ವಿಶ್ವಕಪ್​​ ಸ್ವಾರಸ್ಯ: ‘ಪ್ಲೀಸ್, ಸ್ವಲ್ಪ ವೇಗವಾಗಿ ಆಡಿ..’

ವಿಶ್ವಕಪ್ ಇತಿಹಾಸದ ಮೊಟ್ಟಮೊದಲ ಪಂದ್ಯವೇ ಕೆಟ್ಟ ಇತಿಹಾಸಕ್ಕೆ ಕಾರಣವಾಯಿತು. ಇಂಗ್ಲೆಂಡ್​ನ 335 ರನ್ ಬೆನ್ನಟ್ಟುವ ವೇಳೆ ಆರಂಭಿಕ ಆಟಗಾರ ಸುನೀಲ್ ಗಾವಸ್ಕರ್ 60 ಓವರ್ ಕ್ರೀಸ್​ನಲ್ಲಿ ನಿಂತರೂ 36 ರನ್ ಬಾರಿಸಿದ್ದರು. 174 ಎಸೆತಗಳನ್ನು ಎದುರಿಸಿದ್ದ ಗಾವಸ್ಕರ್ ಕೇವಲ ಒಂದೇ ಬೌಂಡರಿ ಬಾರಿಸಿದ್ದರು.

ಭಾರತದ ನಿಧಾನಗತಿಯ ಆಟದಿಂದ ಬೇಸತ್ತಿದ್ದ ಅಭಿಮಾನಿಗಳು ಬ್ಯಾಟ್ಸ್​ಮನ್​ಗಳನ್ನು ಕೆಣಕಿದ್ದು ಮಾತ್ರವಲ್ಲ, ಮೈದಾನಕ್ಕೆ ಬೀಯರ್ ಕ್ಯಾನ್​ಗಳನ್ನು ಎಸೆದಿದ್ದರು. ಇದರ ನಡುವೆ ಮೈದಾನಕ್ಕೆ ನುಗ್ಗಿದ ಅಭಿಮಾನಿಯೊಬ್ಬ ಸುನೀಲ್ ಗಾವಸ್ಕರ್​ರ ಜತೆಗಾರರಾಗಿದ್ದ ಬ್ರಿಜೇಶ್ ಪಟೇಲ್ ಬಳಿ ಬಂದು, ಸ್ವಲ್ಪವಾದರೂ ವೇಗವಾಗಿ ಆಡಿ ಎಂದು ಮನವಿ ಮಾಡಿದ್ದ. ಆದರೆ, ಗಾವಸ್ಕರ್ ಮಾತ್ರ ಆಟದ ಶೈಲಿ ಬದಲಿಸಿರಲಿಲ್ಲ. ‘ಮೊತ್ತವನ್ನು ಬೆನ್ನಟ್ಟುವುದು ಅಸಾಧ್ಯ ಎಂದು ನಮಗೆ ತಿಳಿದಿತ್ತು. ಮ್ಯಾಚ್ ಪ್ರ್ಯಾಕ್ಟೀಸ್ ಆಗಲಿ ಎಂದು ನಿಧಾನವಾಗಿ ಆಡಿದ್ದೆ’ ಎಂದು ಸುನೀಲ್ ಗಾವಸ್ಕರ್ ಹೇಳಿದ್ದರು. ತಮ್ಮ ಆತ್ಮಚರಿತ್ರೆ ಸನ್ನಿ ಡೇಸ್​ನಲ್ಲೂ ಇದರ ಬಗ್ಗೆ ಗಾವಸ್ಕರ್ ಬರೆದುಕೊಂಡಿದ್ದಾರೆ.

‘ಹೌದು ನಾನು ಆವರೆಗೂ ಆಡಿದ ಅತೀ ಕೆಟ್ಟ ಇನಿಂಗ್ಸ್ ಅದು. ಇನಿಂಗ್ಸ್​ನ ಕೆಲವೊಂದು ಹಂತದಲ್ಲಿ ಸ್ಟಂಪ್​ನಿಂದ ಆಚೆ ಬಂದು ನಿಂತು ಬೌಲ್ಡ್ ಆಗಲು ಬಯಸಿದ್ದೆ. ಆದರೆ, ಅದೂ ಸಾಧ್ಯವಾಗಲಿಲ್ಲ. ಮೂರು ಬಾರಿ ನಾನು ಸುಲಭವಾಗಿ ನೀಡಿದ ಕ್ಯಾಚ್​ಅನ್ನು ಕೈಬಿಟ್ಟರು. ನಾನು ಔಟ್ ಆಗಬೇಕೆಂದು ಎಲ್ಲ ರೀತಿಯ ಪ್ರಯತ್ನ ಪಟ್ಟರು ಎಲ್ಲವೂ ವಿಫಲವಾಯಿತು. ಅಭಿಮಾನಿಗಳ ಪ್ರತಿಕ್ರಿಯೆಯನ್ನೂ ನಾನು ಅರ್ಥಮಾಡಿಕೊಳ್ಳಬಲ್ಲೆ. ಅವರ ದಿನವನ್ನು ನಾನು ಹಾಳು ಮಾಡಿದ್ದಕ್ಕೆ ಕ್ಷಮೆ ಇರಲಿ’ ಎಂದು ಬರೆದಿದ್ದಾರೆ. ಇಂದಿನ ಕ್ರಿಕೆಟ್ ಅಭಿಮಾನಿಗಳು ಕೂಡ ಗಾವಸ್ಕರ್​ರ ಈ ಇನಿಂಗ್ಸ್ ಬಗ್ಗೆ ಈಗಲೂ ಕುತೂಹಲ ಹೊಂದಿದ್ದಾರೆ.

Leave a Reply

Your email address will not be published. Required fields are marked *