ಪದಾರ್ಪಣೆಗೆ ಸಜ್ಜಾದ ಪ್ರತಿಭೆಗಳು

ಕ್ರಿಕೆಟ್​ನ ಅತಿದೊಡ್ಡ ಸಂಭ್ರಮ ನಾಲ್ಕು ವರ್ಷಕ್ಕೊಮ್ಮೆ ಬರುವ ವಿಶ್ವಕಪ್. ಮೇ 30 ರಿಂದ ಆರಂಭವಾಗಲಿರುವ 12ನೇ ಆವೃತ್ತಿಯ ಮಹಾ ಟೂರ್ನಿಗೆ ಕ್ರಿಕೆಟ್ ದೇಶಗಳೊಂದಿಗೆ ಅಭಿಮಾನಿಗಳು ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ಕೆಲ ಬದಲಾವಣೆಗಳೊಂದಿಗೆ ಬರುತ್ತಿರುವ ಈ ಬಾರಿಯ ವಿಶ್ವಕಪ್ ಭವಿಷ್ಯದ ಪ್ರತಿಭೆಗಳಿಗೆ ದೊಡ್ಡ ಮಟ್ಟದ ವೇದಿಕೆ ಕಲ್ಪಿಸುವುದರಲ್ಲಿ ಅನುಮಾನವಿಲ್ಲ. ಆಧುನಿಕ ಕ್ರಿಕೆಟ್​ನ ದಿಗ್ಗಜರ ನಡುವೆ ಇದೇ ಮೊದಲ ಬಾರಿಗೆ ವಿಶ್ವಕಪ್ ಆಡಲು ಸಿದ್ಧವಾಗುತ್ತಿರುವ ಆಟಗಾರರು, ಮಹಾ ಟೂರ್ನಿಗೆ ತಮ್ಮ ಆಗಮನವನ್ನು ಸ್ಮರಣೀಯ ನಿರ್ವಹಣೆಯೊಂದಿಗೆ ತಿಳಿಸಲು ಬಯಸಿದ್ದಾರೆ.

ಜೇಸನ್ ರಾಯ್

ವಿಶ್ವಕಪ್ ಫೇವರಿಟ್ ಆಗಿ ತೆರಳುತ್ತಿರುವ ಇಂಗ್ಲೆಂಡ್​ನ ಬ್ಯಾಟಿಂಗ್ ವಿಭಾಗದ ಪ್ರಮುಖ ಅಸ್ತ್ರ ಜೇಸನ್ ರಾಯ್. 2015ರ ಮಾರ್ಚ್ 8 ರಂದು ಪದಾರ್ಪಣೆ ಮಾಡಿದ ದಿನದಿಂದ ಆಡಿದ 75 ಏಕದಿನ ಪಂದ್ಯಗಳಲ್ಲಿ 2824 ರನ್ ಬಾರಿಸಿದ್ದಾರೆ. 300 ಪ್ಲಸ್ ಮೊತ್ತಗಳು ಸಾಮಾನ್ಯವಾಗಿರುವ ಈ ದಿನಗಳಲ್ಲಿ ಇಂಗ್ಲೆಂಡ್​ನ ಚೇಸಿಂಗ್ ಮಾಸ್ಟರ್ ಆಗಿ ರಾಯ್ ರೂಪುಗೊಂಡಿದ್ದಾರೆ. ದೊಡ್ಡ ಮಟ್ಟದ ಚೇಸಿಂಗ್ ವೇಳೆ ಜೇಸನ್ ರಾಯ್ ಆಟ ನೋಡುವುದೇ ಒಂದು ಸೊಬಗು. ಕಳೆದ ವರ್ಷ ಆಸ್ಟ್ರೇಲಿಯಾ ವಿರುದ್ಧ ಮೆಲ್ಬೋರ್ನ್​ನಲ್ಲಿ 305 ರನ್ ಚೇಸ್ ಮಾಡುವ ವೇಳೆ, 151 ಎಸೆತಗಳಲ್ಲಿ 180 ರನ್ ಬಾರಿಸಿದ್ದ ರಾಯ್, 7 ಎಸೆತಗಳು ಇರುವಂತೆ ತಂಡಕ್ಕೆ ಗೆಲುವು ನೀಡಿದ್ದರು.

ಹಾಲಿ ವರ್ಷ ವೆಸ್ಟ್ ಇಂಡೀಸ್ ವಿರುದ್ಧ ಬಾರ್ಬಡೋಸ್​ನಲ್ಲಿ 65 ಎಸೆತಗಳಲ್ಲಿ ಶತಕ ಬಾರಿಸಿದ್ದ ಜೇಸನ್ ರಾಯ್, ಇಂಗ್ಲೆಂಡ್ ತಂಡ ವೆಸ್ಟ್ ಇಂಡೀಸ್ ನೀಡಿದ 361 ರನ್ ಬೆನ್ನಟ್ಟಲು ಕಾರಣರಾಗಿದ್ದರು.

ಬಾಬರ್ ಅಜಮ್

ಪಾಕಿಸ್ತಾನ ಐತಿಹಾಸಿಕವಾಗಿ ಪ್ರತಿಭಾವಂತ ವೇಗದ ಬೌಲರ್​ಗಳನ್ನು ರೂಪಿಸುವ ತಂಡವಾಗಿದ್ದರೂ, ಕಳೆದ ಎರಡು ವರ್ಷಗಳಲ್ಲಿ ಬಾಬರ್ ಅಜಮ್ ಬ್ಯಾಟ್ಸ್​ಮನ್ ಆಗಿ ಸ್ಥಿರ ಆಟ ವಾಡಿದ್ದಾರೆ. 2015ರಲ್ಲಿ ಪದಾರ್ಪಣೆ ಮಾಡಿದ ಬಲಗೈ ಆಟಗಾರ ಈವರೆಗೂ ಆಡಿದ 62 ಪಂದ್ಯಗಳಿಂದ 49.88ರ ಸರಾಸರಿಯಲ್ಲಿ 2544 ರನ್ ಬಾರಿಸಿದ್ದು, ವಿಶ್ವ ರ್ಯಾಂಕಿಂಗ್​ನಲ್ಲಿ 7ನೇ ಸ್ಥಾನದಲ್ಲಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಪಾಕಿಸ್ತಾನ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ನಿಭಾಯಿಸಿದ್ದ ಬ್ಯಾಟ್ಸ್​ಮನ್ ಎಂದು ಕೋಚ್ ಮಿಕಿ ಆರ್ಥರ್ ಕೂಡ 24 ವರ್ಷದ ಅಜಮ್ ಆಟವನ್ನು ಕೊಂಡಾಡಿದ್ದಾರೆ. ಪ್ರಸ್ತುತ ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಸರಣಿಯಲ್ಲಿ ಅಜಮ್ ಕೆಟ್ಟ ಫಾಮರ್್​ಲಿ್ಲ್ದರೂ, ವಿಶ್ವಕಪ್ ವೇಳೆ ಇವರಿಂದ ಹೆಚ್ಚಿನ ನಿರೀಕ್ಷೆಯಲ್ಲಿ ಪಾಕ್ ತಂಡವಿದೆ.

ಏಕದಿನದ ಮೊದಲ ಮೂರು ಶತಕವನ್ನು ಸತತ ಮೂರು ಪಂದ್ಯಗಳಲ್ಲಿ ಬಾರಿಸಿದ ವಿಶ್ವದ ಮೊದಲ ಆಟಗಾರ ಬಾಬರ್ ಅಜಮ್ 2016ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯಲ್ಲಿ ಈ ಸಾಧನೆ ಮಾಡಿದ್ದರು.

ಜಸ್​ಪ್ರೀತ್ ಬುಮ್ರಾ

ಭಾರತ ತಂಡಕ್ಕೆ ಪದಾರ್ಪಣೆಯೊಂದಿಗೆ, ತಂಡದ ವೇಗದ ಬೌಲಿಂಗ್ ವಿಭಾಗದ ಪ್ರಧಾನ ಅಸ್ತ್ರವಾಗಿ ಗುರುತಿಸಿಕೊಳ್ಳಲು ಜಸ್​ಪ್ರೀತ್ ಬುಮ್ರಾಗೆ ತಗುಲಿದ್ದು ಮೂರು ವರ್ಷ ಮಾತ್ರ. ಸೀಮಿತ ಓವರ್​ಗಳ ಕ್ರಿಕೆಟ್ ಪಂದ್ಯದ ಯಾವುದೇ ಹಂತದಲ್ಲಿ ವಿಕೆಟ್ ಉರುಳಿಸುವ ಗುರಿಯಲ್ಲಿದ್ದಾಗ ನಾಯಕ ಕೊಹ್ಲಿ ಚೆಂಡನ್ನು ಬುಮ್ರಾ ಕೈಗೆ ನೀಡುವುದು ಇತ್ತೀಚಿನ ಪಂದ್ಯಗಳಲ್ಲಿ ಸಾಬೀತಾಗಿದೆ. ಬ್ಯಾಟ್ಸ್​ಮನ್​ಗಳ ಎಣಿಕೆಗೆ ಸಿಗದ ಬೌನ್ಸರ್​ಗಳು, ಹೆಬ್ಬೆರಳನ್ನು ಚಿಂದಿ ಮಾಡುವ ಯಾರ್ಕರ್, ಯಾವ ಶಾಟ್ ಬಾರಿಸಬೇಕು ಎಂದು ಚಿಂತೆಗೆ ದೂಡುವ ನಿಧಾನಗತಿಯ ಎಸೆತಗಳು ಇವೆಲ್ಲವೂ ಬುಮ್ರಾರ ಬತ್ತಳಿಕೆಯಲ್ಲಿವೆ. ಆಧುನಿಕ ಯುಗದ ವೇಗದ ಬೌಲರ್​ನಲ್ಲಿರಬೇಕಾದ ಎಲ್ಲ ರೀತಿಯ ಅಸ್ತ್ರಗಳು ಬುಮ್ರಾ ಬಳಿ ಇವೆ. 2018ರಲ್ಲಿ ಬುಮ್ರಾ, ಟೆಸ್ಟ್ ತಂಡಕ್ಕೆ ಪದಾರ್ಪಣೆ ಮಾಡಿದ್ದು ಮಾತ್ರವಲ್ಲ, ಏಕದಿನದಲ್ಲೂ ಸ್ಮರಣೀಯವಾಗಿ ಆಡಿದ್ದಾರೆ. ಕಳೆದ ವರ್ಷ ಆಡಿದ 13 ಏಕದಿನ ಪಂದ್ಯಗಳಿಂದ 22 ವಿಕೆಟ್ ಉರುಳಿಸಿರುವ ಇವರ ಎಕಾನಮಿ 3.62 ಮಾತ್ರ. ಎಲ್ಲಕ್ಕಿಂತ ಮುಖ್ಯವಾಗಿ ಐಸಿಸಿ ರ್ಯಾಂಕಿಂಗ್​ನಲ್ಲಿ ನಂ.1 ಏಕದಿನ ಬೌಲರ್. ತೀರಾ ಅಪರೂಪ ಎನ್ನುವಂತೆ ವಿಶ್ವಕಪ್​ನಂಥ ಪ್ರಧಾನ ಟೂರ್ನಿಯಲ್ಲಿ ಭಾರತ ಯಾವುದೇ ಬೌಲಿಂಗ್ ಹಿನ್ನಡೆಯಿಲ್ಲದೆ ತೆರಳುತ್ತಿದೆ.

49 ಏಕದಿನ ಪಂದ್ಯವಾಡಿದ ಬುಮ್ರಾಗೆ 100 ವಿಕೆಟ್ ಗಡಿ ಮುಟ್ಟಲು ಇನ್ನು 15 ವಿಕೆಟ್ ಅಗತ್ಯವಿದೆ. ವಿಶ್ವಕಪ್ ವೇಳೆ ಅತಿವೇಗವಾಗಿ 100 ವಿಕೆಟ್ ಗಡಿ ಮುಟ್ಟಿದ ಭಾರತದ ಬೌಲರ್ ಎನಿಸಿಕೊಳ್ಳುವ ಎಲ್ಲ ಅವಕಾಶ ಇವರಿಗಿದೆ.

ಕಗಿಸೋ ರಬಾಡ

ದಕ್ಷಿಣ ಆಫ್ರಿಕಾದ ಉರಿವೇಗದ ದಾಳಿಕಾರ. ‘ದೇಶದ ಸಾರ್ವಕಾಲಿಕ ಶ್ರೇಷ್ಠ ವೇಗಿಯಾಗುವ ಎಲ್ಲ ಅರ್ಹತೆ ಹಾಗೂ ಕೌಶಲವಿದೆ’ ಎಂದು ಸ್ವತಃ ದಿಗ್ಗಜ ಅಲನ್ ಡೊನಾಲ್ಡ್​ರಿಂದಲೇ ಹೊಗಳಿಸಿಕೊಂಡ ಆಟಗಾರ. 20ನೇ ವಯಸ್ಸಿನಲ್ಲಿ ಏಕದಿನಕ್ಕೆ ಪದಾರ್ಪಣೆ ಮಾಡಿದ ರಬಾಡ ಈವರೆಗೆ ಆಡಿದ 66 ಪಂದ್ಯಗಳಿಂದ 26.43ರ ಸರಾಸರಿಯಲ್ಲಿ 106 ವಿಕೆಟ್ ಉರುಳಿಸಿದ್ದಾರೆ. ವಿಶ್ವ ನಂ.5 ವೇಗದ ಬೌಲರ್. 23 ವಯೋಮಿತಿ ಕ್ರಿಕೆಟರ್​ಗೆ ಪ್ರತಿ ವರ್ಷ ನೀಡಲಾಗುವ ‘ವಿಸ್ಡನ್ ಗೋಲ್ಡನ್ ಬಾಯ್’ ಪ್ರಶಸ್ತಿಯನ್ನು ಕಳೆದ ವರ್ಷ ಗೆದ್ದ ಆಟಗಾರ. ಸ್ಟೈನ್, ವೆರ್ನಾನ್ ಫಿಲಾಂಡರ್​ರಂಥ ಸ್ಟಾರ್​ಗಳನ್ನು ಹೊಂದ ದಕ್ಷಿಣ ಆಫ್ರಿಕಾ ತಂಡಕ್ಕೆ ರಬಾಡ ಎಕ್ಸ್-ಫ್ಯಾಕ್ಟರ್ ಆಗುವುದರಲ್ಲಿ ಅನುಮಾನವಿಲ್ಲ.

ಶಿಮ್ರೋನ್ ಹೆಟ್ಮೆಯರ್

22ನೇ ವಯಸ್ಸಿನಲ್ಲಿಯೇ ವೆಸ್ಟ್ ಇಂಡೀಸ್ ತಂಡದ ಮಧ್ಯಮ ಕ್ರಮಾಂಕದ ಸ್ಟಾರ್ ಎನಿಸಿಕೊಂಡವರು ಹೆಟ್ಮೆಯರ್. 25 ಏಕದಿನ ಪಂದ್ಯಗಳಲ್ಲಿ 41ರ ಸರಾಸರಿಯಲ್ಲಿ 900 ರನ್ ಬಾರಿಸಿರುವ ಹೆಟ್ಮೆಯರ್ 4 ಶತಕ ಸಿಡಿಸಿದ್ದಾರೆ. ಇಂಗ್ಲೆಂಡ್ ವಿರುದ್ಧ ಬಾರ್ಬಡೋಸ್​ನಲ್ಲಿ ಕೊನೇ ಶತಕ ಸಿಡಿಸಿದ್ದರು. ಇನ್ನು ವಿಶ್ವಕಪ್​ನಂಥ ದೊಡ್ಡ ವೇದಿಕೆ ಹೆಟ್ಮೆಯರ್​ಗೆ ಹೊಸದಲ್ಲ. 2016ರಲ್ಲಿ ವಿಂಡೀಸ್ ತಂಡವನ್ನು 19 ವಯೋಮಿತಿ ವಿಶ್ವಕಪ್ ಟೂರ್ನಿಯಲ್ಲಿ ಚಾಂಪಿಯನ್ ಪಟ್ಟಕ್ಕೇರಿಸಿದ ಆಟಗಾರ ಇವರು. ಕಳೆದ ವರ್ಷದ ಕ್ವಾಲಿಫೈಯರ್​ನಲ್ಲಿ ಸ್ಥಿರ ನಿರ್ವಹಣೆ ತೋರಿದ ಬ್ಯಾಟ್ಸ್​ಮನ್​ಗಳಲ್ಲಿ ಒಬ್ಬರು.

2018ರಲ್ಲಿ ಆಡಿದ 18 ಏಕದಿನ ಪಂದ್ಯಗಳಲ್ಲಿ 727 ರನ್ ಬಾರಿಸಿರುವ ಎಡಗೈ ಬ್ಯಾಟ್ಸ್​ಮನ್ ಹೆಟ್ಮೆಯರ್, ಕೆರಿಬಿಯನ್ ಪ್ರೀಮಿಯರ್ ಲೀಗ್ ಟಿ20ಯಲ್ಲಿ 3ನೇ ಗರಿಷ್ಠ ರನ್ ಸ್ಕೋರರ್ ಎನಿಸಿದ್ದರು.

ರಶೀದ್ ಖಾನ್

2019ರ ವಿಶ್ವಕಪ್ ಆರಂಭದ ವೇಳೆಗೆ ರಶೀದ್ ಖಾನ್ 21 ವರ್ಷವನ್ನೂ ದಾಟಿರುವುದಿಲ್ಲ. ಪಂದ್ಯದ ಪರಿಸ್ಥಿತಿಗೆ ತಕ್ಕಂತೆ ಬೌಲಿಂಗ್ ಮಾಡುವುದರಲ್ಲಿ ರಶೀದ್ ನಿಸ್ಸೀಮರು. ಬೌಲಿಂಗ್ ರ್ಯಾಂಕಿಂಗ್​ನಲ್ಲಿ 3ನೇ ಸ್ಥಾನದಲ್ಲಿರುವ ರಶೀದ್, ಆಲ್ರೌಂಡರ್ ರ್ಯಾಂಕಿಂಗ್​ನಲ್ಲಿ ಅಗ್ರಸ್ಥಾನದಲ್ಲಿದ್ದಾರೆ. 57 ಏಕದಿನದಿಂದ 15ರ ಸರಾಸರಿಯಲ್ಲಿ 123 ವಿಕೆಟ್ ಉರುಳಿಸಿರುವ ರಶೀದ್​ರ ನಿರ್ವಹಣೆಯೇ ವಿಶ್ವಕಪ್​ನಲ್ಲಿ ಅಫ್ಘಾನಿಸ್ತಾನ ತಂಡದ ಪ್ರಧಾನ ಅಂಶವಾಗಿರಲಿದೆ. ಜಿಂಬಾಬ್ವೆ ಹಾಗೂ ಐರ್ಲೆಂಡ್ ತಂಡವನ್ನು ಹಿಂದಿಕ್ಕಿ ವಿಶ್ವಕಪ್​ಗೆ ಅಫ್ಘಾನಿಸ್ತಾನ ಅರ್ಹತೆ ಪಡೆದ ರೀತಿಯೇ ತಂಡದ ಕ್ರಿಕೆಟ್ ಪ್ಯಾಷನ್​ಅನ್ನು ತೋರಿಸುತ್ತದೆ. ಅಫ್ಘಾನಿಸ್ತಾನ ನಾಕೌಟ್ ಹಂತಕ್ಕೇರುವ ಸಾಧ್ಯತೆ ಕ್ಷೀಣವಾಗಿದ್ದರೂ, ಟೂರ್ನಿಯ ಅಗ್ರ 5 ಗರಿಷ್ಠ ವಿಕೆಟ್ಕಿತ್ತ ಬೌಲರ್​ಗಳ ಪಟ್ಟಿಯಲ್ಲಿ ರಶೀದ್ ಖಾನ್ ಸ್ಥಾನ ಪಡೆಯುವ ಸಾಧ್ಯತೆ ಇದೆ.

Leave a Reply

Your email address will not be published. Required fields are marked *