More

  ಮೈಸೂರಿನಲ್ಲಿ ತಲೆ ಎತ್ತಲಿದೆ ವಿಶ್ವದ ಮೊದಲ ಎಲ್‌ಇಡಿ ಗುಮ್ಮಟ ತಾರಾಲಯ

  ಮಂಜುನಾಥ ತಿಮ್ಮಯ್ಯ ಭೋವಿ ಮೈಸೂರು


  ಆಕಾಶ ಕಾಯಗಳನ್ನು ಕಣ್ತುಂಬಿಕೊಳ್ಳುವ ಅವಕಾಶ, ಬಾನಂಗಳದ ಅಧ್ಯಯನ, ಸಂಶೋಧನೆಗೆ ವೇದಿಕೆ ಆಗುವ ತಾರಾಲಯ (ಪ್ಲಾನಿಟೋರಿಯಂ) ನಗರದಲ್ಲಿ ನಿರ್ಮಾಣವಾಗುತ್ತಿದೆ. ಮೈಸೂರಿನಲ್ಲಿ ಮೊದಲ ಬಾರಿಗೆ ತಲೆ ಎತ್ತುತ್ತಿರುವ ಅತಿ ದೊಡ್ಡ ವಿಜ್ಞಾನ ಕೇಂದ್ರ ಎಂಬ ಹಿರಿಮೆಗೂ ಇದು ಭಾಜನವಾಗಲಿದೆ.


  ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಮೈಸೂರು ವಿಶ್ವವಿದ್ಯಾಲಯದ ಜಯಚಾಮರಾಜ ಒಡೆಯರ್ ಉನ್ನತ ಕಲಿಕಾ ಕೇಂದ್ರದ ಆವರಣದಲ್ಲಿ 86 ಕೋಟಿ ರೂ. ವೆಚ್ಚದಲ್ಲಿ ಇದನ್ನು ಸ್ಥಾಪಿಸಲಾಗುತ್ತಿದೆ. ಮೈಸೂರು ವಿಶ್ವವಿದ್ಯಾಲಯದೊಂದಿಗೆ ಒಪ್ಪಂದದ ಮೂಲಕ ಭಾರತೀಯ ಖಗೋಳ ಭೌತಶಾಸ್ತ್ರ ಸಂಸ್ಥೆ ಈ ಯೋಜನೆಯನ್ನು ಕಾರ್ಯಗತಗೊಳಿಸುತ್ತಿದ್ದು, ಕಾಮಗಾರಿ ಚುರುಕಿನಿಂದ ಸಾಗಿದೆ.


  ಬೆಟ್ಟದ ತಪ್ಪಲಿನಲ್ಲಿ ಮೈಸೂರು ವಿಶ್ವವಿದ್ಯಾಲಯದ 23 ಎಕರೆ ಭೂಮಿಯಿದೆ. ಇದರಲ್ಲಿ ಮೂರು ಎಕರೆಯನ್ನು ಪ್ಲಾನಿಟೋರಿಯಂ ಸ್ಥಾಪನೆಗಾಗಿ ಭಾರತೀಯ ಖಗೋಳ ಭೌತಶಾಸ್ತ್ರ ಸಂಸ್ಥೆಗೆ ನೀಡಲಾಗಿದೆ. ಆ ಜಾಗದಲ್ಲಿ ವಿಶ್ವದ ಮೊದಲ ಎಲ್‌ಇಡಿ ಗುಮ್ಮಟದೊಂದಿಗೆ ತಾರಾಲಯ ತಲೆ ಎತ್ತಲಿದೆ. ಈ ಕೇಂದ್ರ ನಿರ್ಮಾಣ ಗಮನಾರ್ಹ ಪ್ರಗತಿಯನ್ನು ಸಾಧಿಸುತ್ತಿದೆ.

  2022ರಲ್ಲಿ ಆರಂಭವಾದ ಕಾಮಗಾರಿ 2024ರಲ್ಲಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ. ಭಾರತೀಯ ಖಗೋಳ ಭೌತಶಾಸ್ತ್ರ ಸಂಸ್ಥೆಯ 41ನೇ ಪ್ಲಾನಿಟೋರಿಯಂ ಇದಾಗಿದ್ದು, ಇದು ಅತ್ಯಾಧುನಿಕವಾಗಿರಲಿದೆ. ವಿಶ್ವವಿದ್ಯಾಲಯವೊಂದರ ಸಹಯೋಗದಲ್ಲಿ ಸಂಸ್ಥೆ ಸ್ಥಾಪಿಸುತ್ತಿರುವ ಪ್ಲಾನಿಟೋರಿಯಂ ಇದೇ ಮೊದಲು ಎನಿಸಿದೆ.

  ಗುಮ್ಮಟ ತಾರಾಲಯ:


  ಎಲ್‌ಇಡಿ ಡೂಮ್‌ನ ಅಭಿವೃದ್ಧಿ ಮತ್ತು ಸಿವಿಲ್ ನಿರ್ಮಾಣ ಕೆಲಸವೂ ಪ್ರಗತಿಯಲ್ಲಿದೆ. 8ಕೆ ರೆಸಲ್ಯೂಶನ್ ಹೊಂದಿರುವ ಹೈಟೆಕ್ 15-ಮೀಟರ್ ಎಲ್ಇಡಿ ಗುಮ್ಮಟ ತಾರಾಲಯವು ವಿಶ್ವದ ಮೊದಲ ಗುಮ್ಮಟ ತಾರಾಲಯ ಎಂಬ ಕೀರ್ತಿಗೂ ಭಾಜನವಾಗಲಿದೆ. 8ಕೆ ರೆಸಲ್ಯೂಶನ್ ಹೊಂದಿರುವ ಕಾಸ್ಮೊಸ್ ಹೈಟೆಕ್ 15-ಮೀಟರ್ ಎಲ್‌ಇಡಿ ಗುಮ್ಮಟ ತಾರಾಲಯವು ವಿಶ್ವದ ಮೊದಲ ಓರೆಯಾದ ಎಲ್‌ಇಡಿ ಗುಮ್ಮಟ ತಾರಾಲಯವಾಗಿದೆ.

  ವಿದೇಶಗಳಿಂದ ನೆರವು:


  ಎಲ್‌ಇಡಿ ಗುಮ್ಮಟವನ್ನು ಕೊನಿಕಾ-ಮಿನೋಲ್ಟಾ (ಜಪಾನ್), ಆಎರ್‌ಸ್‌ಎ-ಕಾಸ್ಮೊಸ್ (ಫ್ರಾನ್ಸ್) ಮತ್ತು ಮೆಸರ್ಸ್ ಆರ್ಬಿಟ್-ಅನಿಮೇಟ್ (ಇಂಡಿಯಾ) ಕನ್ಸೋರ್ಟಿಯಂ ಅಭಿವೃದ್ಧಿಪಡಿಸುತ್ತಿವೆ. ಜತೆಗೆ, ನೆರವು ಸಹ ನೀಡುತ್ತಿವೆ.


  ಜಗತ್ತಿನಾದ್ಯಂತ ಹೆಚ್ಚಿನ ತಾರಾಲಯಗಳು ಚಿತ್ರಗಳನ್ನು ಮತ್ತು ಚಲನಚಿತ್ರಗಳನ್ನು ನಿಷ್ಕ್ರಿಯ ಗುಮ್ಮಟದ ಮೇಲೆ ಬಿತ್ತರಿಸಲು ಪ್ರೊಜೆಕ್ಟರ್ ಅವಲಂಬಿಸಿವೆ. ಮೈಸೂರಿನಲ್ಲಿ ಸ್ಥಾಪಿಸುತ್ತಿರುವ ತಾರಾಲಯದಲ್ಲಿ ಪ್ರೊಜೆಕ್ಟರ್ ಬಳಸುತ್ತಿಲ್ಲ. ಬದಲಾಗಿ ಗುಮ್ಮಟವನ್ನು ಎಲ್‌ಇಡಿ ದೀಪಗಳ ಫಲಕಗಳಿಂದ ನಿರ್ಮಿಸಲಾಗುವುದು. ಅದು ಕಂಪ್ಯೂಟರ್ ಸಿಸ್ಟಂನಿಂದ ನಿಯಂತ್ರಿಸಲ್ಪಡುತ್ತದೆ.

  ಆಕಾಶ ಕಾಯಗಳ ವೀಕ್ಷಣೆ:


  ಅತ್ಯಾಧುನಿಕ ತಾರಾಲಯ ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ದತ್ತಾಂಶ (ಡೇಟಾ) ವಿಶ್ಲೇಷಣೆ ತರಬೇತಿ ಮತ್ತು ಸಂಪನ್ಮೂಲ ಕೇಂದ್ರವನ್ನು ಒಳಗೊಂಡಿರುತ್ತದೆ. ಇಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಖಗೋಳಶಾಸ್ತ್ರದ ಮಾತುಕತೆ, ದತ್ತಾಂಶ ವಿಶ್ಲೇಷಣೆ ಕಾರ್ಯಾಗಾರ, ಗಾಮೀಣ ಶಾಲೆಗಳಿಗೆ ಶೈಕ್ಷಣಿಕ ನೆರವು, ಸಾರ್ವಜನಿಕರಿಗೆ ದೂರದರ್ಶಕದ ಮೂಲಕ ಆಕಾಶ ಕಾಯಗಳನ್ನು ವೀಕ್ಷಣೆ ಮಾಡಲು ನೆರವಾಗಲಿದೆ.

  ವಿತ್ತ ಸಚಿವರಿಂದ 5 ಕೋಟಿ ರೂ. ನೆರವು:


  ಈ ತಾರಾಲಯ ನಿರ್ಮಾಣಕ್ಕೆ ಕೇಂದ್ರದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಮ್ಮ ಸಂಸದರ ಕ್ಷೇತ್ರಾಭಿವೃದ್ಧಿ ನಿಧಿಯಿಂದ 5 ಕೋಟಿ ರೂ. ಅನುದಾನ ನೀಡಿದ್ದಾರೆ. ರಾಜ್ಯದ ಯುವಜನರಲ್ಲಿ ಬಾಹ್ಯಾಕಾಶ ಮತ್ತು ವಿಶ್ವ ವಿಜ್ಞಾನದ ಬಗ್ಗೆ ಆಸಕ್ತಿಯನ್ನು ಬೆಳೆಸಲು ಡಿಜಿಸ್ಟಾರ್ 7 ತಾರಾಲಯವನ್ನು ಸ್ಥಾಪಿಸುವ ಕಲ್ಪನೆಯಲ್ಲಿ ಅವರು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ವಿವಿಧ ಇಲಾಖೆ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ, ಅಟಾಮಿಕ್ ಎನರ್ಜಿ ವಿಭಾಗ, ಬಾಹ್ಯಾಕಾಶ ಸಂಸ್ಥೆ ಹಾಗೂ ಇನ್ನಿತರ ಸಂಸ್ಥೆಗಳು ತಾರಾಲಯಕ್ಕೆ ಹೆಚ್ಚುವರಿ ಸಹಾಯವನ್ನು ನೀಡಿವೆ.

  ವಿಜ್ಞಾನ ಶಿಕ್ಷಣದ ಕುರಿತು ಅರಿವು:


  ಆಕಾಶ ಕಾಯಗಳ ಕುರಿತು ಸಂಶೋಧನೆಯನ್ನು ನಡೆಸಲು ಈ ಕೇಂದ್ರದಿಂದ ಅನುಕೂಲವಾಗಲಿದೆ. ಮೈವಿವಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಅಧ್ಯಯನಕ್ಕೆ ಮತ್ತಷ್ಟು ಪ್ರೋತ್ಸಾಹ ದೊರೆಯಲಿದೆ. ಜತೆಗೆ, ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ ವಿಜ್ಞಾನ ಶಿಕ್ಷಣದ ಬಗ್ಗೆ ಅರಿವು ಮೂಡಲಿದೆ.

  ಚಾಮುಂಡಿಬೆಟ್ಟದ ತಪ್ಪಲಿನ ಮೈಸೂರು ವಿಶ್ವವಿದ್ಯಾಲಯದ 3 ಎಕರೆ ಜಾಗದಲ್ಲಿ ವಿಶ್ವದ ಮೊದಲ ಅತ್ಯಾಧುನಿಕ ತಾರಾಲಯ ಕಟ್ಟಡ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿ ಇದೆ. 2024ರ ಆಗಸ್ಟ್‌ನಲ್ಲಿ ಪೂರ್ಣಗೊಳ್ಳಲಿದೆ. ಅನನ್ಯ ಶೈಕ್ಷಣಿಕ ಮತ್ತು ತರಬೇತಿ ಕಾರ್ಯಕ್ರಮಗಳನ್ನು ಸಂಘಟಿಸಲು ಇದುವೇ ವೇದಿಕೆಯಾಗಲಿದೆ.
  ಪ್ರೊ. ಅನ್ನಪೂರ್ಣಿ ಸುಬ್ರಮಣ್ಯಂ
  ನಿರ್ದೇಶಕಿ, ಭಾರತೀಯ ಖಗೋಳ ಭೌತಶಾಸ್ತ್ರ ಸಂಸ್ಥೆ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts