ಬೇಲೂರು: ತಾಲೂಕಿನ ಅರೇಹಳ್ಳಿಯ ಕೇಶವ ನಗರದಲ್ಲಿ ಗ್ರಾಮಸ್ಥರು ಜಮೀನಿನಲ್ಲಿ ಬೆಳೆದ ವಿವಿಧ ಸೊಪ್ಪುಗಳೊಂದಿಗೆ ಲಕ್ಕೆ ಸೊಪ್ಪಿಗೂ ಪೂಜೆ ಸಲ್ಲಿಸಿ ಮೆರವಣಿಗೆಯಲ್ಲಿ ಮಾರಮ್ಮನ ದೇಗುಲಕ್ಕೆ ತೆರಳಿ ಬುಧವಾರ ಪೂಜೆ ಸಲ್ಲಿಸಿದರು.
ಅರೇಹಳ್ಳಿ ಕೇಶವನಗರದ ಮಲ್ಲಿಕಾರ್ಜುನ್ ಮಾತನಾಡಿ, ದೀಪಾವಳಿ ಹಾಗೂ ಕಾರ್ತಿಕ ಪೂಜೋತ್ಸವಕ್ಕಾಗಿ ಹಿಂದಿನಿಂದಲೂ ಹಿರಿಯರು ನಡೆಸಿಕೊಂಡು ಬಂದ ಪದ್ಧತಿಯಂತೆ ಅಮಾವಾಸ್ಯೆ ಪ್ರಾರಂಭದ ಮೂರು ದಿನದ ಮುಂಚೆ ಹಾಗೂ ಕಾರ್ತಿಕ ಪೂಜೋತ್ಸವ ಪ್ರಾರಂಭವಾಗುವ 12 ದಿನ ಮೊದಲು ಗ್ರಾಮಸ್ಥರೆಲ್ಲ ಒಂದೆಡೆ ಸೇರಿ ಮನೆ, ಹೊಲ, ಗದ್ದೆ, ಮತ್ತು ತೋಟಗಳಿಗೆ ತೆರಳಿ ಲಕ್ಕೆ ಸೊಪ್ಪು ಸೇರಿದಂತೆ ಇತರ ಸೊಪ್ಪುಗಳೊಂದಿಗೆ ಜಮೀನಿನಲ್ಲಿ ಬೆಳೆದ ಬೆಳೆಗಳನ್ನೆಲ್ಲ ಸಂಗ್ರಹಿಸಿ ಜಮೀನಿನ ಬಳಿ ಪೂಜೆ ಸಲ್ಲಿಸಿದ ನಂತರ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಗುತ್ತದೆ ಎಂದು ಹೇಳಿದರು.
ಪ್ರಥಮವಾಗಿ ಶ್ರೀ ಶನೈಶ್ಚರಸ್ವಾಮಿ ದೇಗುಲದಲ್ಲಿ ಪೂಜೆ ಸಲ್ಲಿಸಿ ಪವಿತ್ರ ತೀರ್ಥವನ್ನು ಸೊಪ್ಪಿಗೆ ಪ್ರೋಕ್ಷಣೆ ಮಾಡಲಾಗುತ್ತದೆ. ಬಳಿಕ ಗ್ರಾಮ ದೇವತೆ ಮಾರಮ್ಮನವರ ದೇವಸ್ಥಾನ ಪ್ರದಕ್ಷಿಣಿ ಹಾಕಿ ಅಲ್ಲಿಯೂ ತೀರ್ಥವನ್ನು ಪ್ರೋಕ್ಷಣೆ ಮಾಡಿದ ನಂತರ ಗ್ರಾಮಸ್ಥರು ತಮ್ಮ ಮನೆಗಳಿಗೆ ಸೊಪ್ಪಿನೊಂದಿಗೆ ತೆರಳಿ ಪೂಜಿಸಿ, ಸಿಹಿ ಅಡುಗೆ ಮಾಡಿ ಊಟ ಮಾಡುತ್ತಾರೆ. ಹೀಗೆ ಮಾಡುವುದರಿಂದ ಗ್ರಾಮಸ್ಥರಿಗೆ, ಮಕ್ಕಳಿಗೆ ಒಳಿತಾಗುವುದು ಎಂಬ ನಂಬಿಕೆಯಿಂದ ಈ ಆಚರಣೆಯನ್ನು ನಿರಂತರವಾಗಿ ಆಚರಿಸಿಕೊಂಡು ಬರಲಾಗುತ್ತಿದೆ ಎಂದು ತಿಳಿಸಿದರು.
ದೇಗುಲದ ಅರ್ಚಕ ಮಂಜು, ಗ್ರಾಮಸ್ಥರಾದ ಚಂದನ್, ಶಿವರಾಜ್, ಲೋಕೇಶ್, ಮಲ್ಲೇಶ್, ಅನಿಲ್, ವೀರಭದ್ರ, ಸಣ್ಣಪ್ಪ, ಪುಟಾಣಿ, ಅಣ್ಣಪ್ಪ, ಪವನ್, ವಸಂತ್ ಇತರರು ಇದ್ದರು.