More

    ಸಿಇಟಿ ಪರೀಕ್ಷೆ ಸುಸೂತ್ರ ನಡೆಸಿ

    ಬೀದರ್: ಜಿಲ್ಲೆಯಲ್ಲಿ ಏ.18 ಮತ್ತು 19ರಂದು ಯುಜಿ ಸಿಇಟಿ (ಪದವಿಪೂರ್ವ ಸಾಮಾನ್ಯ ಪ್ರವೇಶ) ಪರೀಕ್ಷೆಯನ್ನು ಯಾವುದೇ ಅಹಿತಕರ ಘಟನೆ ಆಗದಂತೆ ಸುಸೂತ್ರ ನಡೆಸಬೇಕು ಎಂದು ಜಿಲ್ಲಾಧಿಕಾರಿ ಗೋವಿಂದರಡ್ಡಿ ಹೇಳಿದರು.
    ಡಿಸಿ ಕಚೇರಿಯಲ್ಲಿ ಕರೆದಿದ್ದ ಯುಜಿ ಸಿಇಟಿ ಪರೀಕ್ಷೆ ಪೂರ್ವಭಾವಿ ಸಭೆಯಲ್ಲಿ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿ ಮಾತನಾಡಿ, ಇಂಜಿನಿಯರಿಂಗ್, ಕೃಷಿ, ವಿಜ್ಞಾನ, ಪಶು ಸಂಗೋಪನೆ, ಫಾರ್ಮಸಿ, ಬಿ.ಎಸ್ಸಿ (ನರ್ಸಿಂಗ್) ಮುಂತಾದ ವೃತ್ತಿಪರ ಕೋಸ್೯ಗಳ ಸಾಮಾನ್ಯ ಪ್ರವೇಶ ಪರೀಕ್ಷೆಗಳನ್ನು ವ್ಯವಸ್ಥಿತವಾಗಿ ನಡೆಸಬೇಕು ಎಂದರು.
    ಪರೀಕ್ಷಾ ಕೇಂದ್ರಗಳಲ್ಲಿ ಸಿಸಿ ಟಿವಿ ವೆಬ್ ಕಾಸ್ಟಿಂಗ್ ಇರುವುದರಿಂದ ಯಾರೇನು ಮಾಡುತ್ತಾರೆ ಎಂಬ ಸಂಪೂರ್ಣ ಮಾಹಿತಿ ಆಡಿಯೋ, ವಿಡಿಯೋಸಹಿತ ದಾಖಲಾಗುವುದರಿಂದ ಪರೀಕ್ಷೆಗೆ ನಿಯೋಜಿತ ಅಕಾರಿ ಮತ್ತು ಉಪನ್ಯಾಸಕರು ಎಚ್ಚರಿಕೆಯಿಂದ ಕರ್ತವ್ಯ ನಿರ್ವಹಿಸಬೇಕು ಎಂದು ಸೂಚಿಸಿದರು.
    ಪರೀಕ್ಷಾ ಕೇಂದ್ರಗಳಿಗೆ ಪ್ರಶ್ನೆಪತ್ರಿಕೆಗಳು ಸರಿಯಾದ ಸಮಯಕ್ಕೆ ತಲುಪಿಸಬೇಕು. ರೂಟ್ ಅಧಿಕಾರಿಗಳು ಸಕಾಲಕ್ಕೆ ಬರುವುದರ ಜತೆಗೆ ವೀಕ್ಷಕರು ಒಂದು ಗಂಟೆ ಮುನ್ನ ಪರೀಕ್ಷಾ ಕೇಂದ್ರಗಳಲ್ಲಿ ಹಾಜರಿರಬೇಕು. ಪರೀಕ್ಷೆ ದಿನ ಕೇಂದ್ರಗಳ ಸುತ್ತ ಕಲಂ 144 ಜಾರಿ ಇರಲಿದ್ದು, ಕೇಂದ್ರ ಸಮೀಪದ ಜಿರಾಕ್ಸ್ ಅಂಗಡಿಗಳು ತೆರೆಯದಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.
    ಪರೀಕ್ಷಾ ಕೇಂದ್ರಗಳಲ್ಲಿ ಅಭ್ಯರ್ಥಿಗಳು ನಿಗದಿತ ಸಮಯಕ್ಕೆ ಹಾಜರಿರಬೇಕು ಮತ್ತು ಯಾವುದೇ ಆಧುನಿಕ ಇಲೆಕ್ಟ್ರಾನಿಕ್ ಉಪಕರಣಗಳಾದ ಮೊಬೈಲ್ ಪೋನ್, ಬ್ಲುಟೂತ್, ಕ್ಯಾಲ್ಕುಲೇಟರ್, ಕೈಗಡಿಯಾರ, ಪೇಪರ್ ಚೀಟಿ, ಪುಸ್ತಕಗಳನ್ನು ಪರೀಕ್ಷಾ ಕೇಂದ್ರಗಳಿಗೆ ತರಬಾರದು ಮತ್ತು ಜೀನ್ಸ್ ಪ್ಯಾಂಟ್, ಪುಲ್ ಶಟ್೯ ಹಾಕಿಕೊಂಡು ಬರುವಂತಿಲ್ಲ. ಪ್ರವೇಶ ಪತ್ರದ ಜತೆ ಅಭ್ಯರ್ಥಿಗಳು ಕಡ್ಡಾಯವಾಗಿ ಒಂದು ಗುರುತಿನ ಚೀಟಿ ತರಬೇಕು. ಪರೀಕ್ಷೆಯಲ್ಲಿ ಕಪ್ಪು ಮತ್ತು ನೀಲಿ ಶಾಯಿ ಬಾಲ್ ಪಾಯಿಂಟ್ ಪೆನ್ ಗಳನ್ನು ಮಾತ್ರ ಬಳಸಬೇಕು ಎಂದರು.
    ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ, ಪದವಿಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಚಂದ್ರಕಾಂತ ಶಾಬಾದಕರ್, ಕೈಗಾರಿಕೆ ಇಲಾಖೆ ಜಂಟಿ ನಿರ್ದೇಶಕಿ ಸುರೇಖಾ, ಜಿಲ್ಲಾ ಬಿಸಿಎಂ ಅಕಾರಿ ಸದಾಶಿವ ಬಡಿಗೇರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸಿದ್ರಾಮ ಸಿಂಧೆ, ಜಿಲ್ಲೆಯ ಎಲ್ಲ ತಾಲೂಕಿನ ತಹಸೀಲ್ದಾರ್, ಬಿಇಒ, ವಿವಿಧ ಇಲಾಖೆ ಅಕಾರಿಗಳು ಇದ್ದರು.

    36 ಎಕ್ಸಾಂ ಸೆಂಟರ್
    ಬೀದರ್ ನಲ್ಲಿ 23, ಬಸವಕಲ್ಯಾಣ 6, ಭಾಲ್ಕಿಯಲ್ಲಿ 7 ಸೇರಿ ಜಿಲ್ಲೆಯಲ್ಲಿ 36 ಪರೀಕ್ಷಾ ಕೇಂದ್ರಗಳಿವೆ. 13,436 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದಾರೆ ಎಂದು ಡಿಸಿ ಗೋವಿಂದರಡ್ಡಿ ಹೇಳಿದರು. ಏ.18ರಂದು ಬೆಳಗ್ಗೆ 10.30ರಿಂದ 11.50ರವರೆಗೆ ಜೀವಶಾಸ್ತ್ರ, ಮಧ್ಯಾಹ್ನ 2.30ರಿಂದ 3.50ರವರೆಗೆ ಗಣಿತ ವಿಷಯ ಹಾಗೂ 19ರಂದು ಬೆಳಗ್ಗೆ 10.30ರಿಂದ 11.50ರವರೆಗೆ ಭೌತಶಾಸ್ತ್ರ ಮತ್ತು ಮಧ್ಯಾಹ್ನ 2.30ರಿಂದ 3.50ರವರೆಗೆ ರಾಸಾಯನಶಾಸ್ತ್ರ ವಿಷಯ ಪರೀಕ್ಷೆ ನಡೆಯಲಿದ್ದು, 60 ಅಂಕದ ಬಹುಆಯ್ಕೆ ಪ್ರಶ್ನೆಗಳು ಇರಲಿವೆ ಎಂದು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts