ಉಡುಪಿಯಲ್ಲಿ ವರ್ಮಿ ಫಿಲ್ಟರ್ ಶೌಚಗುಂಡಿ

 ಅವಿನ್ ಶೆಟ್ಟಿ, ಉಡುಪಿ
ಕೇಂದ್ರ ಸರ್ಕಾರದ ನೀರು ಮತ್ತು ನೈರ್ಮಲ್ಯ ಸಚಿವಾಲಯ ವತಿಯಿಂದ ಜಿಲ್ಲಾ ಪಂಚಾಯಿತಿ ಸ್ವಚ್ಛ ಭಾರತ್ ಮಿಷನ್, ಖಾಸಗಿ ಸಂಸ್ಥೆ ಸಹಯೋಗದಲ್ಲಿ ದೇಶದಲ್ಲಿ ಪ್ರಥಮ ಬಾರಿಗೆ ವರ್ಮಿಫಿಲ್ಟರ್ ಶೌಚಗೃಹದ ಗುಂಡಿ ನಿರ್ಮಾಣ ಪ್ರಯೋಗವನ್ನು ಜಿಲ್ಲೆಯ ನಾಲ್ಕು ಗ್ರಾಮ ಪಂಚಾಯಿತಿಗಳಲ್ಲಿ ಕೈಗೊಳ್ಳಲಾಗಿದೆ.

ಕಾರ್ಕಳ ತಾಲೂಕು ಪಂಚಾಯಿತಿ ವ್ಯಾಪ್ತಿಯ ಕಡ್ತಲ, ವರಂಗ, ಉಡುಪಿ ತಾಪಂ ವ್ಯಾಪ್ತಿಯ ಅಲೆವೂರು, ಅಂಬಲಪಾಡಿಯಲ್ಲಿ ಪ್ರಾಯೋಗಿಕವಾಗಿ ಯೋಜನೆ ಜಾರಿಗೆ ತರಲಾಗಿದೆ. ಪೈಲಟ್ ಯೋಜನೆಯಲ್ಲಿ ಜಿಲ್ಲೆಯಲ್ಲಿ 100 ಕುಟುಂಬಗಳನ್ನು ಆಯ್ಕೆ ಮಾಡಲಾಗಿದ್ದು, 50 ಫಲಾನುಭವಿಗಳನ್ನು ಅಂಬಲಪಾಡಿ, ಅಲೆವೂರು ಹಾಗೂ ವರಂಗ ಗ್ರಾಮ ಪಂಚಾಯಿತಿಗಳಿಂದ ಆಯ್ಕೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರದಿಂದ ಜಿಲ್ಲೆಗೆ 10 ಲಕ್ಷ ರೂ. ವಿಶೇಷ ಅನುದಾನ ಬಂದಿದೆ.

 ಕಡ್ತಲ 50 ಮನೆಗಳಿಗೆ ಅಳವಡಿಕೆ: ಕಡ್ತಲ ಗ್ರಾಪಂ ವ್ಯಾಪ್ತಿಯ ಅಶೋಕ ನಗರ, ಮುಳ್ಳಾಜಾಲು, ದರ್ಬುಜೆ ಮತ್ತು ಗೋಳಿಪಲ್ಕೆ ಪ್ರದೇಶಗಳಲ್ಲಿ ಯೋಜನೆ ಜಾರಿಗೆ ತಂದಿದ್ದು, 50 ಮನೆಗಳಲ್ಲಿ ವರ್ಮಿ ಶೌಚಗೃಹ ಗುಂಡಿ ನಿರ್ಮಿಸಲಾಗಿದೆ. ಇರುವ ಶೌಚಗೃಹಕ್ಕೆ ವರ್ಮಿಫಿಲ್ಟರ್ ಫಿಟ್ ಅಳವಡಿಸಲಾಗಿದೆ. ಗ್ರಾಮದ ಜನರೇ ವರ್ಮಿ ಶೌಚಗುಂಡಿಯ ಬಗ್ಗೆ ತಿಳಿದುಕೊಂದು ಆಸಕ್ತಿಯಿಂದ ಮುಂದೆ ಬಂದಿದ್ದಾರೆ ಎನ್ನುತ್ತಾರೆ ಗ್ರಾ.ಪಂ ಅಧಿಕಾರಿಗಳು.

 ನಿರ್ವಹಣೆ ಮುಖ್ಯ: ಪರಿಸರ ಸ್ನೇಹಿ ಶೌಚಗೃಹವನ್ನು ಅಷ್ಟೇ ಮುತುವರ್ಜಿಯಿಂದ ನಿರ್ವಹಣೆ ಮಾಡಬೇಕಿದೆ. 3ರಿಂದ 5 ಲೀಟರ್ ನೀರಷ್ಟೇ ಬಳಕೆ ಮಾಡಬೇಕು. ಸ್ನಾನ ಮಾಡಬಾರದು, ಸಾಬೂನು ಬಳಕೆ ಮಾಡಬಾರದು, ಗುಟ್ಖಾ ಜಗಿದು ಉಗಿಯಬಾರದು, ಸಿಗರೇಟು ತುಂಡು, ಸ್ಯಾನಿಟರಿ ಪ್ಯಾಡ್ ಹಾಕಬಾರದು ಎಂದು ಅಧಿಕಾರಿಗಳು ಹೇಳುತ್ತಾರೆ.

ನಿದು ವರ್ಮಿ ಫಿಲ್ಟರ್ ಶೌಚಗುಂಡಿ?: ಅಂತರ್ಜಲ ಕಲುಷಿತವಾಗದಂತ ವಿಶೇಷ ತಂತ್ರಜ್ಞಾನದಲ್ಲಿ ಈ ಪಿಟ್ ರೂಪಿಸಲಾಗಿದೆ. ಇದರಿಂದ ದುರ್ವಾಸನೆ ಬರುವುದಿಲ್ಲ. ಇದರಲ್ಲಿ ಟೈಗರ್ ವರ್ಮ್(ಎರೆಹುಳ ಮಾದರಿ) ಕೀಟವನ್ನು ಬಿಡಲಾಗುತ್ತದೆ. ಈ ಕೀಟಗಳು ಮಾನವನ ಮಲವನ್ನು ಆಹಾರವನ್ನಾಗಿಸಿಕೊಂಡು ನೀರನ್ನು ಶುದ್ಧೀಕರಿಸಿ ವರ್ಮಿ ಕಾಂಪೋಸ್ಟ್ ಆಗಿ ಪರಿವರ್ತಿಸುತ್ತದೆ. ಇದರ ಗೊಬ್ಬರವನ್ನು ತೋಟಗಾರಿಕೆ, ಕೃಷಿಗೆ ಬಳಸಬಹುದು. ಸಂಪೂರ್ಣ ಪರಿಸರ ಸ್ನೇಹಿ ವ್ಯವಸ್ಥೆಯೊಂದಿಗೆ 12 ವರ್ಷ ಬಳಕೆಗೆ ಯೋಗ್ಯ ಎನ್ನುತ್ತಾರೆ ಸ್ವಚ್ಛ ಭಾರತ್ ಮಿಷನ್ ಅಧಿಕಾರಿಗಳು.

ಗುಂಡಿ ನಿರ್ಮಾಣ ಮಾಡುವುದು ಹೇಗೆ? : ತಂತ್ರಜ್ಞಾನ ರೂಪಿಸಿದ ಸಂಸ್ಥೆ ಸ್ವಚ್ಛ ಭಾರತ್ ಮಿಷನ್ ಸಹಯೋಗದೊಂದಿಗೆ ಪೈಲಟ್ ಯೋಜನೆಗೆ ಆಯ್ಕೆಯಾದ ಪಂಚಾಯಿತಿಯೊಂದಿಗೆ ಸಮನ್ವಯತೆ ಸಾಧಿಸಿ ಗುಂಡಿ ನಿರ್ಮಿಸುತ್ತದೆ. ಸಾಮಾನ್ಯ ಶೌಚಗೃಹದ ಗುಂಡಿ 8-10 ಅಡಿ ಆಳವಿರುತ್ತದೆ. ಇದರಿಂದ ಅಂತರ್ಜಲ ಕಲುಷಿತ ಪ್ರಮಾಣ ಹೆಚ್ಚು. ವರ್ಮಿಪಿಲ್ಟರ್ ಶೌಚ ಗುಂಡಿಯು 4 ಅಡಿ ಆಳ ಹೊಂದಿರುತ್ತದೆ. ಮೊದಲು ಗುಂಡಿ ಮಾಡಿ, ರಿಂಗ್ ಅಳವಡಿಸಿ, ಜಲ್ಲಿ ಹಾಕಿದ ನಂತರ ಎರೆಹುಳ ಗೊಬ್ಬರ ಹಾಕಲಾಗುತ್ತದೆ. ಅದರ ಮೇಲೆ ಟೈಗರ್ ಹುಳಗಳನ್ನು ಬಿಡಲಾಗುತ್ತದೆ. ಬಳಿಕ ಶೌಚಗೃಹಕ್ಕೆ ಪೈಪ್ ಸಂಪರ್ಕ ಕೊಡಲಾಗುತ್ತದೆ.

ದೇಶದಲ್ಲೇ ಪ್ರಥಮ ಬಾರಿಗೆ ವರ್ಮಿ ಫಿಲ್ಟರ್ ಶೌಚಗೃಹ ಗುಂಡಿ ಯೋಜನೆ ಉಡುಪಿ ಜಿಲ್ಲೆ 4 ಗ್ರಾ.ಪಂ.ಗಳಲ್ಲಿ ಪ್ರಾಯೋಗಿಕವಾಗಿ ಜಾರಿ ಮಾಡಲಾಗುತ್ತಿದೆ. ಅಂತರ್ಜಲ ಸಂರಕ್ಷಣೆ, ಪರಿಸರ ಸ್ನೇಹಿ ಶೌಚಗೃಹವಿದು. ಹುಳದಿಂದ ತ್ಯಾಜ್ಯ ಗೊಬ್ಬರವಾಗುತ್ತದೆ. ಕೃಷಿ, ತೋಟಗಾರಿಕೆಗೆ ಇದನ್ನು ಬಳಸಬಹುದು. ನಿರ್ವಹಣೆಯೂ ಅಷ್ಟೇ ಮುಖ್ಯ.
 ರಘುನಾಥ್ ಜಿಲ್ಲಾ ಸಂಯೋಜಕ, ಸ್ವಚ್ಛ ಭಾರತ್ ಮಿಷನ್

ಕಡ್ತಲ ಗ್ರಾಪಂನಲ್ಲಿ ಪ್ರಾಯೋಗಿಕವಾಗಿ ವರ್ಮಿ ಶೌಚಗುಂಡಿ ನಿರ್ಮಿಸಲಾಗಿದ್ದು, ಸಾರ್ವಜನಿಕರು ಆಸಕ್ತಿ ತೋರಿಸುತ್ತಿದ್ದಾರೆ. ಗ್ರಾ.ಪಂ.ನ 4 ಕಾಲನಿಗಳಲ್ಲಿ ಪರಿಸರ ಸ್ನೇಹಿ ಶೌಚಗುಂಡಿ ನಿರ್ಮಿಸಲಾಗಿದೆ. ಯಾವುದೇ ಸಮಸ್ಯೆ ಇದ್ದರೂ, ಪಂಚಾಯಿತಿ ಮಾಹಿತಿ ನೀಡಬಹುದು. ಸಂಬಂಧಪಟ್ಟ ಸಂಸ್ಥೆಯವರಲ್ಲಿ ತಿಳಿಸಿ ಸರಿಪಡಿಸಲಾಗುವುದು. ಗೊಬ್ಬರವನ್ನು ಸಂಸ್ಥೆಯವರೇ ತೆಗೆದುಕೊಡುತ್ತಾರೆ.
 ಫರ್ಜಾನ ಎಂ ಪಿಡಿಒ, ಕಡ್ತಲ  

Leave a Reply

Your email address will not be published. Required fields are marked *