ಚೊಚ್ಚಲ ಹಾರಾಟ ಕೈಗೊಂಡ ವಿಶ್ವದ ಅತಿದೊಡ್ಡ ವಿಮಾನ: ಆಗಸದಲ್ಲಿ ತೇಲುತ್ತಲೇ ಉಪಗ್ರಹಗಳನ್ನು ಉಡಾವಣೆ ಮಾಡಬಲ್ಲದು

ವಾಷಿಂಗ್ಟನ್​: ವಿಶ್ವದಲ್ಲೇ ಅತಿದೊಡ್ಡ ವಿಮಾನ ಸ್ಟ್ರಾಟೊಲಾಂಚ್​ ಕ್ಯಾಲಿಫೋರ್ನಿಯಾದಲ್ಲಿ ಶನಿವಾರ ಚೊಚ್ಚಲ ಹಾರಾಟ ಕೈಗೊಂಡಿತು. ಎರಡು ವಿಮಾನಗಳ ಚೌಕಟ್ಟು ಹಾಗೂ ಬೋಯಿಂಗ್​ನ 6 ವಿಮಾನ ಇಂಜಿನ್​ಗಳನ್ನು ಹೊಂದಿರುವ ಸ್ಟ್ರಾಟೊಲಾಂಚ್​ ಮೊಜಾವೆ ಮರಭೂಮಿಯ ಆಗಸದಲ್ಲಿ ಗಂಟೆಗೆ 305 ಕಿ.ಮೀ. ವೇಗವಾಗಿ ಅಂದಾಜು 17 ಸಾವಿರ ಅಡಿ ಎತ್ತರದಲ್ಲಿ ಯಶಸ್ವಿಯಾಗಿ ಹಾರಾಟ ಕೈಗೊಂಡಿತು.

117 ಮೀ. ಅಗಲವಾದ ರೆಕ್ಕೆಗಳನ್ನು ಹೊಂದಿರುವ ವಿಮಾನವು ಅಂದಾಜು ಎರಡೂವರೆ ಗಂಟೆ ಅಬಾಧಿತವಾಗಿ ಹಾರಾಟ ಕೈಗೊಂಡಿತು. ಆಗಸದಲ್ಲಿ ಹಾರಾಟ ಕೈಗೊಂಡಿರುವಾಗಲೇ ಸಣ್ಣ ಉಪಗ್ರಹಗಳನ್ನು ಉಡಾವಣೆ ಮಾಡಲು ಅನುವಾಗುವ ರೀತಿಯಲ್ಲಿ ವಿಮಾನವನ್ನು ವಿನ್ಯಾಸಗೊಳಿಸಲಾಗಿದೆ.

ಉಡಾವಣಾ ಕೇಂದ್ರಗಳಿಂದ ಲಂಬಾಕಾರವಾಗಿ ಉಡಾವಣೆಗೊಳ್ಳುವ ರಾಕೆಟ್​ಗಳು ನಿಗದಿತ ಎತ್ತರವನ್ನು ತಲುಪಿದ ಬಳಿಕ ನಿಧಾನವಾಗಿ ಬಾಗುತ್ತಾ, ಅಡ್ಡಲಾಗಿ ಸಾಗುತ್ತಾ ನಿಗದಿತ ಕಕ್ಷೆಯತ್ತ ಸಾಗಿ ಉಪಗ್ರಹಗಳನ್ನು ಬಿಡುಗಡೆ ಮಾಡುತ್ತದೆ. ಇದು ಸ್ವಲ್ಪ ತ್ರಾಸದಾಯಕ ಮತ್ತು ವೆಚ್ಚದಾಯಕ ಕೆಲಸ. ಆದರೆ, ಸ್ಟ್ರಾಟೊಲಾಂಚ್​ ವಿಮಾನದ ಮೂಲಕ ನಿರ್ದಿಷ್ಟ ಎತ್ತರಕ್ಕೆ ಕೊಂಡೊಯ್ದು, ರಾಕೆಟ್​ ಅನ್ನು ಉಡಾವಣೆ ಮಾಡಿದರೆ, ಅದು ಮೊದಲ ಹಂತದಲ್ಲೇ ಅಡ್ಡಲಾಗಿ ಸಾಗುತ್ತಾ, ಉಪಗ್ರಹಗಳನ್ನು ನಿಗದಿತ ಕಕ್ಷೆಯಲ್ಲಿ ಇರಿಸಬಹುದಾಗಿದೆ ಎಂದು ಸ್ಟ್ರಾಟೊಲಾಂಚ್​ ವಿಮಾನ ಸಂಸ್ಥೆಯ ಸಿಇಒ ಜೀನ್​ ಫ್ಲಾಯ್ಡ್​ ಹೇಳಿದ್ದಾರೆ. (ಏಜೆನ್ಸೀಸ್​)

Leave a Reply

Your email address will not be published. Required fields are marked *