಾ ಬದೋಲೆ, ದಿಲೀಪ ಬದೋಲೆ, ಲತಾ ನಾಗೇಶ, ನಾಗೇಶ ಸಿ.ಎಂ., ಯುವರಾಜ ಇದ್ದರು. ವಿದ್ಯಾಥರ್ಿನಿ ಭವಾನಿ ವಚನ ಪ್ರಾರ್ಥನೆ ಹಾಡಿದರು. ಬಾಬು ಬೆಲ್ದಾಳ ಸ್ವಾಗತಿಸಿದರು. ದೀಪಕ ಠಮಕೆ ನಿರೂಪಣೆ ಮಾಡಿ ವಂದಿಸಿದರು.
ಸಿಇಒ ಬದೋಲೆ ಜನ್ಮದಿನ
ಜಿಪಂ ಸಿಇಒ ಡಾ.ಗಿರೀಶ ಬದೋಲೆ ಜನ್ಮದಿನ ಹಿನ್ನೆಲೆಯಲ್ಲಿ ಶ್ರೀ ಗುರುಬಸವ ಪಟ್ಟದ್ದೇವರು ಅವರು ಬದೋಲೆ ದಂಪತಿಯನ್ನು ಸನ್ಮಾನಿಸಿ ಆಶೀರ್ವದಿಸಿದರು. ಮುಖ್ಯ ಶಿಕ್ಷಕಿ ಸವಿತಾ ಭೂರೆ ತಂಡದವರು ಆರತಿ ಗೀತೆ ನಡೆಸಿಕೊಟ್ಟರು.