Thursday, 13th December 2018  

Vijayavani

ಕಬ್ಬು ದರ ಬಾಕಿ ನೀಡಲು ರೈತರ ಆಗ್ರಹ -ಸುವರ್ಣ ಸೌಧದಕ್ಕೆ ಮುತ್ತಿಗೆ ಯತ್ನ - ಪೊಲೀಸರೊಂದಿಗೆ ಅನ್ನದಾತರ ಜಟಾಪಟಿ        ರಾಜಸ್ಥಾನ ಸಿಎಂ ಆಗಿ ಗೆಹ್ಲೋಟ್ ಹೆಸರು ಫೈನಲ್ - ರಾಹುಲ್ ಆಪ್ತ ಸಚಿನ್ ಪೈಲಟ್​ಗೆ ಡಿಸಿಎಂ ಪಟ್ಟ - ಅಧಿಕೃತ ಘೋಷಣೆ ಬಾಕಿ        ಬಳ್ಳಾರಿಯ ಮೈಲಾರದಲ್ಲಿ ಗೊರವಯ್ಯನ ಗಲಾಟೆ - ಸಣ್ಣಪ್ಪ ಮಲ್ಲಪ್ಪನವರಿಗೆ ಗೊರವಯ್ಯನ ದೀಕ್ಷೆ ಕೊಟ್ಟಿದ್ದಕ್ಕೆ ವಿರೋಧ         ಟ್ರಿನಿಟಿ ಸರ್ಕಲ್​​ನಲ್ಲಿ ಮೆಟ್ರೋ ಪಿಲ್ಲರ್ ಬಿರುಕು - ಜೀವದ ಜತೆ ಚೆಲ್ಲಾಟ ಬೇಡ - ದಿಗ್ವಿಜಯ ನ್ಯೂಸ್ ಜತೆ ಎಕ್ಸ್​​ಪರ್ಟ್​​ಗಳ ಮಾತು        ತಿರುವನಂತಪುರದಲ್ಲಿ ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ -ಹಿಂಸಾಚಾರಕ್ಕೆ ಯತ್ನ, ಪೊಲೀಸರಿಂದ ಲಾಠಿಚಾರ್ಜ್       
Breaking News

ಅನುರಣಿಸಿದ ಯೋಗ ತರಂಗ

Thursday, 21.06.2018, 9:06 PM       No Comments

ಗದಗ: ಸೂರ್ಯ ಉದಯಿಸುವ ಸಮಯದಲ್ಲಿ, ತಂಗಾಳಿಯ ತಂಪಿನಲಿ, ತುಂತುರು ಮಳೆ ಹನಿಗಳ ನಡುವೆ ಬಸವೇಶ್ವರ ಪುತ್ಥಳಿಯ ಆವರಣದಲ್ಲಿ ಗುರುವಾರ ಯೋಗ ಪ್ರಪಂಚ ಸೃಷ್ಟಿಯಾಗಿತ್ತು. ಎತ್ತ ನೋಡಿದರತ್ತ ಭಾರತೀಯ ಅಧ್ಯಾತ್ಮ, ವೈದ್ಯ ಪರಂಪರೆಯ ಯೋಗ-ಪ್ರಾಣಾಯಾಮದ ಪ್ರತಿನಿಧಿಗಳು ಗೋಚರಿಸುತ್ತಿದ್ದರು. ಪ್ರಶಾಂತ ವಾತಾವರಣದಲ್ಲಿ ಅವರ ದೀರ್ಘ ಉಚ್ವಾಸ-ನಿಶ್ವಾಸ ಸ್ಪಷ್ಟವಾಗಿ ಕೇಳುತ್ತಿತ್ತು..

4ನೇ ಅಂತಾರಾಷ್ಟ್ರೀಯ ಯೋಗ ದಿನಾಚಾರಣೆ ಅಂಗವಾಗಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆಯುಷ್ ಇಲಾಖೆ, ಗದಗ ಜಿಲ್ಲಾ ಯೋಗ ಸೇವಾ ಸಮಿತಿ, ಪತಂಜಲಿ ಯೋಗ ಸಮಿತಿ ಸಹಯೋಗದಲ್ಲಿ ಭೀಷ್ಮ ಕೆರೆಯ ಬಸವೇಶ್ವರ ಮೂರ್ತಿ ಆವರಣದಲ್ಲಿ ಜನಪ್ರತಿನಿಧಿಗಳು, ವಿವಿಧ ಸಂಘಟನೆಗಳ ಸದಸ್ಯರು, ವಿವಿಧ ಇಲಾಖೆ ಅಧಿಕಾರಿಗಳು, ಶಾಲಾ-ಕಾಲೇಜ್ ವಿದ್ಯಾರ್ಥಿಗಳು ಸೇರಿದಂತೆ ಸಾವಿರಾರು ಯೋಗಾಸಕ್ತರು ಸರಿಯಾಗಿ 7ಕ್ಕೆ ಸಾಮೂಹಿಕ ಯೋಗಾಭ್ಯಾಸ ಆರಂಭಿಸಿದರು. 50 ನಿಮಿಷದಲ್ಲಿ 20ಕ್ಕೂ ಅಧಿಕ ಆಸನ ಪ್ರದರ್ಶಿಸಿದರು.

ವೈದ್ಯ ಡಾ. ಸತೀಶ ಹೊಂಬಾಳಿ ಅವರು ಸೂಚನೆ ನೀಡುತ್ತ, ಆಸನಗಳ ಮಹತ್ವ ತಿಳಿಸುತ್ತ ಯೋಗಾಭ್ಯಾಸ, ಪ್ರಾಣಾಯಾಮಕ್ಕೆ ಹಿನ್ನೆಲೆ ಧ್ವನಿಯಾದರು. ವೃಕ್ಷಾಸನ, ಪಾದ ಹಸ್ತಾಸನ, ಅರ್ಧ ಚಕ್ರಾಸನ, ತ್ರಿಕೋನಾಸನ, ಭದ್ರಾಸನ, ವಜ್ರಾಸನ, ಅರ್ಧ-ಪೂರ್ಣ ವೃಕ್ಷಾಸನ, ಶಷಾಂಕಾಸನ, ಮಕರಾಸನ, ಭುಜಂಗಾಸನ, ಶಲಭಾಸನ, ಸೇತುಬಂಧಾಸನ, ಅರ್ಧ ಹಲಾಸನ, ಪವನ ವೃತ್ತಾಸನ, ಶವಾಸನ, ಕಪಾಲಭಾತಿಗಳನ್ನು ಯೋಗಾಸಕ್ತರು ಪ್ರದರ್ಶಿಸಿದರು.

ಕೊನೆಯ 10 ನಿಮಿಷದಲ್ಲಿ ಪ್ರಾಣಾಯಾಮ, ಧ್ಯಾನ ಅಭ್ಯಸಿಸಿದ ಯೋಗಾಸಕ್ತರು ನಂತರ ಯೋಗ ಹಾಗೂ ಶಾಂತಿಯ ಸಂಕಲ್ಪ ಗೈದರು. ಗದಗ ಬ್ರಹ್ಮಕುಮಾರಿ ಈಶ್ವರಿ ವಿಶ್ವ ವಿದ್ಯಾಲಯದ ಸಂಚಾಲಕಿ ಜಯಂತಿ ಅಕ್ಕ ಸಂಕಲ್ಪದ ಸಾಲುಗಳನ್ನು ಬೋಧಿಸಿದರು.

ಭೈರನಹಟ್ಟಿ ದೊರೆಸ್ವಾಮಿ ವಿರಕ್ತಮಠದ ಶಾಂತಲಿಂಗ ಸ್ವಾಮೀಜಿ ಮಾತನಾಡಿ, ಸಾವಿರಾರು ವರ್ಷಗಳ ಇತಿಹಾಸವಿರುವ ಯೋಗಕ್ಕೆ ಭಾರತೀಯ ಪರಂಪರೆಯಲ್ಲಿ ಮಹತ್ವದ ಸ್ಥಾನವಿದೆ. ನಮ್ಮ ದೇಹ, ಮನಸ್ಸು ಹಾಗೂ ಬುದ್ಧಿಯನ್ನು ಹತೋಟಿಗೆ ತರಲು, ದಾರಿದ್ರ್ಯ ಕಳೆದು ಚೈತನ್ಯದಿಂದಿರಲು ಸಹಕಾರಿಯಾಗಿರುವ ಯೋಗವನ್ನು ಯುವಜನತೆ ನಿತ್ಯ ಜೀವನದಲ್ಲಿ ಅಳವಡಿಕೊಳ್ಳಬೇಕು ಎಂದರು.

ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ, ಜಿಪಂ ಅಧ್ಯಕ್ಷ ವಾಸಣ್ಣ ಕುರಡಗಿ, ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಗುರಣ್ಣ ಬಳಗಾನೂರ, ನಗರಸಭೆ ಅಧ್ಯಕ್ಷ ಬಿ.ಬಿ. ಅಸೂಟಿ, ಜಿಪಂ ಸಿಇಒ ಮಂಜುನಾಥ ಚವ್ಹಾಣ ಇತರರು ಯೋಗಾಭ್ಯಾಸದಲ್ಲಿ ಪಾಲ್ಗೊಂಡಿದ್ದರು.

ಶಾಸಕ ಎಚ್.ಕೆ. ಪಾಟೀಲ ಅವರು ಸಚಿವರಾಗಿದ್ದ ವೇಳೆ ಅಂತಾರಾಷ್ಟ್ರೀಯ ಯೋಗ ದಿನವನ್ನು ತಪ್ಪಿಸಿಕೊಂಡಿರಲಿಲ್ಲ. ಪ್ರಸಕ್ತ ವರ್ಷ 4ನೇ ಅಂತಾರಾಷ್ಟ್ರೀಯ ದಿನಾಚರಣೆ ಕಾರ್ಯಕ್ರಮದಲ್ಲಿ ಶಾಸಕ ಎಚ್.ಕೆ. ಪಾಟೀಲ, ಜಿಲ್ಲಾಧಿಕಾರಿ ಮನೋಜ್ ಜೈನ್ ಗೈರಾಗಿದ್ದರು.

ಅವಿಭಕ್ತ ಕುಟುಂಬಗಳು ಮರೆಯಾಗಿ ವಿಭಕ್ತ ಕುಟುಂಬಗಳು ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ಸಾರ್ವಜನಿಕರು ಗಳಿಕೆಯ ಬೆನ್ನು ಹತ್ತಿ ಯಾಂತ್ರೀಕೃತ ಬದುಕನ್ನು ನಡೆಸುತ್ತಿದ್ದಾರೆ. ಇದರಿಂದ ಶಾರೀರಿಕವಾಗಿ ತೊಂದರೆ ಅನುಭವಿಸಬೇಕಾಗಿದೆ. ನಿತ್ಯ ಯೋಗದಲ್ಲಿ ತೊಡಗಿಕೊಳ್ಳುವ ಮೂಲಕ ಸ್ವಾಸ್ಥ್ಯ ಸುಂದರ ಬದುಕನ್ನು ರೂಪಿಸಿಕೊಳ್ಳಬೇಕು. – ಶಾಂತಲಿಂಗ ಸ್ವಾಮೀಜಿ, ಭೈರನಹಟ್ಟಿ ದೊರೆಸ್ವಾಮಿ ವಿರಕ್ತಮಠ

Leave a Reply

Your email address will not be published. Required fields are marked *

Back To Top