ಗುತ್ತಿಗೆದಾರರ ಕೋಟ್ಯಂತರ ರೂ. ಬೇನಾಮಿ ಆಸ್ತಿ ಪತ್ತೆ!: ಆಪ್ತರು ಹಾಗೂ ಸಂಬಂಧಿಕರ ಹೆಸರಿನಲ್ಲಿ ಆಸ್ತಿ ನೋಂದಣಿ

| ಅವಿನಾಶ ಮೂಡಂಬಿಕಾನ ಬೆಂಗಳೂರು

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ದಾಳಿಗೊಳಗಾದ ಗುತ್ತಿಗೆದಾರರು ಕೋಟ್ಯಂತರ ರೂ. ಮೌಲ್ಯದ ಬೇನಾಮಿ ಆಸ್ತಿ ಹೊಂದಿರುವುದು ಆದಾಯ ತೆರಿಗೆ ಇಲಾಖೆ ತನಿಖೆಯಲ್ಲಿ ಬೆಳಕಿಗೆ ಬಂದಿದ್ದು, ಮುಟ್ಟುಗೋಲು ಹಾಕಿಕೊಳ್ಳುವ ಪ್ರಕ್ರಿಯೆ ಆರಂಭಿಸಲು ಸಿದ್ಧತೆ ನಡೆದಿದೆ.

ಗೋವಾ, ಬೆಳಗಾವಿ, ಹುಬ್ಬಳ್ಳಿ, ಬಳ್ಳಾರಿ, ಉಡುಪಿ, ಚಿಕ್ಕೋಡಿ, ಗೋಕಾಕ್, ನಿಪ್ಪಾಣಿ, ಹುಬ್ಬಳ್ಳಿ, ಗದಗ, ಬಳ್ಳಾರಿ ಸೇರಿ ರಾಜ್ಯಾದ್ಯಂತ 10ಕ್ಕೂ ಅಧಿಕ ಗುತ್ತಿಗೆದಾರರ ನಿವಾಸ ಮತ್ತು ಕಚೇರಿ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದರು. ದಾಳಿ ವೇಳೆ ಆಸ್ತಿಗೆ ಸಂಬಂಧಿಸಿದ ನೂರಾರು ದಾಖಲೆ ಪತ್ರಗಳು ಪತ್ತೆಯಾಗಿದ್ದವು. ಅವುಗಳನ್ನು ಪರಿಶೀಲಿಸಿದಾಗ ಕೆಲ ಗುತ್ತಿಗೆದಾರರು ತಮ್ಮ ಸಂಬಂಧಿಕರು, ಆಪ್ತರ ಹೆಸರಿನಲ್ಲಿ ಕೋಟ್ಯಂತರ ರೂ. ಮೌಲ್ಯದ ಬೇನಾಮಿ ಆಸ್ತಿ ಹೊಂದಿರುವುದು ಪತ್ತೆಯಾಗಿದೆ ಎಂದು ಮೂಲಗಳು ತಿಳಿಸಿವೆ. ಕೆಲ ಗುತ್ತಿಗೆದಾರರು ತಮ್ಮ ಆಸ್ತಿ ಮೌಲ್ಯದ ಶೇ.40 ಬೇನಾಮಿ ಆಸ್ತಿ ಹೊಂದಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.

ಲೆಕ್ಕಪರಿಶೋಧಕರ ಮೊರೆ: ಈಗಾಗಲೇ ಐಟಿ ಅಧಿಕಾರಿಗಳ ಬಲೆಗೆ ಸಿಲುಕಿರುವ ಗುತ್ತಿಗೆದಾರರು 40.5 ಕೋಟಿ ರೂ. ಮೌಲ್ಯದ ಅಕ್ರಮ ಆಸ್ತಿ ಹೊಂದಿರುವ ಬಗ್ಗೆ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ. ಜತೆಗೆ ಕೋಟ್ಯಂತರ ರೂ. ಮೌಲ್ಯದ ಬೇನಾಮಿ ಆಸ್ತಿ ಹೊಂದಿರುವ ವಿಚಾರ ಐಟಿ ಅಧಿಕಾರಿಗಳ ಗಮನಕ್ಕೆ ಬಂದಿದ್ದರಿಂದ ದಾಳಿಗೊಳಗಾದ ಖಾಸಗಿ ಮತ್ತು ಪಿಡಬ್ಲ್ಯುಡಿ ಗುತ್ತಿಗೆದಾರರು ಲೆಕ್ಕ ಪರಿಶೋಧಕರ ಮೊರೆ ಹೋಗಿದ್ದಾರೆ. ಲೆಕ್ಕ ಪರಿಶೋಧಕರ ಮೂಲಕ ತಾವು ಹೊಂದಿರುವ ಅಕ್ರಮ ಆಸ್ತಿ ಸಕ್ರಮ ಮಾಡಿಸಿಕೊಂಡು, ಸಂಬಂಧಿತ ದಾಖಲೆಗಳನ್ನು ಐಟಿ ತನಿಖಾಧಿಕಾರಿಗಳಿಗೆ ನೀಡಲು ಮುಂದಾಗಿದ್ದಾರೆ.

ತೆರಿಗೆ ವಂಚಿಸಿರುವ ಉದ್ಯಮಿಗಳು: ಗೇರುಬೀಜ, ಅಡಿಕೆ, ಮಟ್ಕಾ, ಮದ್ಯದ ಉದ್ಯಮಿಗಳು ತೆರಿಗೆ ವಂಚಿಸಿ ಕೋಟ್ಯಂತರ ರೂ. ವ್ಯವಹಾರ ನಡೆಸಿ, ಅಘೋಷಿತ ಆಸ್ತಿ ಹೊಂದಿರುವುದು ಪತ್ತೆಯಾಗಿದೆ. ಸದ್ಯ ದಾಖಲೆ ಒದಗಿಸಲು ಕಾಲಾವಕಾಶ ಕೇಳಿರುವ ಉದ್ಯಮಿಗಳು, ವಿಚಾರಣೆ ವೇಳೆ ವ್ಯವಹಾರಕ್ಕೆ ಸಂಬಂಧಿತ ಕೆಲ ದಾಖಲೆಗಳನ್ನು ಐಟಿ ಅಧಿಕಾರಿಗಳಿಗೆ ಒದಗಿಸಿದ್ದಾರೆ. ಐಟಿ ಅಧಿಕಾರಿಗಳು ತನಿಖೆ ಚುರುಕುಗೊಳಿಸಿದ್ದು, ಉದ್ಯಮಿಗಳ ಇನ್ನಷ್ಟು ಅಕ್ರಮಗಳ ಬಗ್ಗೆ ಕಣ್ಣಿಟ್ಟಿದ್ದಾರೆ.

ರಾಜಕಾರಣಿಗಳ ಕೈ ಸೇರಿದ ಹಣ

ಕೆಲ ದಿನಗಳ ಹಿಂದೆ ಬೇರೆ ವ್ಯಕ್ತಿಗಳಿಗೆ ಕೋಟ್ಯಂತರ ರೂ. ಹಣ ವರ್ಗಾವಣೆ ಮಾಡಿರುವುದು ಕಂಡು ಬಂದಿದ್ದು, ಚುನಾವಣೆ ಹಿನ್ನೆಲೆಯಲ್ಲಿ ಈ ಹಣ ರಾಜಕೀಯ ಮುಖಂಡರ ಕೈ ಸೇರಿದೆ ಎಂಬ ಆರೋಪವೂ ಇದೆ. ಯಾವ ಉದ್ದೇಶಕ್ಕಾಗಿ ಹಣ ವರ್ಗಾಯಿಸಲಾಗಿದೆ ಎಂಬ ಐಟಿ ಅಧಿಕಾರಿಗಳ ಪ್ರಶ್ನೆಗೆ ಗುತ್ತಿಗೆದಾರರು ಗೊಂದಲದ ಹೇಳಿಕೆಗಳನ್ನು ನೀಡಿದ್ದಾರೆ ಎನ್ನಲಾಗಿದೆ. ಕುಟುಂಬಸ್ಥರ ಹೆಸರಿನಲ್ಲಿ ಹಲವು ಗುತ್ತಿಗೆಗಳನ್ನು ಪಡೆದಿದ್ದರೂ, ಸಂಬಂಧಿತ ದಾಖಲೆಗಳನ್ನು ಇನ್ನೂ ಐಟಿ ಅಧಿಕಾರಿಗಳಿಗೆ ನೀಡಲಿಲ್ಲ. ಗುತ್ತಿಗೆದಾರರು ಯಾವೆಲ್ಲ ವ್ಯವಹಾರದಲ್ಲಿ ಬಂಡವಾಳ ಹೂಡಿಡಿದ್ದಾರೆ ಎಂಬ ಬಗ್ಗೆಯೂ ತನಿಖೆ ನಡೆಯುತ್ತಿದೆ. ಸದ್ಯ ಈ ವ್ಯವಹಾರಕ್ಕೆ ಸಂಬಂಧಿಸಿದ ಯಾವುದೇ ದಾಖಲೆಗಳು ಗುತ್ತಿಗೆದಾರರ ಬಳಿ ಇಲ್ಲ. ಬೋಗಸ್ ಬಿಲ್ ಮೂಲಕ ಕೋಟ್ಯಂತರ ರೂ. ವ್ಯವಹಾರ ನಡೆಸಿರುವ ಬಗ್ಗೆ ಐಟಿ ಅಧಿಕಾರಿಗಳು ಇನ್ನಷ್ಟು ಸಾಕ್ಷ್ಯ ಸಂಗ್ರಹಿಸಲು ಮುಂದಾಗಿದ್ದಾರೆ.