ಇಂದಿನಿಂದ ದುಬೈಯಲ್ಲಿ ವಿಶ್ವ ತುಳು ಸಮ್ಮೇಳನ

ಮಂಗಳೂರು: ಇದೇ ಪ್ರಥಮ ಬಾರಿಗೆ ಕಡಲಾಚೆಯ ಅರಬರ ನಾಡಿನಲ್ಲಿ ವಿಶ್ವ ತುಳು ಸಮ್ಮೇಳನಕ್ಕೆ ವೇದಿಕೆ ಸಜ್ಜಾಗಿದೆ.
ದುಬೈಯ ಅಲ್‌ನಜಾರ್ ಲೀಸರ್ ಲ್ಯಾಂಡ್‌ನ ಐಸ್‌ರಿಂಕ್ ಒಳಾಂಗಣ ಕ್ರೀಡಾಂಗಣ ನ.23 ಮತ್ತು 24ರಂದು ವಿಶ್ವ ತುಳು ಸಮ್ಮೇಳನದ ಸಂಭ್ರಮ ಸಡಗರವನ್ನು ಸಾಕ್ಷೀಕರಿಸಲಿದ್ದು, ಕರಾವಳಿಯ ಪ್ರಸಿದ್ಧ ಕಲಾ ತಂಡಗಳ 250ಕ್ಕೂ ಅಧಿಕ ಕಲಾವಿದರು ದುಬೈಯತ್ತ ಪಯಣ ಬೆಳೆಸಿದ್ದಾರೆ.

ಎರಡು ದಿನದ ಸಮ್ಮೇಳನದಲ್ಲಿ ತಾಳಮದ್ದಳೆ, ಯಕ್ಷಗಾನ ನಾಟ್ಯ ವೈಭವ, ತುಳು ರಸಮಂಜರಿ, ತುಳು ಸಾಹಿತ್ಯ ಗೋಷ್ಠಿ, ಭೂತಾರಾಧನೆ, ತುಳು ಮಾಧ್ಯಮ ಗೋಷ್ಠಿ, ತುಳು ಕವನ ವಾಚನ, ತುಳು ಚುಟುಕುಗೋಷ್ಠಿ, ತುಳು ರಂಗಭೂಮಿ, ಚಲನಚಿತ್ರ ಗೋಷ್ಠಿ ನಡೆಯಲಿದ್ದು, ಗಣ್ಯರು, ಸಿನಿಮಾ ಕಲಾವಿದರು, ಸಾಹಿತಿಗಳು ಭಾಗವಹಿಸಲಿದ್ದಾರೆ.

ಸಾಂಸ್ಕೃತಿಕ ವೈವಿಧ್ಯತೆ: ನ.23ರಂದು ಅನಿವಾಸಿ ತುಳುವೆರೆ ಕೂಡಾಟ, ತುಳುನಾಡ ಪರ್ಬೊಲು ನೃತ್ಯರೂಪಕ, ತುಳುನಾಡ ಪಿಲಿನಲಿಕೆ, ತುಳು ಯಕ್ಷಗಾನ, ಹಾಸ್ಯ ಪ್ರಹಸನ, ಯಕ್ಷಗಾನ ನಾಟ್ಯ ವೈಭವ, ತುಳು ಜಾನಪದ ಆಚರಣೆ ಗೋಷ್ಠಿ, 24ರಂದು ತುಳುನಾಡ ಗೊಬ್ಬುಲು, ಏಳ್ವೆರ್ ದೆಯ್ಯರ್, ಸತ್ಯನಾಪುರತ ಸಿರಿ- ನೃತ್ಯ ರೂಪಕ, ಹಾಸ್ಯ ಪ್ರಹಸನ, ಯಕ್ಷಗಾನ ತಾಳಮದ್ದಲೆ ಸಹಿತ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

ಬಾಲಿವುಡ್ ನಟ ಸುನೀಲ್ ಶೆಟ್ಟಿ, ಸಂಗೀತ ನಿರ್ದೇಶಕ ಗುರುಕಿರಣ್, ಕೋಸ್ಟಲ್‌ವುಡ್ ಕಲಾವಿದರಾದ ನವೀನ್ ಡಿ. ಪಡೀಲ್, ಅರವಿಂದ್ ಬೋಳಾರ್, ಸತೀಶ್ ಪಟ್ಲ, ಕಿಶೋರ್ ಡಿ. ಶೆಟ್ಟಿ, ಭೋಜರಾಜ್ ವಾಮಂಜೂರು, ವಿಜಯಕುಮಾರ್ ಕೊಡಿಯಾಲ್‌ಬೈಲ್ ಮುಂತಾದವರು ಭಾಗವಹಿಸಲಿದ್ದಾರೆ.

ಉದ್ಘಾಟನೆಗೆ ಡಾ.ಹೆಗ್ಗಡೆ: ಕಡಲಾಯೆರೆದ ತುಳುವೆರ್, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮತ್ತು ಅಖಿಲ ಭಾರತ ತುಳು ಒಕ್ಕೂಟ ಆಯೋಜಿಸಿರುವ ಸಮ್ಮೇಳನವನ್ನು ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಉದ್ಘಾಟಿಸಲಿದ್ದಾರೆ. ಉದ್ಯಮಿ ಬಿ.ಆರ್.ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ. ಮಂಗಳೂರು ಬಿಷಪ್ ಡಾ.ಪೀಟರ್ ಪಾವ್ಲ್ ಸಲ್ಡಾನಾ, ಉದ್ಯಮಿ ರೊನಾಲ್ಡ್ ಕೊಲಾಸೊ, ಬಾಲಿವುಡ್ ನಟ ಸುನೀಲ್ ಶೆಟ್ಟಿ, ಸಚಿವರಾದ ಯು.ಟಿ.ಖಾದರ್, ಜಯಮಾಲ ಮುಂತಾದವರು ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.

ಮುಟ್ಟಾಳೆ ಮೆರುಗು: ಸಮ್ಮೇಳನಕ್ಕೆ ಆಗಮಿಸುವವರಿಗೆ ತುಳುನಾಡಿನ ಕೃಷಿ ಬದುಕಿನ ಸಂಕೇತ ಮುಟ್ಟಾಳೆ ತೊಡಿಸಿ ಸಂಘಟಕರು ಸ್ವಾಗತಿಸಲಿದ್ದಾರೆ. ಬೆಳ್ತಂಗಡಿ ನೆರಿಯ ಗ್ರಾಮದ ಲಿಂಗಪ್ಪ ನೇತೃತ್ವದಲ್ಲಿ ತಯಾರಾದ ಸಾವಿರಕ್ಕೂ ಅಧಿಕ ಮುಟ್ಟಾಳೆ ದುಬೈಗೆ ರವಾನೆಯಾಗಿದೆ. ಸಮ್ಮೇಳನದಲ್ಲಿ ತುಳುನಾಡಿನ ಸಾಂಪ್ರದಾಯಿಕತೆಗೆ ವಿಶೇಷ ಒತ್ತು ನೀಡಲಾಗಿದೆ. ಸಮ್ಮೇಳನದ ಮೊದಲ ದಿನ ಪುರುಷರು ಬಿಳಿ ಪಂಚೆ ಮತ್ತು ಬಿಳಿ ಶರ್ಟ್ ತೊಟ್ಟು ಮಿಂಚಿದರೆ, ಎರಡನೇ ದಿನ ಪುರುಷರಿಗೆ ಜುಬ್ಬಾ, ಕುರ್ತಾ ಧರಿಸುವಂತೆ ಸೂಚನೆ ನೀಡಲಾಗಿದೆ. ಮಹಿಳೆಯರು ಎರಡೂ ದಿನವೂ ಜರಿ ಸೀರೆಯುಟ್ಟು ಮಿಂಚಲಿದ್ದಾರೆ.

ಕಳಸೆ ಸ್ಮರಣಿಕೆ: ಸಮ್ಮೇಳನಕ್ಕೆ ಆಗಮಿಸುವ ಅತಿಥಿಗಳು ಮತ್ತು ಕಲಾವಿದರಿಗೆ ಸಮ್ಮೇಳನದ ಸವಿನೆನಪಿಗಾಗಿ ಕಳಸೆ ಸ್ಮರಣಿಕೆ ನೀಡಲು ಸಂಘಟಕರು ನಿರ್ಧರಿಸಿದ್ದಾರೆ. ಮಂಗಳೂರಿನ ಪಡೀಲ್ ನಿವಾಸಿ ಕಿರಣ್ ಕುಮಾರ್ ಸಿದ್ಧಪಡಿಸಿದ ಕಳಸೆ ಮತ್ತು ಉಡುಪಿಯ ಪರ್ಕಳದಿಂದ 750 ಶಾಲು ದುಬೈಗೆ ರವಾನೆಯಾಗಿದೆ.

ವೇದಿಕೆಗೆ ವೀರರಾಣಿ ಅಬ್ಬಕ್ಕ ಹೆಸರು
ದೇಶ, ವಿದೇಶದ 4 ಸಾವಿರಕ್ಕೂ ಅಧಿಕ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ
ನ.23ರಂದು ತುಳು ಜಾನಪದ ಆಚರಣೆ ಗೋಷ್ಠಿ
ನ.24 ಚಲನಚಿತ್ರ ಬೊಕ್ಕ ರಂಗಭೂಮಿ ಗೋಷ್ಠಿ, ಮಾಧ್ಯಮ ಗೋಷ್ಠಿ